ಗ್ಯಾರಂಟಿಗಳಿಂದ ಹಣಕಾಸು ಸ್ಥಿತಿ ಹದಗೆಡುತ್ತದೆ ಎನ್ನುತ್ತಿದ್ದವರ ಭವಿಷ್ಯವನ್ನು ಸುಳ್ಳಾಗಿಸಿ ವಿಶ್ವಸಂಸ್ಥೆ ಮುಖ್ಯಸ್ಥರಿಂದಲೇ ಶ್ಲಾಘನೆ ಪಡೆದಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಗ್ಯಾರಂಟಿ ಯೋಜನೆಗಳನ್ನು ಕೊಂಡಾಡಿದ್ದಾರೆ.
ವಿಧಾನಮಂಡಲ : ರಾಜ್ಯ ಸರ್ಕಾರವು ಪ್ರತಿ ವರ್ಷ 90,000 ಕೋಟಿ ರು.ಗೂ ಹೆಚ್ಚು ಹಣವನ್ನು ಕಲ್ಯಾಣ ಕಾರ್ಯಕ್ರಮಗಳ ಮೂಲಕ ನೇರವಾಗಿ ಜನರಿಗೆ ತಲುಪಿಸುತ್ತಿದೆ. ಗ್ಯಾರಂಟಿಗಳಿಂದ ಹಣಕಾಸು ಸ್ಥಿತಿ ಹದಗೆಡುತ್ತದೆ ಎನ್ನುತ್ತಿದ್ದವರ ಭವಿಷ್ಯವನ್ನು ಸುಳ್ಳಾಗಿಸಿ ವಿಶ್ವಸಂಸ್ಥೆ ಮುಖ್ಯಸ್ಥರಿಂದಲೇ ಶ್ಲಾಘನೆ ಪಡೆದಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಗ್ಯಾರಂಟಿ ಯೋಜನೆಗಳನ್ನು ಕೊಂಡಾಡಿದ್ದಾರೆ.
ಸೋಮವಾರ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ‘ಆಡಳಿತ’ ಎಂಬುದು ಅಂತಿಮ ವ್ಯಕ್ತಿಯ ಕಣ್ಣೀರು ಒರೆಸುವ ಅವಕಾಶ ಎಂದು ಜನ ಕಲ್ಯಾಣವನ್ನೇ ಧ್ಯೇಯವಾಗಿಟ್ಟುಕೊಂಡು ಗ್ಯಾರಂಟಿ ಯೋಜನೆಗಳ ಮೂಲಕ ಸರ್ಕಾರವು ಸರ್ವರ ಅಭ್ಯುದಯಕ್ಕಾಗಿ ಕೆಲಸ ಮಾಡುತ್ತಿದೆ ಎಂದರು.ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಲಿದೆ, ಹಣಕಾಸು ಸ್ಥಿತಿ ಹದಗೆಡಲಿದೆ ಎಂದು ಹೇಳಲಾಗುತ್ತಿತ್ತು. ಅಂತಹವರ ಭವಿಷ್ಯ ಸುಳ್ಳಾಗಿಸಿ ವಿಶ್ವಸಂಸ್ಥೆ ಮುಖ್ಯಸ್ಥರೇ ರಾಜ್ಯಕ್ಕೆ ಬಂದು ಗ್ಯಾರಂಟಿ ಯೋಜನೆಗಳನ್ನು ಶ್ಲಾಘನೆ ಮಾಡುವಂತೆ ಸಮರ್ಥವಾಗಿ ಅನುಷ್ಠಾನಗೊಳಿಸಲಾಗಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಬ್ಲಾಗ್‌ನಲ್ಲಿ ‘ವಿಶ್ವಕ್ಕೆ ಒಂದು ನೀಲಿ ನಕ್ಷೆ’, ‘ಕತ್ತಲಲ್ಲಿ ಬೆಳಗಿದ ದ್ವೀಪ’ ಎಂದು ವ್ಯಾಖ್ಯಾನಿಸಿದ್ದು, ವಿಶ್ವದ ಅನೇಕ ಅರ್ಥಶಾಸ್ತ್ರಜ್ಞರು ಹಾಗೂ ವಿಶ್ವವಿದ್ಯಾಲಯಗಳು ಗ್ಯಾರಂಟಿ ಮಾದರಿಯನ್ನು ಅಧ್ಯಯನ ನಡೆಸುವಂತಾಗಿದೆ ಎಂದರು.
