ಕನ್ನಡದ ಉಳಿವಿಗೆ ತಂತ್ರಜ್ಞಾನದ ನೆರವು ಅಗತ್ಯ

KannadaprabhaNewsNetwork |  
Published : Apr 08, 2026, 04:00 AM IST
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಂಘವನ್ನು ಖ್ಯಾತ ಸಾಹಿತಿ, ಹಿರಿಯ ಪತ್ರಕರ್ತ ಜೋಗಿ ಉದ್ಘಾಟಿಸಿದರು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಕನ್ನಡ ಭಾಷೆಯ ಶಕ್ತಿ ಮತ್ತು ಸಾಧ್ಯತೆ ಅಗಾಧವಾದದ್ದು, ಈಗಿನ ಯುವಪೀಳಿಗೆ ತಂತ್ರಜ್ಞಾನದಿಂದ ವಿಮುಖರಾಗದೆ, ಕನ್ನಡ ಭಾಷೆಯನ್ನು ಬಳಸಲು, ಬೆಳೆಸಲು ಮತ್ತು ಉಳಿಸಲು ತಂತ್ರಜ್ಞಾನದ ನೆರವು ಪಡೆಯಬೇಕು ಎಂದು ಕನ್ನಡಪ್ರಭ ಪ್ರಧಾನ ಪುರವಣಿ ಸಂಪಾದಕ ಹಾಗೂ ಖ್ಯಾತ ಸಾಹಿತಿ ಜೋಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕನ್ನಡ ಭಾಷೆಯ ಶಕ್ತಿ ಮತ್ತು ಸಾಧ್ಯತೆ ಅಗಾಧವಾದದ್ದು, ಈಗಿನ ಯುವಪೀಳಿಗೆ ತಂತ್ರಜ್ಞಾನದಿಂದ ವಿಮುಖರಾಗದೆ, ಕನ್ನಡ ಭಾಷೆಯನ್ನು ಬಳಸಲು, ಬೆಳೆಸಲು ಮತ್ತು ಉಳಿಸಲು ತಂತ್ರಜ್ಞಾನದ ನೆರವು ಪಡೆಯಬೇಕು ಎಂದು ಕನ್ನಡಪ್ರಭ ಪ್ರಧಾನ ಪುರವಣಿ ಸಂಪಾದಕ ಹಾಗೂ ಖ್ಯಾತ ಸಾಹಿತಿ ಜೋಗಿ ಹೇಳಿದರು.

ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ಮಂಗಳವಾರ ನಡೆದ ಕನ್ನಡ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡವನ್ನು ಉಳಿಸುವುದು ನಮ್ಮ ಕೈಯಲ್ಲಿಲ್ಲ, ಆದರೆ ಅದನ್ನು ಬಳಸುವುದು ಮತ್ತು ಬೆಳೆಸುವುದು ನಮ್ಮ ಜವಾಬ್ದಾರಿ. ಕನ್ನಡದ ಅಳಿವಿಗೆ ಅದೆಷ್ಟೋ ಕಾರಣಗಳಿದ್ದರೂ, ಅದರ ಉಳಿವಿಗೆ, ಭಾಷೆಯ ಬಳಕೆಯೊಂದೇ ಪರಿಹಾರವಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನ ವರ್ಷಕ್ಕೆ ಒಮ್ಮೆ ಜರುಗದೆ, ನಾಡಿನ ಪ್ರತಿಯೊಬ್ಬರ ಮನೆಯಲ್ಲಿ ಪ್ರತಿದಿನವೂ ನಡೆಯಬೇಕು ಎಂದು ಹೇಳಿದರು.

ಸಾಹಿತ್ಯವನ್ನು ಪರಿಚಯಿಸುವುದು ಭಾಷೆ. ಈ ಭಾಷೆಗಳಲ್ಲಿ ಮಾತೃಭಾಷೆಯು ನಮ್ಮ ಜೀವಕ್ಕೆ ಅತ್ಯಂತ ಹತ್ತಿರವಾದದ್ದಾಗಿದೆ. ನಾವು ಅನುಕಂಪದಿಂದ ಅಥವಾ ಅಗತ್ಯಕ್ಕಾಗಿ ಇನ್ನೊಂದು ಭಾಷೆಯನ್ನು ಮಾತನಾಡುತ್ತೇವೆಯೇ ಹೊರತು, ಅನ್ಯ ಭಾಷೆಯ ಮೇಲಿನ ಮೋಹದಿಂದಲ್ಲ ಎಂಬುದನ್ನು ಎಲ್ಲರು ತಿಳಿಯಬೇಕು ಎಂದರು.

ಆರ್‌ಸಿಯು ಸಿಂಡಿಕೇಟ್ ಸದಸ್ಯ ಪ್ರೊ.ಎಸ್.ಎಸ್.ಅಂಗಡಿ ಮಾತನಾಡಿ, ಭಾಷೆ ಒಂದು ಸಂವಹನ ಮಾಧ್ಯಮವಾಗಿರುವುದರಿಂದ, ಭಾಷೆಯಲ್ಲಿ ಮಡಿವಂತಿಕೆ ಬರಬಾರದು. ಕನ್ನಡ ಭಾಷೆಯ ಸೊಗಡು ಮತ್ತು ದೇಶಿಯತೆ ಅಪರೂಪವಾದದ್ದು, ಒಂದು ಭಾಷೆ ಬೆಳೆಯಲು ಮತ್ತೊಂದು ಭಾಷೆಯ ಸಾಂಗತ್ಯ ಅವಶ್ಯವಾಗಿದೆ. ಹೀಗಾಗಿ ಭಾಷೆಯ ನಡುವೆ ಯಾವುದೇ ಭಾಷಾ ಗೋಡೆಗಳು ಇರಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಸಿ.ಎಂ.ತ್ಯಾಗಾರಾಜ ಮಾತನಾಡಿ, ಭಾಷೆ ಮತ್ತು ಜೀವನ ಒಂದೇ ನಾಣ್ಯದ ಎರಡು ಮುಖಗಳು. ಭಾಷಾ ಶಕ್ತಿಯನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಕೆಲಸವನ್ನು ಕನ್ನಡ ಸಂಘಗಳು ಮಾಡಬೇಕು. ಗಡಿನಾಡು ಭಾಗದಲ್ಲಿ ಕನ್ನಡದ ಯಾತ್ರೆ ನಿರಂತರವಾಗಿ ನಡೆಸುವ ಪ್ರಯತ್ನಗಳಾಗಬೇಕು ಎಂದು ಹೇಳಿದರು.

ಮೌಲ್ಯಮಾಪನ ಕುಲಸಚಿವ ಪ್ರೊ.ಡಿ.ಎನ್.ಪಾಟೀಲ್, ಹಣಕಾಸು ಅಧಿಕಾರಿ ಎಂ.ಎ.ಸಪ್ನ, ಕನ್ನಡ ಸಂಘದ ಅಧ್ಯಕ್ಷ ಡಾ.ಗಜಾನನ ನಾಯ್ಕ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಪೀಳಿಗೆ ಪೋಷಕಾಂಶಗಳ ಕೊರತೆ
ಪುಟ 2ಕ್ಕೆ ಬಾಟಮ್....ಗುರುವಂದನಾ, ಸ್ನೇಹ ಸಮ್ಮಿಲನ ಕಾರ್ಯಕ್ರಮ