ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಚಂದ್ರವಳ್ಳಿಯ ಎಸ್‌ಜೆಎಂ ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಪ್ರೊ.ಜಿ.ಎನ್.ಬಸವರಾಜಪ್ಪನವರಿಗೆ ಏರ್ಪಡಿಸಲಾದ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಕ ರಾಷ್ಟ್ರದ ಬೆನ್ನೆಲುಬು. ಸಮಾಜದ ಅಂಕು ಡೊಂಕುಗಳನ್ನು ತಿದ್ದುವುದು ಆತನ ನೈತಿಕ ಹಾಗೂ ಸಾಮಾಜಿಕ ಜವಾಬ್ದಾರಿಯಾಗಿದೆ. ಉತ್ತಮ ಶಿಕ್ಷಕ ಉತ್ತಮ ನಾಗರೀಕನನ್ನು ಸೃಷ್ಟಿಸುತ್ತಾನೆ ಎಂದರು.
ರಾಣೆಬೆನ್ನೂರು ಎಸ್‍ಜೆಎಂ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಆರ್.ವಿ.ಹೆಗಡಾಳ್ ಮಾತನಾಡಿ, ನನ್ನ 30 ವರ್ಷಗಳ ವೃತ್ತಿಜೀವನದಲ್ಲಿ ನೇರ ನಡೆನುಡಿಗಳನ್ನಾಡುವಂತಹ ಸಹೋದ್ಯೋಗಿ ಮಿತ್ರರಲ್ಲಿ ಜಿ.ಎನ್.ಬಸವರಾಜಪ್ಪ ಅವಿಸ್ಮರಣೀಯರು. ಸುಮಾರು 15 ವರ್ಷಗಳ ಅವರ ಒಡನಾಟದಲ್ಲಿ ಅವರಿಂದ ನಾನು ಕಲಿತ ಬದುಕಿನ ಪಾಠಗಳು ಬಹಳ. ಎಂತಹ ಕಠಿಣ ಸಂದರ್ಭದಲ್ಲೂ ಅವರು ಕೊಡುತ್ತಿದ್ದ ಸಲಹೆ, ಧೈರ್ಯ ನನ್ನ ಮೇಲೆ ಬಹಳಷ್ಟು ಪರಿಣಾಮ ಬೀರಿವೆ. ಯಾವುದೇ ಶೈಕ್ಷಣಿಕ ಕಾರ್ಯಕ್ರಮಗಳಾಗಲಿ ಶಿಸ್ತು ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳುವ ಇವರ ದೊಡ್ಡಗುಣವನ್ನು ನಾನು ಅವರಿಂದ ಕಲಿತೆ.ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಕೆ.ಮಲ್ಲಿಕಾರ್ಜುನ, ಸಂತೆಬೆನ್ನೂರು ಸರ್ಕಾರಿ ಕಾಲೇಜಿನ ಪ್ರಾಚಾರ್ಯ ಗಿರಿಸ್ವಾಮಿ ಮಾತನಾಡಿ, ಬಸವರಾಜಪ್ಪ ಸದಾ ಲವಲವಿಕೆಯಿಂದ ಎಲ್ಲರನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ಮಾತನಾಡಿಸುತ್ತ ಎಲ್ಲರ ಮನಸ್ಸನ್ನು ಗೆಲ್ಲುವ ಒಬ್ಬ ಸ್ನೇಹಜೀವಿ. ವೃತ್ತಿ ಬದುಕಿನಾಚೆಗೆ ಇವರ ಪ್ರವೃತ್ತಿಗಳು ನಮ್ಮೆಲ್ಲರಿಗೂ ಅನುಕರಣೀಯ ಎಂದು ಬಣ್ಣಿಸಿದರು.
ಕಾಲೇಜಿನ ವಿಶ್ರಾಂತ ಪ್ರಾಚಾರ್ಯರುಗಳಾದ ಹೆಚ್.ಸಿ ಗಂಗಾಂಬಿಕೆ, ಡಾ.ಕೆ.ಸಿ ರಮೇಶ್, ಸಿ. ಬಸವರಾಜಪ್ಪ, ವಿಶ್ರಾಂತ ಪ್ರಾಧ್ಯಾಪಕರುಗಳಾದ ಡಾ.ಎಂ.ಕೆ ಪ್ರಭುದೇವ್, ಕೊಟ್ರೇಶಪ್ಪ, ಹೆಚ್.ಕೆ. ಶಿವಪ್ಪ, ಎಸ್.ಬಿ. ಶಿವಕುಮಾರ್, ಹಿರಿಯ ಸಂಶೋಧಕರಾದ ಡಾ.ಬಿ ರಾಜಶೇಖರಪ್ಪ, ನಿವೃತ್ತ ಪ್ರಾಧ್ಯಾಪಕರುಗಳಾದ ಡಾ.ಪಿ ಯಶೋದ, ಪ್ರೊ. ಸಿ.ಎಂ. ಚಂದ್ರಪ್ಪ, ಪ್ರೊ.ಶ್ರೀನಿವಾಸರೆಡ್ಡಿ, ಪ್ರೊ. ವಿ.ಟಿ. ಹಿರೇಮಠ್, ಕಾಲೇಜಿನ ಬೋಧಕ ಹಾಗು ಬೋಧಕೇತರ ಸಿಬ್ಬಂದಿ ಇದ್ದರು.