ಕೇವಲ ಗ್ಯಾರಂಟಿಗಳಿಗೆ ಸೀಮಿತವಾಗದೆ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ರೂಪಿಸಿದ್ದು, ರಾಜ್ಯದ ಆರ್ಥಿಕತೆಯನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಕೊಂಡೊಯ್ಯಲು ಮುಂದಡಿ ಇಡಲಾಗಿದೆ. ಅಲ್ಲದೆ, ತನ್ನೆಲ್ಲಾ ಆರ್ಥಿಕ ಸೀಮಿತತೆ ನಡುವೆಯೂ ಏಳನೇ ಆಯೋಗದ ಶಿಫಾರಸು ಜಾರಿ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೆ 344 ಘೋಷಣೆಗಳ ಪೈಕಿ ಬರೋಬ್ಬರಿ 331 ಘೋಷಣೆಗಳ ಅನುಷ್ಠಾನಕ್ಕೆ ಸರ್ಕಾರಿ ಆದೇಶ ಮಾಡಲಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ.ಪಂಚ ಗ್ಯಾರಂಟಿಗಳಿಗೆ ಪ್ರತಿ ವರ್ಷ 52,000 ಕೋಟಿ ರು. ಮೀಸಲಿಟ್ಟಿದ್ದು, ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ 70,000 ಕೋಟಿ ರು. ವೆಚ್ಚ ಮಾಡಿದೆ. ಇದಲ್ಲದೆ ರೈತರ ಕೃಷಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್, ವಿವಿಧ ಇಲಾಖೆಗಳ ಅಡಿ ನೀಡಿರುವ ನೇರ ನಗದು ಯೋಜನೆ, ಸಬ್ಸಿಡಿ ಹಾಗೂ ಪ್ರೋತ್ಸಾಹ ಧನಗಳ ಮೂಲಕ 1.25 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಪ್ರತಿ ವರ್ಷ 90,000 ಕೋಟಿ ರು.ಗಳಷ್ಟು ನೇರ ಸಹಾಯ ಒದಗಿಸುತ್ತಿದೆ. ಇಷ್ಟಾದರೂ ಆರ್ಥಿಕತೆ ಹಾಳಾಗದೆ ಹೂಡಿಕೆ ಆಕರ್ಷಿಸುವಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 10.27 ಲಕ್ಷ ಕೋಟಿ ರು. ಹೂಡಿಕೆಗೆ ಒಡಂಬಡಿಕೆಯಾಗಿದ್ದು ಶೇ.75 ರಷ್ಟು ಹೂಡಿಕೆ ಒಪ್ಪಂದಗಳಾಗಿವೆ. ಜಿಎಸ್‌ಟಿ ಬೆಳವಣಿಗೆ ದರ ಉತ್ತಮವಾಗಿದೆ. ನೆರೆಯ ರಾಜ್ಯಗಳಿಗಿಂತ ಹೆಚ್ಚು ಎಂಬಂತೆ ಬಜೆಟ್‌ನ ಶೇ.15.01ರಷ್ಟು ಹಣವನ್ನು ಬಂಡವಾಳ ವೆಚ್ಚವಾಗಿ ವಿನಿಯೋಗಿಸಲಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ.
19 ತಿಂಗಳಲ್ಲಿ ಕಾನೂನು-ಸುವ್ಯವಸ್ಥೆ ಸಮಸ್ಯೆ ಉದ್ಭವಿಸಿಲ್ಲ:
ಕಳೆದ 19 ತಿಂಗಳಲ್ಲಿ ಗಂಭೀರವಾದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಉದ್ಭವಿಸಿಲ್ಲ. ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ ಕೆಲಸ ಮಾಡುತ್ತಿವೆ ಎನ್ನುವ ಮೂಲಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಸಮಸ್ಯೆ ಇಲ್ಲ ಎಂದು ಗೆಹಲೋತ್ ಶ್ಲಾಘಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇಡೀ ದೇಶದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯ ಪೊಲೀಸ್ ಇಲಾಖೆಯು ನಿರಂತರವಾಗಿ ಜಾಗೃತಿ ಮೂಡಿಸಿ ಅಪರಾಧಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚುವ ಕೆಲಸ ಮಾಡುತ್ತಿದೆ. ಹಾಗಾಗಿ ಈ ಪ್ರಕರಣಗಳಲ್ಲೂ ಇಳಿಕೆ ಕಾಣುತ್ತಿದೆ ಎಂದರು. ತನ್ಮೂಲಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ರಾಜ್ಯಪಾಲರ ಭಾಷಣದ ಮೂಲಕ ಸರ್ಕಾರ ತಿರುಗೇಟು ನೀಡಿದೆ ಎನ್ನಲಾಗಿದೆ.
ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ:
ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ಸ್ಥಾಪನೆಗೆ ಪ್ರಕ್ರಿಯೆ ಶುರುವಾಗಿದ್ದು, 27,000 ಕೋಟಿ ರು. ವೆಚ್ಚದಲ್ಲಿ ಪೆರಿಫೆರಲ್ ರಿಂಗ್ ರಸ್ತೆಗೆ ಭೂಸ್ವಾಧೀನ ಪ್ರಕ್ರಿಯೆ ಶುರು ಮಾಡಲಾಗಿದೆ. 148.17 ಕಿ.ಮೀ. ಉದ್ದದ ಬೆಂಗಳೂರು ಉಪನಗರ ರೈಲ್ವೆ, ನಗರದ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಯೋಜನೆಗಳು, ಉತ್ತರ ಕರ್ನಾಟಕ ನಗರಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ.
ಇನ್ನು ಕಂದಾಯ ಸಮಸ್ಯೆಗಳ ಇತ್ಯರ್ಥ, 30 ಲಕ್ಷಕ್ಕೂ ಹೆಚ್ಚು ಅನಧಿಕೃತ ಆಸ್ತಿಗಳಿಗೆ ಇ-ಖಾತಾ ನಮೂನೆ 3ಬಿ ನೀಡಲು ಪ್ರಾರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗಗಳಿಗೂ ಈ ಸೌಲಭ್ಯ ವಿಸ್ತರಿಸಲಾಗುವುದು. ಕೃಷಿ, ವಸತಿ, ಜಲಸಂಪನ್ಮೂಲ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲಾ ಇಲಾಖೆಗಳಲ್ಲೂ ಸಮಗ್ರ ಅಭಿವೃದ್ಧಿ ಹಾಗೂ ಜನಪರ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ ಎಂದು ತಮ್ಮ 39 ಪುಟಗಳ ಭಾಷಣದಲ್ಲಿ ವಿಸ್ತಾರವಾಗಿ ವಿವರಿಸಿದ್ದಾರೆ.
ಪ್ರಾದೇಶಿಕ ಅಸಮಾನತೆ ನಿವಾರಣೆ:
2002ರಲ್ಲಿ ಡಾ.ಡಿ.ಎಂ. ನಂಜುಂಡಪ್ಪ ಅಧ್ಯಕ್ಷತೆಯಲ್ಲಿ ನೀಡಿದ್ದ ವರದಿ ಅನ್ವಯ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ 37,662 ಕೋಟಿ ರು. ಬಿಡುಗಡೆ ಮಾಡಿದ್ದು, ಮುಂದುವರಿದ ಪ್ರಾದೇಶಿಕ ಅಸಮತೋಲನ ಕುರಿತು ವರದಿ ಸಲ್ಲಿಸಲು ಆರ್ಥಿಕ ತಜ್ಞ ಡಾ.ಗೋವಿಂದರಾಜ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿ ಈ ವರ್ಷವೇ ತನ್ನ ವರದಿ ಸಲ್ಲಿಸಲಿದ್ದು, ವರದಿ ಆಧರಿಸಿ ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ಸಮತೋಲನ ಸಾಧಿಸಲಾಗುವುದು ಎಂದು ರಾಜ್ಯಪಾಲರು ಹೇಳಿದ್ದಾರೆ.
