ಟೀಮ್ ಒನ್ ಟಚ್ ಚಾಂಪಿಯನ್

KannadaprabhaNewsNetwork |  
Published : Jan 18, 2026, 03:15 AM IST
ಚಿತ್ರ : 15ಎಂಡಿಕೆ6 :  ಟೀಮ್ ಒನ್ ಟಚ್ ತಂಡ ಚಾಂಪಿಯನ್ ಪ್ರಶಸ್ತಿ ಗಳಿಸಿತು.  | Kannada Prabha

ಸಾರಾಂಶ

ಮಂಜಿನ ನಗರಿ ಮಡಿಕೇರಿಯ ಗಾಂಧಿ ಮೈದಾನವು ಕಳೆದ ಎರಡು ದಿನಗಳ ಕಾಲ ಕ್ರೀಡೆ, ತಂತ್ರಜ್ಞಾನ ಹಾಗೂ ಸ್ನೇಹಸಂಬಂಧಗಳ ಸಂಗಮಕ್ಕೆ ಸಾಕ್ಷಿಯಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಂಜಿನ ನಗರಿ ಮಡಿಕೇರಿಯ ಗಾಂಧಿ ಮೈದಾನವು ಕಳೆದ ಎರಡು ದಿನಗಳ ಕಾಲ ಕ್ರೀಡೆ, ತಂತ್ರಜ್ಞಾನ ಹಾಗೂ ಸ್ನೇಹಸಂಬಂಧಗಳ ಸಂಗಮಕ್ಕೆ ಸಾಕ್ಷಿಯಾಯಿತು. ಶ್ರೀ ರಾಜೇಶ್ವರಿ ವಿದ್ಯಾಲಯದ ಆಶ್ರಯದಲ್ಲಿ ಆಯೋಜಿಸಲಾದ ಎಸ್‌ಆರ್‌ವಿ ಫುಟ್ಬಾಲ್ ಚಾಂಪಿಯನ್ ಲೀಗ್ ಸೀಸನ್–3, ಮೋಟೋ ಎಕ್ಸ್ಪೋ ಹಾಗೂ ಹಳೆ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮಗಳು ಅಪಾರ ಜನಸಂದಣಿ, ಉತ್ಸಾಹ ಹಾಗೂ ಸಂಭ್ರಮದ ವಾತಾವರಣದಲ್ಲಿ ಯಶಸ್ವಿಯಾಗಿ ನಡೆಯಿತು.

ಹೊನಲು ಬೆಳಕಿನ ವ್ಯವಸ್ಥೆಯೊಂದಿಗೆ ನಡೆದ ಎಸ್‌ಆರ್‌ವಿ ಫುಟ್ಬಾಲ್ ಚಾಂಪಿಯನ್ ಲೀಗ್ ಸೀಸನ್–3ರ ಫೈನಲ್ ಪಂದ್ಯದಲ್ಲಿ ಟೀಮ್ ಒನ್ ಟಚ್ ತಂಡವು ಟೀಮ್ ಅಶ್ ರನ್ನರ್ಸ್ ವಿರುದ್ಧ 1–0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಟೀಮ್ ಅಶ್ ರನ್ನರ್ಸ್ ರನ್ನರ್‌ ಅಪ್ ಸ್ಥಾನ ಪಡೆದುಕೊಂಡಿತು. ಮೂರನೇ ಸ್ಥಾನವನ್ನು ಸ್ಟ್ರೈಕರ್ಸ್ ಸ್ಕ್ವಾಡ್, ನಾಲ್ಕನೇ ಸ್ಥಾನವನ್ನು ಆರ್‌ಆರ್‌ಎಫ್‌ಸಿ ತಂಡ ಪಡೆದುಕೊಂಡವು.

ಒಟ್ಟು 12 ತಂಡಗಳು ಟ್ರೋಫಿಗಾಗಿ ಸೆಣಸಾಡಿದ ಈ ಲೀಗ್‌ನಲ್ಲಿ ನೇರ ಪ್ರಸಾರ, ಶಿಸ್ತಿನ ಸಂಘಟನೆ ಹಾಗೂ ಕ್ರೀಡಾಸ್ಫೂರ್ತಿ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

ಮೊದಲ ಕ್ವಾಲಿಫೈಯರ್‌ನಲ್ಲಿ ಟೀಮ್ ಅಶ್ ರನ್ನರ್ಸ್ 1–0 ಗೋಲುಗಳ ಜಯದೊಂದಿಗೆ ನೇರವಾಗಿ ಫೈನಲ್ ಪ್ರವೇಶಿಸಿತು.

