ಟೆಕ್ಕಿಗೆ ಡಿಜಿಟಲ್‌ ಅರೆಸ್ಟ್‌ ಮಾಡಿ 31.83 ಕೋಟಿ ಧೋಖಾ!

KannadaprabhaNewsNetwork |  
Published : Nov 18, 2025, 03:30 AM ISTUpdated : Nov 18, 2025, 07:11 AM IST
 Digital Arrest Scam

ಸಾರಾಂಶ

ರಾಜ್ಯದಲ್ಲಿ ಡಿಜಿಟಲ್ ಅರೆಸ್ಟ್‌ ಮೂಲಕ ಸೈಬರ್ ವಂಚಕರು ಮೊದಲ ಬಾರಿಗೆ ದೊಡ್ಡ ಮೊತ್ತದ ವಂಚನೆ ಕೃತ್ಯ ಎಸಗಿರುವುದು, ಡ್ರಗ್ಸ್ ಪ್ರಕರಣದ ತನಿಖೆ ಸೋಗಿನಲ್ಲಿ ಐಟಿ ಕಂಪನಿ ಹಿರಿಯ ಮಹಿಳಾ ಅಧಿಕಾರಿಯೊಬ್ಬರಿಂದ 31.83 ಕೋಟಿ ರು. ದೋಚಿದ್ದಾರೆ.

 ಬೆಂಗಳೂರು :  ರಾಜ್ಯದಲ್ಲಿ ಡಿಜಿಟಲ್ ಅರೆಸ್ಟ್‌ ಮೂಲಕ ಸೈಬರ್ ವಂಚಕರು ಮೊದಲ ಬಾರಿಗೆ ದೊಡ್ಡ ಮೊತ್ತದ ವಂಚನೆ ಕೃತ್ಯ ಎಸಗಿರುವುದು, ಡ್ರಗ್ಸ್ ಪ್ರಕರಣದ ತನಿಖೆ ಸೋಗಿನಲ್ಲಿ ಐಟಿ ಕಂಪನಿ ಹಿರಿಯ ಮಹಿಳಾ ಅಧಿಕಾರಿಯೊಬ್ಬರಿಂದ 31.83 ಕೋಟಿ ರು. ದೋಚಿದ್ದಾರೆ.

ಇಂದಿರಾನಗರದಲ್ಲಿ ನೆಲೆಸಿರುವ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಡಿಜಿಟಲ್ ಅರೆಸ್ಟ್‌ ಬಗ್ಗೆ ಪ್ರಧಾನಿ ಮೋದಿ ಅವರೇ ಜಾಗೃತಿ ಮೂಡಿಸಿದರೂ ವಿದ್ಯಾವಂತರೇ ಸೈಬರ್ ದುರುಳರಿಗೆ ಬಲಿಯಾಗುತ್ತಿದ್ದಾರೆ.

ಹೇಗೆ ವಂಚನೆ?

ಕಳೆದ ವರ್ಷ ಸೆ.15 ರಂದು ಸಂತ್ರಸ್ತೆಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ತಾನು ಡಿಎಚ್‌ಎಲ್ ಕೊರಿಯರ್ ಸರ್ವಿಸ್‌ನಿಂದ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದಾನೆ. ಆಗ ಮುಂಬೈನ ಅಂಧೇರಿಯ ಡಿಎಚ್‌ಎಲ್ ಕೇಂದ್ರದಿಂದ ನಿಮ್ಮ ಹೆಸರಿಗೆ ಬಂದಿರುವ ಪಾರ್ಸೆಲ್‌ನಲ್ಲಿ ಮೂರು ಕ್ರೆಡಿಟ್ ಕಾರ್ಡ್, ನಾಲ್ಕು ಪಾಸ್‌ಪೋರ್ಟ್ ಮತ್ತು ಎಂಡಿಎಂಎ ಡ್ರಗ್ಸ್ ಇದೆ ಎಂದಿದ್ದಾನೆ.

ಈ ಮಾತು ಕೇಳಿ ಸಂತ್ರಸ್ತೆಗೆ ಗಾಬರಿಯಾಗಿದೆ. ಆಗ ತಾವು ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ನನಗೆ ಹೆಸರಿಗೆ ಹೇಗೆ ಮುಂಬೈನಲ್ಲಿ ಕೊರಿಯರ್ ಬರುತ್ತದೆ. ಅದಕ್ಕೂ ತಮಗೂ ಸಂಬಂಧವಿಲ್ಲ ಎಂದಿದ್ದಾರೆ. ಇದಕ್ಕೆ ಪಾರ್ಸಲ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಇದೆ. ಹಾಗಾಗಿ ತಮಗೆ ಕರೆ ಮಾಡಿರುವುದಾಗಿ ಆತ ಪ್ರತ್ಯುತ್ತರ ನೀಡಿದ್ದಾನೆ. ಆಗ ಇದೂ ಸೈಬರ್‌ ಕ್ರೈಂ ಆಗಿರುವ ಕಾರಣ ಸೈಬರ್ ಪೊಲೀಸರಿಗೆ ಮಾಹಿತಿ ನೀಡುವಂತೆ ಸಲಹೆ ನೀಡಿದ ಆತ, ಕರೆಯನ್ನು ಮತ್ತೊಬ್ಬನಿಗೆ ವರ್ಗಾಯಿಸಿದ್ದಾನೆ. ಆತ ತನ್ನನ್ನು ಸಿಬಿಐ ಅಧಿಕಾರಿ ಎಂದು ಬಿಂಬಿಸಿಕೊಂಡಿದ್ದಾನೆ.