ಗ್ಯಾರಂಟಿಗಳ ಸಾಧನೆ ಅಂಕಿ-ಅಂಶ
ಗೃಹಜ್ಯೋತಿ ಯೋಜನೆಯಡಿ 1.62 ಕೋಟಿ ಗ್ರಾಹಕರಿಗೆ 17,290 ಕೋಟಿ ರು. ಸಹಾಧಯನ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ 1.28 ಕೋಟಿ ಪಡಿತರ ಚೀಟಿಗಳ 4.48 ಕೋಟಿ ಸದಸ್ಯರಿಗೆ 5 ಕೆ.ಜಿ. ಧಾನ್ಯ ಹಾಗೂ ಹೆಚ್ಚುವರಿ 5 ಕೆ.ಜಿ.ಧಾನ್ಯದ ಬದಲಿಗೆ ತಲಾ 170 ರು.ಗಳಂತೆ 10,009 ಕೋಟಿ ರು. ಖರ್ಚು ಮಾಡಲಾಗಿದೆ. ಇದೀಗ ಭಾರತೀಯ ಆಹಾರ ನಿಗಮ ಅಕ್ಕಿ ನೀಡಲು ಒಪ್ಪಿರುವುದರಿಂದ ತಲಾ 10 ಕೆ.ಜಿ. ಆಹಾರ ಧಾನ್ಯ ನೀಡಲಾಗುತ್ತದೆ.
ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2,00 ರು.ಗಳಂತೆ 1.26 ಕೋಟಿ ಫಲಾನುಭವಿಗಳಿಗೆ ಈವರಗೆ 36,000 ಕೋಟಿ ರು.ಗಳನ್ನು ನೇರವಾಗಿ ಫಲಾನುವಭವಿಗಳ ಖಾತೆಗೆ ಹಾಕಲಾಗಿದೆ. ಈಗ ಲಿಂಗತ್ವ ಅಲ್ಪಸಂಖ್ಯಾತರಿಗೂ ವಿಸ್ತರಿಸಲಾಗಿದೆ. ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕೆ 8,215 ಕೋಟಿ ರು. ಅನುದಾನ ಹಂಚಿಕೆ ಮಾಡಲಾಗಿದೆ ಎಂದು ವಿವಿಧ ಗ್ಯಾರಂಟಿ ಯೋಜನೆಗಳ ಸಾಧನೆಯ ಅಂಕಿ-ಅಂಶಗಳನ್ನು ರಾಜ್ಯಪಾಲರು ಬಿಚ್ಚಿಟ್ಟಿದ್ದಾರೆ.
ಮೈಕ್ರೋಫೈನಾನ್ಸ್ ಸುಗ್ರೀವಾಜ್ಞೆ ತಿರಸ್ಕರಿಸಿದ್ದ ರಾಜ್ಯಪಾಲರಿಂದಲೇ ಸಮರ್ಥನೆ:
ಬಲವಂತದ ಸಾಲ ವಸೂಲಿ ವಿರುದ್ಧ ರಾಜ್ಯ ಸರ್ಕಾರ ಹೊರಡಿಸಿದ್ದ ಮೈಕ್ರೋಫೈನಾನ್ಸ್ ಸುಗ್ರೀವಾಜ್ಞೆಯನ್ನು ತಿರಸ್ಕರಿಸಿದ್ದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಈ ಸುಗ್ರೀವಾಜ್ಞೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸಮಾಜದ ಆರ್ಥಿಕ ದುರ್ಬಲ ವರ್ಗದ ಜನತೆಯಿಂದ ಸಾಲ ವಸೂಲಾತಿಯಲ್ಲಿ ಕಿರುಕುಳ, ಹಿಂಸೆ ಮತ್ತು ಒತ್ತಡದ ಹಲವಾರು ಘಟನೆಗಳು ಬೆಳಕಿಗೆ ಬಂದಿವೆ. ಹೀಗಾಗಿ ರಾಜ್ಯದಲ್ಲಿ ಕಿರು ಸಾಲ ಮತ್ತು ಸಣ್ಣ ಸಾಲ ವಸೂಲಾತಿಯಲ್ಲಿ ಕಿರುಕುಳ, ಹಿಂಸೆ ಮತ್ತು ಒತ್ತಡ ತಡೆಯುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಗಂಭೀರ ಕ್ರಮಗಳನ್ನು ಕೈಗೊಳ್ಳಲು ಕಿರುಕುಳ ನೀಡುವ ವ್ಯಕ್ತಿಗಳಿಗೆ ಕನಿಷ್ಠ 6 ತಿಂಗಳು ಮತ್ತು ಗರಿಷ್ಠ 10 ವರ್ಷವರೆಗೆ ಶಿಕ್ಷೆ, 5 ಲಕ್ಷ ದಂಡ ವಿಧಿಸಲು ಅವಕಾಶ ಕಲ್ಪಿಸುವ ಸುಗ್ರೀವಾಜ್ಞೆಯನ್ನು ನನ್ನ ಸರ್ಕಾರ ಅನುಷ್ಠಾನಗೊಳಿಸಿದೆ. ಕಿರು ಸಾಲ ವಸೂಲಾತಿಯ ಕಿರುಕುಳ ತಡೆಯಲು ಶಾಸನಾತ್ಮಕ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಿದ್ದಾರೆ.
