ಗದಗ: ಇಂದಿನ ಸ್ಫರ್ಧಾತ್ಮಕ ಜಗತ್ತಿನಲ್ಲಿ ಖಾಸಗೀಕರಣ, ಜಾಗತೀಕರಣ ಮತ್ತು ಆರ್ಥಿಕ ಉದಾರೀಕರಣಗಳ ನಡುವೆ ಬಲವಾಗಿ ಬೇರು ಬಿಟ್ಟಿರುವ ಸಹಕಾರ ಕ್ಷೇತ್ರವೂ ಸದಸ್ಯರ ಆರ್ಥಿಕ ಬಲವರ್ಧನೆಗಾಗಿ ಸುಧಾರಿತ ತಂತ್ರಜ್ಞಾನ ಆಧಾರಿತ ಸೇವೆ ನೀಡುತ್ತಾ ಬಂದಿದೆ ಎಂದು ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿರ್ದೇಶಕ ಎಚ್.ಜಿ. ಹಿರೇಗೌಡ್ರ ಹೇಳಿದರು.
ಸಹಕಾರ ಕ್ರೇತ್ರ ಪ್ರಾರಂಭದಿಂದ ರೈತರು, ಕಾರ್ಮಿಕರಿಗೆ, ಆರ್ಥಿಕವಾಗಿ ಅಬಲರಾದ ಜನರಿಗೆ ನೆರವಾಗಲು ತಾನೇ ರಚಿಸಿಕೊಂಡು ತಾನೇ ಮುನ್ನೆಡೆಸುವ ಉದ್ದೇಶದಿಂದ ಪ್ರಾರಂಭಗೊಂಡಿದೆ. ಇಂದು ಸಹಕಾರ ಕ್ಷೇತ್ರ ಪ್ರವೇಶಿಸದ ಯಾವುದೇ ವಲಯವಿಲ್ಲ ಅಷ್ಟರಮಟ್ಟಿಗೆ ಸಹಕಾರ ಕ್ಷೇತ್ರ ವಿಸ್ತಾರವಾಗಿ ಬೆಳೆದು ನಿಂತಿದೆ. ಸಹಕಾರ ಕ್ಷೇತ್ರವು ಎಲ್ಲ ಜನರ ಆಶೋತ್ತರ ಪೂರೈಸುವ ದಿಸೆಯಲ್ಲಿ ಕಾರ್ಯ ನಿರ್ವಹಿಸುತ್ತಾ ಒಂದು ಆರ್ಥಿಕ ಶಕ್ತಿಯಾಗಿ ರೂಪಿತವಾಗಿದೆ ಎಂದರು.
ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಎಸ್. ಕಬಾಡೆ ಮಾತನಾಡಿ, ಜನರಲ್ಲಿ ಉಳಿತಾಯ ಮನೋಭಾವನೆ ಬೆಳೆಸಲು ಹಾಗೂ ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಿಸಲು ಮಹಿಳೆಯರು, ಬಡವರು ಸೇರಿದಂತೆ ಸಮಾಜದ ಕಡೆಯ ವ್ಯಕ್ತಿಗೂ ತಲುಪಲು ಸಹಕಾರ ಕ್ಷೇತ್ರವು ಸೂಕ್ತ ಮಾರ್ಗವಾಗಿದೆ. ಗ್ರಾಮೀಣ ಸಹಕಾರ ಸಂಘಗಳ ಅಥವಾ ಸ್ವ ಸಹಾಯ ಗುಂಪುಗಳ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ₹500 ಗಳ ವಂತಿಗೆ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಶೇ.20 ರಷ್ಟು ಹೆಚ್ಚುವರಿಯಾಗಿ ಅಂದರೆ ಪ್ರತಿ ಹೆಚ್ಚುವರಿ ಸದಸ್ಯರಿಗೆ ₹100 ಪಾವತಿಸತಕ್ಕದ್ದು ನಗರ ಸಹಕಾರ ಸಂಘಗಳ ಗರಿಷ್ಠ ನಾಲ್ಕು ಸದಸ್ಯ ಕುಟುಂಬ ಒಂದಕ್ಕೆ ವಾರ್ಷಿಕ ₹1000ಗಳ ವಂತಿಗೆ ಮತ್ತು ನಾಲಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿ ಸದಸ್ಯರಿಗೆ ಶೇ. 20 ರಷ್ಟು ಹೆಚ್ಚುವರಿಯಾಗಿ ಅಂದರೆ ಪ್ರತಿ ಹೆಚ್ಚುವರಿ ಸದಸ್ಯರಿಗೆ ₹200 ಪಾವತಿಸತಕ್ಕದು ಎಂದರು.ಪಜಾ, ಪಪಂ ಸದಸ್ಯರುಗಳಿಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಸಹಾಯಧನ ನೀಡುವ ಮೂಲಕ ಅವರ ವಾರ್ಷಿಕ ಸದಸ್ಯತ್ವದ ವಂತಿಗೆ ಸರ್ಕಾರವೇ ಭರಿಸುತ್ತದೆ ಎಂದು ವಿವರಿಸಿದರು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿ.ಎಂ. ಪಾಟೀಲ ಮಾತನಾಡಿದರು.
ಸಾವಿತ್ರಿ ಮೊರಬದ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಚಂದ್ರಶೇಖರ ಎಸ್.ಕರಿಯಪ್ಪನವರ ನಿರೂಪಿಸಿದರು. ರಶೀದಾಬಾನು ಸಿ.ಯಲಿಗಾರ ವಂದಿಸಿದರು.