ಎಲಿಮಿನೇಟರ್ ಪಂದ್ಯದಲ್ಲಿ ಸ್ಟ್ರೈಕರ್ಸ್ ಸ್ಕ್ವಾಡ್ ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಆರ್‌ಆರ್‌ಎಫ್‌ಸಿ ತಂಡವನ್ನು 3–2 ಅಂತರದಲ್ಲಿ ಮಣಿಸಿ ಕ್ವಾಲಿಫೈಯರ್‌ಗೆ ಲಗ್ಗೆ ಇಟ್ಟಿತು.

ದ್ವಿತೀಯ ಕ್ವಾಲಿಫೈಯರ್‌ನಲ್ಲಿ ಟೀಮ್ ಒನ್ ಟಚ್ ಹಾಗೂ ಸ್ಟ್ರೈಕರ್ಸ್ ಸ್ಕ್ವಾಡ್ ನಡುವಿನ ಪಂದ್ಯ 1–1 ಸಮಬಲದಲ್ಲಿ ಅಂತ್ಯಗೊಂಡು, ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಟೀಮ್ ಒನ್ ಟಚ್ 5–4 ಅಂತರದಲ್ಲಿ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು.

ಮೋಟೋ ಎಕ್ಸ್ಪೋಗೆ ಜನಾಕರ್ಷಣೆ:

ಫುಟ್ಬಾಲ್ ಪಂದ್ಯಾವಳಿಯೊಂದಿಗೆ ಆಯೋಜಿಸಲಾದ ಮೋಟೋ ಎಕ್ಸ್ಪೋ ಕಾರ್ಯಕ್ರಮವು ಯುವಜನತೆಯಲ್ಲಿ ವಿಶೇಷ ಆಸಕ್ತಿ ಮೂಡಿಸಿತು. ವಿವಿಧ ಹೊಸ ಮಾದರಿಯ ಬೈಕ್‌ಗಳು, ತಂತ್ರಜ್ಞಾನಾಧಾರಿತ ವಾಹನಗಳು ಹಾಗೂ ಆಧುನಿಕ ಸುರಕ್ಷತಾ ವೈಶಿಷ್ಟ್ಯಗಳ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಭಾರಿ ಸ್ಪಂದನೆ ವ್ಯಕ್ತವಾಯಿತು. ಆಟೋಮೊಬೈಲ್ ಕ್ಷೇತ್ರದ ಬೆಳವಣಿಗೆ, ಇಂಧನ ದಕ್ಷತೆ ಹಾಗೂ ಭವಿಷ್ಯದ ವಾಹನ ತಂತ್ರಜ್ಞಾನ ಕುರಿತು ಮಾಹಿತಿ ನೀಡಲಾಯಿತು.

ಹಳೆ ವಿದ್ಯಾರ್ಥಿಗಳ ಸಮಾಗಮ:

ಇದೇ ಸಂದರ್ಭ ಶ್ರೀ ರಾಜೇಶ್ವರಿ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿವಿಧ ಬ್ಯಾಚ್‌ಗಳ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಹಳೆಯ ದಿನಗಳ ನೆನಪುಗಳನ್ನು ಹಂಚಿಕೊಂಡರು. ಶಾಲೆಯು ನೀಡಿದ ಶಿಕ್ಷಣ, ಶಿಸ್ತು ಹಾಗೂ ಮೌಲ್ಯಗಳ ಕುರಿತು ಮಾತನಾಡಿ, ಪ್ರಸ್ತುತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಈ ಸಮಾಗಮ ಭಾವನಾತ್ಮಕ ಹಾಗೂ ಸ್ನೇಹಪೂರ್ಣ ವಾತಾವರಣವನ್ನು ಸೃಷ್ಟಿಸಿತು.

ಸಮಾರೋಪ ಸಮಾರಂಭ:

ಶ್ರೀ ರಾಜೇಶ್ವರಿ ವಿದ್ಯಾಲಯದ ಕಾರ್ಯದರ್ಶಿ ಸಚಿನ್ ವಾಸುದೇವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಕ್ರೀಡೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿದ್ದು, ಶಿಸ್ತು, ನಾಯಕತ್ವ ಹಾಗೂ ಹೊಂದಾಣಿಕೆಯ ಗುಣಗಳನ್ನು ಬೆಳೆಸುತ್ತದೆ. ಯುವಜನತೆ ಕ್ರೀಡೆ ಹಾಗೂ ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಶಾಲೆಯ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ನೇರ ಪ್ರಸಾರದೊಂದಿಗೆ ಕ್ರೀಡಾಕೂಟ, ಮೋಟೋ ಎಕ್ಸ್ಪೋ ಹಾಗೂ ಹಳೆ ವಿದ್ಯಾರ್ಥಿಗಳ ಸಮಾಗಮವನ್ನು ಒಂದೇ ವೇದಿಕೆಯಲ್ಲಿ ಆಯೋಜಿಸುವುದು ಸವಾಲಿನ ಕಾರ್ಯವಾಗಿದ್ದು, ಸಂಘಟಕರ ಶ್ರಮ ಶ್ಲಾಘನೀಯ ಎಂದರು.

