ಶಿಕ್ಷಕ ವೃತ್ತಿ ಪವಿತ್ರವಾದದ್ದು, ಜಾತ್ಯತೀತ ಮನೋಭಾವನೆ ಇರಲಿ: ವೃಷಭೇಂದ್ರಪ್ಪ

KannadaprabhaNewsNetwork | Published : Mar 4, 2025 12:36 AM

ಸಾರಾಂಶ

ಸಮಾಜದಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ಹಾಗೂ ಜವಾಬ್ದಾರಿಯುತ ಸೇವೆಯಾಗಿದೆ. ಶಿಕ್ಷಕರು ಅದನ್ನು ಸರಿಯಾಗಿ ನಿಭಾಯಿಸಬೇಕು. ಜಾತ್ಯತೀತ ಮನೋಭಾವನೆ ಹೊಂದಿರಬೇಕು. ಎಲ್ಲ ವಿದ್ಯಾರ್ಥಿಗಳು ಒಂದೇ ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದು ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ, ದತ್ತಿದಾನಿ ಪ್ರೊ. ವೈ.ವೃಷಭೇಂದ್ರಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ; ದತ್ತಿ ಉಪನ್ಯಾಸ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಸಮಾಜದಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ಹಾಗೂ ಜವಾಬ್ದಾರಿಯುತ ಸೇವೆಯಾಗಿದೆ. ಶಿಕ್ಷಕರು ಅದನ್ನು ಸರಿಯಾಗಿ ನಿಭಾಯಿಸಬೇಕು. ಜಾತ್ಯತೀತ ಮನೋಭಾವನೆ ಹೊಂದಿರಬೇಕು. ಎಲ್ಲ ವಿದ್ಯಾರ್ಥಿಗಳು ಒಂದೇ ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದು ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ, ದತ್ತಿದಾನಿ ಪ್ರೊ. ವೈ.ವೃಷಭೇಂದ್ರಪ್ಪ ಹೇಳಿದರು.

ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ನೂತನ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಸೋಮವಾರ ಮಹಾವಿದ್ಯಾಲಯ ಆವರಣದಲ್ಲಿ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಸಮರ್ಥ ಶಿಕ್ಷಕ-ರಾಷ್ಟ್ರ ರಕ್ಷಕ ವಿಷಯ ಕುರಿತು ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಆತ್ಮವಿಶ್ವಾಸವನ್ನು ತುಂಬುವ ಕೆಲಸ ಮಾಡಬೇಕು. 90 ಅಂಕಗಳನ್ನು ತೆಗೆಯುವವರನ್ನು 95 ಅಂಕ ತೆಗೆಯುವಂತೆ ಮಾಡುವುದು ಸಮರ್ಥ ಶಿಕ್ಷಕ ಅಲ್ಲ. ಬದಲಿಗೆ 35 ಅಂಕ ತೆಗೆಯುವವನು 65 ಅಂಕಗಳ ತೆಗೆಯುವಂತೆ ಮಾಡುವವನೇ ನಿಜವಾದ ಸಮರ್ಥ ಶಿಕ್ಷಕ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳನ್ನು ಬದುಕಿನಲ್ಲಿ ಸ್ವಾವಲಂಬಿಯಾಗುವಂತೆ ಪ್ರೇರೇಪಿಸಬೇಕು. ಪರಿಸರ ಸಂರಕ್ಷಣೆಗಾಗಿ ನಾಡು-ನುಡಿ ಸೇವೆಗಾಗಿ ವಿದ್ಯಾರ್ಥಿಗಳನ್ನು ಬದ್ಧರನ್ನಾಗಿ ಮಾಡಬೇಕು. ವಿದ್ಯಾರ್ಥಿಗಳಲ್ಲಿ ಬುದ್ಧಿಯ ಜೊತೆಗೆ ಭಾವನೆಗಳನ್ನು ಬೆಳೆಸಬೇಕು. ಶಿಕ್ಷಕ ಮನಸ್ಸು ಮಾಡಿದರೆ ಅದ್ಭುತಗಳನ್ನು ಸಾಧಿಸಬಹುದು. ಒಬ್ಬ ಉತ್ತಮ ಶಿಕ್ಷಕನ ಕೈಯಲ್ಲಿರುವ ವಿದ್ಯಾರ್ಥಿ ಉತ್ತಮನೇ ಆಗುತ್ತಾನೆ. ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಶಿಕ್ಷಕರು ಸಹ ಬದಲಾಗಬೇಕಿದೆ. ಹೊಸ ಹೊಸ ಜ್ಞಾನವನ್ನು ಪಡೆಯಬೇಕೆಂದು ಪ್ರಶಿಕ್ಷಣಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.

ನೂತನ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಕೆ.ಎಸ್. ದಿವಾಕರ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಜಿಲ್ಲಾ ಕಸಾಪ ನಿರ್ದೇಶಕಿ ಸತ್ಯಭಾಮ ಮಂಜುನಾಥ್, ನಿರ್ದೇಶಕ ಷಡಕ್ಷರಪ್ಪ ಎಂ.ಬೇತೂರು, ದತ್ತಿ ದಾನಿ ರತ್ನಮ್ಮ ಎಸ್.ಬಿ. ರಂಗನಾಥ್ ಹಾಗೂ ಮಾಗನೂರು ಬಸಪ್ಪ ಶಾಲೆ ಶಿಕ್ಷಕ ಪಿ.ದಿವಾಕರ್, ಪ್ರಶಿಕ್ಷಣಾರ್ಥಿಗಳು, ಇತರರು ಇದ್ದರು.

ದತ್ತಿದಾನಿ ದಿ।। ಪ್ರೊ.ಎಸ್.ಬಿ.ರಂಗನಾಥ್ ಅವರ ಪುತ್ರಿ ನುಡಿನಮನ ಸಲ್ಲಿಸಿದರು. ಪ್ರಶಿಕ್ಷಣಾರ್ಥಿಗಳಾದ ಡಿ.ಬಿ.ರೇಖಾ, ಅಶ್ರಿತಾ ಪ್ರಾರ್ಥಿಸಿ, ಸುಶ್ಮಿತಾ ಸ್ವಾಗತಿಸಿದರು. ಬಿ.ಸಹನಾ ಕಾರ್ಯಕ್ರಮ ನಿರೂಪಣೆ ನಿರ್ವಹಿಸಿದರು. ಬಿ.ಶ್ರೀನಿವಾಸ್ ವಂದಿಸಿದರು.

- - - -3ಕೆಡಿವಿಜಿ31.ಜೆಪಿಜಿ:

ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ದತ್ತಿದಾನಿ ಪ್ರೊ. ವೈ.ವೃಷಭೇಂದ್ರಪ್ಪ ಉದ್ಘಾಟಿಸಿದರು.

Share this article