ರಾಜ್ಯಪಾಲರ ಭಾಷಣದಲ್ಲೇನಿದೆ?
- ವಿವಿಧ ವಿವಿಗಳು ಗ್ಯಾರಂಟಿ ಮಾದರಿಯನ್ನು ಅಧ್ಯಯನ ನಡೆಸುವಂತಾಗಿದೆ
- ರಾಜ್ಯವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಕೊಂಡೊಯ್ಯಲು ಮುಂದಡಿ
- ಕಳೆದ 19 ತಿಂಗಳಲ್ಲಿ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸಮಸ್ಯೆ ಉದ್ಭವಿಸಿಲ್ಲ
- ನಂಜುಂಡಪ್ಪ ವರದಿಯ ಜಾರಿ ಮಾಡಿ ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಕ್ರಮ
- ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಪ್ರಕ್ರಿಯೆ ಶುರು
ರಾಜ್ಯಪಾಲರ ಬಾಯಲ್ಲಿ ಸರ್ಕಾರ ಸುಳ್ಳು ಹೇಳಿಸಿದೆ
ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ ಶೂನ್ಯ ಸಾಧನೆ ತೋರಿದ ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಅಧಿಕಾರ ಕಿತ್ತುಕೊಂಡು ಅವರಿಂದಲೇ ಸುಳ್ಳು ಹೇಳಿಸಿದೆ. ಈ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಶಾಸಕರ ಜೇಬು ಮತ್ತು ಮನೆ ತುಂಬಿದೆಯೇ ಹೊರತು ರಾಜ್ಯದ ಅಭಿವೃದ್ಧಿಯಾಗಿಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗಿದೆ. ರಾಜ್ಯಪಾಲರನ್ನು ಹೀಯಾಳಿಸುವ ಮಾತಾಡುವುದಲ್ಲದೆ, ಅವರ ಅಧಿಕಾರಗಳನ್ನು ಕಿತ್ತುಕೊಂಡಿದೆ. ಈಗ ಅವರ ಕೈಯಲ್ಲೇ ನಾವು ನಂಬರ್ ಒನ್ ಎಂಬ ರೀತಿಯಲ್ಲಿ ಹೇಳಿಸಲಾಗಿದೆ.
- ಆರ್.ಅಶೋಕ್, ವಿಧಾನಸಭೆ ಪ್ರತಿಪಕ್ಷದ ನಾಯಕ
ಹಿಂದಿನ ಸರ್ಕಾರದ ಭ್ರಷ್ಟಾಚಾರ ತಾರ್ಕಿಕ
ಅಂತ್ಯಕ್ಕೆ: ಗೌರ್ನರ್‌ರಾಜ್ಯದಲ್ಲಿ ಮಧ್ಯವರ್ತಿ ರಹಿತ ಪಾರದರ್ಶಕ ವ್ಯವಸ್ಥೆಯನ್ನು ನನ್ನ ಸರ್ಕಾರ ಜಾರಿ ಮಾಡಿದೆ. ಜತೆಗೆ ಹಿಂದಿನ ಸರ್ಕಾರದ ಅವಧಿಯ ಭ್ರಷ್ಟಾಚಾರಗಳನ್ನು ತಾರ್ಕಿಕ ಅಂತ್ಯಕ್ಕೆ ತರಲಾಗುವುದು ಎಂದು ರಾಜ್ಯಪಾಲರು ಹೇಳಿದ್ದಾರೆ. ತನ್ಮೂಲಕ ಹಿಂದಿನ ಬಿಜೆಪಿ ಸರ್ಕಾರದ ಹಗರಣಗಳು, ಭ್ರಷ್ಟಾಚಾರ ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವುದಾಗಿ ರಾಜ್ಯ ಸರ್ಕಾರ ರಾಜ್ಯಪಾಲರ ಮೂಲಕ ಸಂದೇಶ ನೀಡಿದೆ.