ಕಾರ್ಯದರ್ಶಿ ಸಚಿನ್ ವಾಸುದೇವ್ ಮಾತನಾಡಿ, ಯುವಜನತೆ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಕ್ರೀಡೆ ಮತ್ತು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಲಾ ಮಕ್ಕಳ ವಿಶೇಷ ಪಂದ್ಯಾವಳಿ:

ಎಸ್‌ಆರ್‌ವಿ ಫುಟ್ಬಾಲ್ ವತಿಯಿಂದ ಆಯೋಜಿಸಲಾದ ಶಾಲಾ ಮಕ್ಕಳ ಫುಟ್ಬಾಲ್ ಪಂದ್ಯಾವಳಿಯಲ್ಲಿ ಅತಿಥೇಯ ಎಸ್‌ಆರ್‌ವಿ ವಿದ್ಯಾಲಯ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಸಂತ ಜೋಸೆಫರ ಶಾಲೆ ರನ್ನರ್ಸ್-ಅಪ್ ಸ್ಥಾನ ಪಡೆದುಕೊಂಡಿತು.

ಪಂದ್ಯಗಳಿಗೆ ತೀರ್ಪುಗಾರಿಕೆಯನ್ನು ಉನ್ನೈಸ್ ಎಂ.ಎಂ. ಹಾಗೂ ನರಸಿಂಹ (ನಾಣಿ) ನಿಶಾದ್ ನಿರ್ವಹಿಸಿದರು. ವೀಕ್ಷಕ ವಿವರಣೆಯನ್ನು ರಾಹುಲ್ ಹಾಗೂ ಮಂದಣ್ಣ ನೀಡಿದರು. ಲೈವ್ ಸ್ಕೋರಿಂಗ್ ಅನ್ನು ಅಶೋಕ್ (ಮಡಿಕೇರಿ) ಹಾಗೂ ಅಜಿತ್ ನಡೆಸಿಕೊಟ್ಟರು.

ಬಹುಮಾನ ವಿತರಣೆ ಸಮಾರಂಭದಲ್ಲಿ ಗಣ್ಯರು ಸೇರಿದಂತೆ ಎಸ್ ಆರ್ ವಿನ ಆಯೋಜಕರಾದ ಸಚಿನ್ ವಾಸುದೇವ್, ಲೋಹಿತ್, ದಿನೇಶ್, ಅಶೋಕ್, ಲಿಖಿತ್, ಶಾಹಿದ್, ಶಮನ್, ಮನೋಜ್,ಅಶ್ರಫ್, ಮನು ಉಪಸ್ಥಿತರಿದ್ದರು.ವೈಯಕ್ತಿಕ ಪ್ರಶಸ್ತಿಗಳು:ಹೈ ಸ್ಕೋರರ್ – ರೌಫ್ (ಟೀಮ್ ಅಶ್)ಬೆಸ್ಟ್ ಡಿಫೆಂಡರ್ – ಅಭಯ್ (ಟೀಮ್ ಅಶ್)ಉತ್ತಮ ಗೋಲ್ ಕೀಪರ್ – ಅಶ್ರಫ್ (ಟೀಮ್ ಒನ್ ಟಚ್)ಉದಯೋನ್ಮುಖ ಆಟಗಾರ– ಸೂಫಿಯನ್ (ಆರ್‌ಆರ್‌ಎಫ್‌ಸಿ)ಸರಣಿ ಪುರುಷೋತ್ತಮ–ಶಮನ್ (ಟೀಮ್ ಒನ್ ಟಚ್)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾಡಳಿತ ಸಂಧಾನ ಸಭೆ ವಿಫಲ; ನಾಳೆ ಮಹಾಲಿಂಗಪುರ ಬಂದ್
ಕ್ರೀಡಾ ಪತ್ರಿಕೋದ್ಯಮದಲ್ಲಿ ನೈತಿಕತೆ, ಪ್ರಾಮಾಣಿಕತೆಯೇ ವರದಿಯ ಮೂಲ ತತ್ವವಾಗಬೇಕು : ಸ್ಟಾನ್ ರಾಯನ್