2024ರ ಸೆಪ್ಟೆಂಬರ್ 23ರಂದು ಸೈಪ್ ಮೂಲಕ ವಿಡಿಯೋ ಕರೆ ಮಾಡಿದ ವ್ಯಕ್ತಿ ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡು, ಈ ಪಾರ್ಸೆಲ್‌ ಸಂಬಂಧ ವಿಚಾರಣೆ ನೆಪದಲ್ಲಿ ಒಂದು ವಾರ ಕಾಟ ಕೊಟ್ಟಿದ್ದಾನೆ. ಬಳಿಕ ಆರ್‌ಬಿಐನ ಆರ್ಥಿಕ ಗುಪ್ತಚರ ಘಟಕದಲ್ಲಿ ನಿಮ್ಮ ಆಸ್ತಿ ವಿವರ ಘೋಷಿಸಬೇಕು. ತನಿಖೆ ಭಾಗವಾಗಿ ನಿಮ್ಮ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಬೇಕಿದೆ ಎಂದಿದ್ದಾನೆ. ಈತನ ಮಾತು ನಂಬಿದ ಸಂತ್ರಸ್ತೆ, ತಮ್ಮ ನಿಶ್ಚಿತ ಠೇವಣಿ ಮತ್ತು ಉಳಿತಾಯ ಖಾತೆಯಲ್ಲಿದ್ದ ಹಣವನ್ನು ವಂಚಕರು ನೀಡಿದ್ದ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

2024ರ ಡಿಸೆಂಬ‌ರ್ 6ರಂದು ಸಂತ್ರಸ್ತೆಯ ಮಗನ ನಿಶ್ಚಿತಾರ್ಥ ನೆರವೇರಿತು. ವಂಚಕರು ಸಂತ್ರಸ್ತೆಗೆ ಹಣ ವಾಪಸ್ ನೀಡಲಿಲ್ಲ. ಇದಾದ ಮೂರು ತಿಂಗಳ ಬಳಿಕ ಅಂದರೆ 2025ರ ಮಾರ್ಚ್ 26ರಂದು ತಮ್ಮ ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸಿದರು. ಈ ಅವಧಿಯಲ್ಲಿ ಅಪರಿಚಿತ ವ್ಯಕ್ತಿಗಳು ಸಂತ್ರಸ್ತೆಗೆ ಕರೆ ಮಾಡಿ, ಅವಾಚ್ಯ ಪದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿದ್ದರು. ಕೊನೆಗೆ ತಾವು ಡಿಜಿಟಲ್ ಅರೆಸ್ಟ್‌ಕ್ಕೊಳಗಾಗಿ ವಂಚನೆ ಹೋಗಿರುವ ಸಂಗತಿ ಸಂತ್ರಸ್ತೆ ಅರಿವಿಗೆ ಬಂದಿದೆ. ಕೊನೆಗೆ ಕೃತ್ಯ ನಡೆದ ವರ್ಷದ ಬಳಿಕ ಪೊಲೀಸರಿಗೆ ಅವರು ದೂರು ಕೊಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

187 ಬಾರಿ ವಹಿವಾಟು!

ಕಳೆದ ಐದಾರು ತಿಂಗಳ ಅವಧಿಯಲ್ಲಿ ಆರೋಪಿಗಳ ಖಾತೆಗಳಿಗೆ ಹಂತ ಹಂತವಾಗಿ 31.83 ಕೋಟಿ ಹಣ ವರ್ಗಾವಣೆ ಆಗಿದ್ದು, ಸಂತ್ರಸ್ತೆ ಖಾತೆಯಿಂದ 187 ಬಾರಿ ವಹಿವಾಟು ನಡೆದಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ವಿಷಯ ಬಾಯ್ಬಿಟ್ಟರೆ ಜೋಕೆ ಎಂದು ಬೆದರಿಕೆ

ಈ ಕೃತ್ಯದ ಬಗ್ಗೆ ಯಾರಿಗಾದರೂ ಹೇಳಿದರೆ ನಿಮ್ಮ ಕುಟುಂಬದವರಿಗೆ ತೊಂದರೆ ಮಾಡುತ್ತೇವೆ ಎಂದು ಸಂತ್ರಸ್ತೆಗೆ ಸೈಬರ್ ವಂಚಕರು ಬೆದರಿಸಿದ್ದರು. ಇದರಿಂದ ಭೀತಿಗೊಳಗಾದ ಅವರು, ಸ್ಥಳೀಯ ಪೊಲೀಸರಿಗಾಗಲಿ ಹಾಗೂ ಕುಟುಂಬದವರಿಗಾಗಲಿ ಮಾಹಿತಿ ನೀಡದೆ ಗೌಪ್ಯವಾಗಿಟ್ಟರು. ಅಲ್ಲದೆ ಮಗನ ಮದುವೆ ಸಂಭ್ರಮ ಹೊತ್ತಿನಲ್ಲಿ ಮಗನಿಗೆ ಅಪಾಯವಾಗಲಿದೆ ಎಂದು ಅವರು ಆತಂಕಗೊಂಡಿದ್ದರು ಎಂದು ಮೂಲಗಳು ಹೇಳಿವೆ.

PREV
Read more Articles on

Recommended Stories

ಕಸ ಬಳಿಯುವ ಮಷಿನ್‌ಗೆ 617 ಕೋಟಿಬಾಡಿಗೆ: ಸಾರ್ವಜನಿಕರ ತೀವ್ರ ಆಕ್ಷೇಪ
ಕೊಪ್ಪಳ ಎಪಿಎಂಸಿಯಲ್ಲಿ ಕಮಿಷನ್ ದಂಧೆ ಅವ್ಯಾಹತ