)
ಕನ್ನಡಪ್ರಭವಾರ್ತೆ ಮೂಲ್ಕಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಪ್ರಾಚೀನ ಪರಂಪರೆ ಹೊಂದಿರುವ ಮೂಲ್ಕಿ ತಾಲೂಕಿನಲ್ಲಿ ಹಿಂದೆ ಬ್ರಿಟಿಷರ ಕಾಲದಲ್ಲಿ ನ್ಯಾಯಾಲವು ಕಾರ್ಯನಿರ್ವಹಿಸುತ್ತಿದ್ದು ನಂತರ ಬೇರೆ ಕಡೆಗೆ ವರ್ಗಾವಣೆಗೊಂಡಿದೆ. ಮೂಲ್ಕಿ ತಾಲೂಕಾಗಿ ಪರಿವರ್ತನೆಗೊಂಡ ನಂತರ ತಾಲೂಕಿಗೆ ಅಗತ್ಯವಾಗಿ ಬೇಕಾಗಿರುವ ನ್ಯಾಯಾಲಯವನ್ನು ಸ್ಥಾಪಿಸಲು ಹಲವಾರು ಪ್ರಯತ್ನಗಳು ನಡೆದಿದ್ದರೂ ಈವರೆಗೂ ನ್ಯಾಯಾಲಯವರು ಸ್ಥಾಪನೆಯಾಗಿರುವುದಿಲ್ಲ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆ ಪಡುಪಣಂಬೂರು ಪಂಚಾಯಿತಿ ವತಿಯಿಂದ ಬೆಳ್ಳಾಯರು ಗ್ರಾಮದ ಸರ್ವೆ ನಂಬ್ರ 71/1 ರಲ್ಲಿ 1.80 ಎಕ್ರೆ ಜಾಗ ಮತ್ತು ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಕಾರ್ನಾಡು ಗ್ರಾಮದ ಸರ್ವೆನಂಬ್ರ 59/1ಎ1 (ಸರ್ಕಾರಿ ಭೂಮಿ) ರಲ್ಲಿ 1.30 ಎಕ್ರೆ ಜಾಗ ಮೂಲ್ಕಿ ತಾಲೂಕು ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕೆ ಜಾಗವನ್ನು ಮೀಸಲಾಗಿಡಲಾಗಿದೆ. ಮೂಲ್ಕಿ ಆಸುಪಾಸಿನ ಜನರು ಮಂಗಳೂರು ಅಥವಾ ಮೂಡಬಿದಿರೆಗೆ ನ್ಯಾಯಾಲಯದ ವ್ಯಾಜ್ಯದ ಕುರಿತು ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಮೂಲ್ಕಿ ತಾಲೂಕಿನಲ್ಲಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ಅಗತ್ಯವಿದ್ದು ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮಕೈಗೊಂಡು ಆದಷ್ಟು ಶೀಘ್ರವಾಗಿ ಮೂಲ್ಕಿ ತಾಲೂಕಿಗೆ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವನ್ನು ಮಂಜೂರು ಮಾಡಬೇಕು. ನ್ಯಾಯಾಲಯಕ್ಕೆ ಬೇಕಾಗುವ ಕಟ್ಟಡದ ನಿರ್ಮಾಣಕ್ಕೆ ಸಮಯ ಬೇಕಾಗಿರುವುದರಿಂದ ತಾತ್ಕಾಲಿಕವಾಗಿ ನ್ಯಾಯಾಲಯವನ್ನು ಮೂಲ್ಕಿ ನಗರ ಪಂಚಾಯಿತಿ (ಸಭಾ ಭವನ ಮತ್ತು ಪಿ.ಡಬ್ಲ್ಯುಡಿ ಗೆಸ್ಟ್ ಹೌಸ್ ಮೂಲ್ಕಿ) ಕಟ್ಟಡದಲ್ಲಿ ನ್ಯಾಯಾಲಯದ ಕಾರ್ಯವನ್ನು ನಿರ್ವಹಿಸಲು ಅಗತ್ಯ ಕ್ರಮಕೈಗೊಂಡು ಜನರಿಗೆ ಆಗುವ ತೊಂದರೆಯನ್ನು ನಿವಾರಿಸಬೇಕೆಂದು ಸಮಿತಿ ಅಧ್ಯಕ್ಷ ಹರೀಶ್ ಪುತ್ರನ್ ಹಾಗೂ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.