- ಕಾಂಗ್ರೆಸ್ ಸಚಿವರಿಂದ ಅರಣ್ಯ, ಕಂದಾಯ ಭೂಮಿ, ರೈತರ ಜಮೀನು ಕಬಳಿಕೆ: ಬಿಜೆಪಿ ಶಾಸಕ ಹರೀಶ ಆರೋಪ - - -
ದಾವಣಗೆರೆ-ವಿಜಯ ನಗರ ಜಿಲ್ಲೆಗಳಲ್ಲಿ ಅರಣ್ಯ, ಕಂದಾಯ ಭೂಮಿ, ರೈತರ ಜಮೀನು ಕಬಳಿಕೆ ವಿರುದ್ಧ ತನಿಖೆ ಕೈಗೊಳ್ಳುವಂತೆ ಮನವಿ ಮಾಡಿದ್ದೆ. ಈ ಹಿನ್ನೆಲೆ ಬೆಂಗಳೂರು ವಿಭಾಗದ ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕರ ನೇತೃತ್ವದ ಮೂವರು ಅಧಿಕಾರಿಗಳ ತಂಡ ಸಂಬಂಧಿಸಿದ ಇಲಾಖೆಗಳ ಜೊತೆಗೆ ಜಂಟಿ ಸಮೀಕ್ಷೆಗೆ ಅ.27ರಂದು ಉಭಯ ಜಿಲ್ಲೆಗೆ ಭೇಟಿ ನೀಡಲಿದೆ ಎಂದು ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಉಭಯ ಜಿಲ್ಲೆಗಳ ಗಡಿ ಭಾಗದಲ್ಲಿ ಅರಣ್ಯ, ಕಂದಾಯ ಭೂಮಿ ಕಬಳಿಕೆ ಬಗ್ಗೆ ದೂರಿದ್ದು, ಸದನದಲ್ಲೂ ಸಾಕಷ್ಟು ಸಹ ಈ ಬಗ್ಗೆ ಧ್ವನಿ ಎತ್ತಿದ್ದೆ. ಇನ್ನು 2 ದಿನಗಳಲ್ಲೇ ಎರಡೂ ಜಿಲ್ಲೆಗಳ ಅರಣ್ಯ-ಕಂದಾಯ ಇಲಾಖೆಗಳ ಜೊತೆಗೆ ಜಂಟಿ ಸಮೀಕ್ಷೆಗೆ ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕರ ನೇತೃತ್ವದ ತಂಡ ಸಮೀಕ್ಷೆಗೆ ಬರಲಿದ್ದು, ನಾವೆಲ್ಲರೂ ಜೊತೆಗಿರುತ್ತೇವೆ ಎಂದರು.ಬಡರೈತರ ಜಮೀನು ಕಬಳಿಕೆ, ಅರಣ್ಯ-ಕಂದಾಯ ಭೂಮಿ ಕಬಳಿಕೆ, ನದಿಗೆ ಸೇರುವ ಹಳ್ಳವನ್ನೇ ಮುಚ್ಚಿ, ಕಾರ್ಖಾನೆ ತ್ಯಾಜ್ಯ ಹರಿಯುತ್ತಿರುವುದನ್ನೇ ಹಳ್ಳವೆಂದು ತೋರಿಸಿದ್ದಾರೆ. ನಮ್ಮ ಹೋರಾಟದ ಫಲದಿಂದ ಮುಚ್ಚಿದ್ದ ಹಳ್ಳವನ್ನು ರಾತ್ರೋರಾತ್ರಿ ಜೆಸಿಬಿಯಿಂದ ಮತ್ತೆ ತೆಗೆಸಿದ್ದು, ಈ ಕಾರ್ಯಕ್ಕೆ ಬಳಸಿದ್ದ ಜೆಸಿಬಿ ಯಂತ್ರ ಸಚಿವ ಮಲ್ಲಿಕಾರ್ಜುನರ ಕುಟುಂಬದ ಜಾಗಕ್ಕೆ ಹೋಗಿ ನಿಂತಿರುವ ಜಿಪಿಎಸ್ ಫೋಟೋ ತೆಗೆದಿದ್ದೇವೆ ಎಂದು ಹೇಳಿದರು.
ಗ್ರಾಮ ಲೆಕ್ಕಾಧಿಕಾರಿ, ಪೊಲೀಸರ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ, ಯಥಾಸ್ಥಿತಿ ಕಾಪಾಡುವಂತೆ ಹೇಳಿದ್ದೆ. ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನರ ಒಡೆತನದ ಕಾರ್ಖಾನೆಗೆ ಬಡ ರೈತರ 150 ಎಕರೆ ಭೂಮಿಯನ್ನು ಕೆಐಎಡಿಬಿ ಮೂಲಕ ಪಡೆದು, ವಂಚಿಸಿದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದೆ. ಆಗ ಸಚಿವ ಎಂ.ಬಿ.ಪಾಟೀಲ ರೈತರಿಗೆ ಸೇರಿದ ಜಾಗ ವಾಪಸ್ ಕೊಡಿಸುವ ಭರವಸೆ ನೀಡಿದ್ದರು. ರೈತರ ಭೂಮಿ ವಾಪಸ್ ಕೊಡಿಸಬೇಕು. ಅರಣ್ಯ ಮತ್ತು ಕಂದಾಯ ಭೂಮಿ ಕಬಳಿಕೆ ಮಾಡಿದ್ದನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆಯುವವರೆಗೂ ನನ್ನ ಹೋರಾಟವಂತೂ ನಿಲ್ಲುವುದಿಲ್ಲ ಎಂದು ಹರೀಶ್ ಸ್ಪಷ್ಟಪಡಿಸಿದರು.
ಈ ಸಂದರ್ಭ ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್, ಬಿ.ಎಸ್.ಜಗದೀಶ, ಶಿವನಗೌಡ ಪಾಟೀಲ, ಟಿಂಕರ್ ಮಂಜಣ್ಣ ಇತರರು ಇದ್ದರು.
(ಬಾಕ್ಸ್)
- ಬಿ.ಪಿ.ಹರೀಶ, ಶಾಸಕ, ಹರಿಹರ ಕ್ಷೇತ್ರ.
-25ಕೆಡಿವಿಜಿ3, 4.ಜೆಪಿಜಿ: