ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ್ದ ಆಧುನಿಕ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸ್ಥಳೀಯ ಯುವಜನರಿಗೆ ಕೌಶಲ್ಯ ತರಬೇತಿ ನೀಡುವ ಸಂಘದ ಯೋಜನೆ ಅತ್ಯಂತ ಶ್ಲಾಘನೀಯ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯು ಎಲ್ಲ ಕ್ಷೇತ್ರಗಳಲ್ಲಿ ಮುಂದುವರೆಯುತ್ತಿದ್ದು, ರಸ್ತೆ, ರೈಲು, ವಿಮಾನ ಮಾರ್ಗಗಳಲ್ಲಿ ಉತ್ತಮ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ದೇಶದ ಪ್ರಮುಖ ನಗರಗಳಿಗೆ ಸಂಚರಿಸಲು ಅನುಕೂಲವಾಗಲು ಎಲ್ಲ ವಾತಾವರಣವಿದೆ. ಮುಂದಿನ ಐದು ವರ್ಷಗಳಲ್ಲಿ ಎಲ್ಲ ಪ್ರಮುಖ ಸ್ಥಳಗಳಿಗೆ ವಿಮಾನ ಹಾರಾಟ ಆರಂಭಿಸುವ ಗುರಿ ಹೊಂದಲಾಗಿದೆ. ಇದರಿಂದ ವ್ಯಾಪಾರ ವಹಿವಾಟು ವೃದ್ಧಿಗೆ ಸಹಕಾರಿಯಾಗಲಿದೆ ಎಂದರು.ತಂತ್ರಜ್ಞಾನ ಬಳಸಿಕೊಂಡು ಯುವಜನರಿಗೆ ಹೆಚ್ಚಿನ ತರಬೇತಿ ನೀಡುವ ಮೂಲಕ ಉದ್ಯೋಗ ಕ್ಷೇತ್ರಕ್ಕೆ ತಯಾರು ಮಾಡಬೇಕಿದೆ. ಕೈಗಾರಿಕಾ ಕ್ಷೇತ್ರದ ಆಕಾಂಕ್ಷೆಗಳಿಗೆ ಪೂರಕವಾಗಿ ಕೌಶಲ್ಯಯುತ ಯುವ ಸಂಪನ್ಮೂಲವನ್ನು ಸಿದ್ಧಗೊಳಿಸಬೇಕಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸ್ಕಿಲ್ ಅಕಾಡೆಮಿ ಮೂಲಕ ವಿಶೇಷ ಪ್ರಯತ್ನ ನಡೆಸುತ್ತಿರುವುದು ಉತ್ತಮ ಸಂಗತಿ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದ್ದು, ರಸ್ತೆ, ರೈಲು, ವಿಮಾನ ಸಂಪರ್ಕ ವ್ಯವಸ್ಥೆ ಸದೃಢವಾಗುತ್ತಿದೆ. ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಪ್ರಯತ್ನದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಅಗತ್ಯ ಸೌಕರ್ಯಗಳು ದೊರಕಿವೆ ಎಂದು ಹೇಳಿದರು.ಶಿವಮೊಗ್ಗ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣವಿದ್ದರೂ ಕೈಗಾರಿಕೆಗಳ ಸ್ಥಾಪನೆ ಆಗುತ್ತಿಲ್ಲ. ಇದಕ್ಕೆ ಕೌಶಲ್ಯ ಸಂಪನ್ಮೂಲ ಕೊರತೆಯು ಒಂದು ಕಾರಣ. ಆದ್ದರಿಂದ ಸಂಘದ ವತಿಯಿಂದ ಸ್ಕಿಲ್ ಅಕಾಡೆಮಿ ಸ್ಥಾಪಿಸಿದ್ದು, ಉದ್ಯೋಗ ಕ್ಷೇತ್ರಕ್ಕೆ ಅವಶ್ಯವಿರುವಂತೆ ಯುವಜನರಿಗೆ ತರಬೇತಿ ನೀಡಲಾಗುವುದು. ಈಗಾಗಲೇ ಬಾಷ್ ಸೇರಿದಂತೆ ವಿವಿಧ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಯುವಜನರಿಗೆ ಉದ್ಯೋಗ ಒದಗಿಸುವಲ್ಲಿ ಸ್ಕಿಲ್ ಅಕಾಡೆಮಿ ಮಹತ್ತರ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ಕಾರ್ಯದರ್ಶಿ ವಸಂತ ಹೋಬಳಿದಾರ್ ಸ್ಕಿಲ್ ಅಕಾಡೆಮಿ ರೂಪುರೇಷೆ ಕುರಿತು ವಿವರಣೆ ನೀಡಿದರು. ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ನಿರ್ದೇಶಕರಾದ ಮಧುಸೂದನ್ ಐತಾಳ್, ಬಿ.ಆರ್.ಸಂತೋಷ್, ಕೆ.ಎಸ್.ಸುಕುಮಾರ್, ಪ್ರದೀಪ್ ವಿ.ಯಲಿ, ಇ.ಪರಮೇಶ್ವರ್, ಗಣೇಶ್ ಎಂ.ಅಂಗಡಿ, ಬಿ.ಮಂಜೇಗೌಡ, ಮರಿಸ್ವಾಮಿ, ಮಾಜಿ ಅಧ್ಯಕ್ಷರಾದ ಕೆ.ವಿ.ವಸಂತಕುಮಾರ್, ಡಿ.ಎಂ.ಶಂಕರಪ್ಪ ಮತ್ತಿತರರು ಇದ್ದರು.