27ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ
ಕನ್ನಡದ ಶತ್ರು ಯಾರು ಎಂದು ಕೇಳುವ ಕಾಲವಿತ್ತು. ಇಂದು ಕನ್ನಡದ ಮಿತ್ರ ಯಾರು ಎಂದು ಹೇಳುವ ಕಾಲ ಬಂದಿದೆ. ತಂತ್ರಜ್ಞಾನವೇ ಕನ್ನಡದ ಮಿತ್ರ ಎಂದು ಹಿರಿಯ ಸಾಹಿತಿ, ‘ಕನ್ನಡಪ್ರಭ’ ಪುರವಣಿ ಸಂಪಾದಕ ಜೋಗಿ ಹೇಳಿದ್ದಾರೆ.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಗಳೂರು ವಿವಿ ಆವರಣದಲ್ಲಿರುವ ಮಂಗಳಾ ಸಭಾಂಗಣದಲ್ಲಿ 27ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.ಹಿಂದೆ ಕನ್ನಡಕ್ಕೆ ಶತ್ರುವಾಗಿ ಕಾಣುತ್ತಿದ್ದುದು ಶೈಕ್ಷಣಿಕ, ಸಾಂಸ್ಕೃತಿಕ, ಮನರಂಜನಾತ್ಮಕ ಬದಲಾವಣೆಗಳು. ತಂತ್ರಜ್ಞಾನವನ್ನೂ ಕನ್ನಡದ ಶತ್ರು ಎಂದು ಬಿಂಬಿಸುವ ಅಪಾಯವಿತ್ತು. ಕನ್ನಡಕ್ಕೆ ತಂತ್ರಜ್ಞಾನ ವರದಾನವಾಗಿರುವ ಈ ಕಾಲದಲ್ಲಿ ಅದನ್ನು ಶತ್ರುವೆಂದು ಪರಿಗಣಿಸಬಾರದು. ಪ್ರಸ್ತುತ ಕಾಲಘಟ್ಟದಲ್ಲಿ ತಂತ್ರಜ್ಞಾನವೇ ಕನ್ನಡದ ನಿಜವಾದ ಮಿತ್ರ. ಹಳ್ಳಿಯ ಹುಡುಗನೊಬ್ಬ ತನ್ನ ಕವನವನ್ನು ಪತ್ರಿಕೆಗಳಿಗೆ ಕಾಯದೆ ಜಾಲತಾಣಗಳ ಮೂಲಕ ಜಗತ್ತಿನ ಓದುಗರಿಗೆ ತಲುಪಲು ಸಾಧ್ಯವಾಗಿದೆ. ಮೊಬೈಲ್ ಫೋನ್ ಮೂಲಕ ಕನ್ನಡವನ್ನು ಅದೆಷ್ಟೋ ಮಂದಿ ಕಲಿಯುತ್ತಿದ್ದಾರೆ ಎಂದು ಜೋಗಿ ವಿಶ್ಲೇಷಿಸಿದರು.ಎಐನಿಂದಲೂ ಕನ್ನಡಕ್ಕೆ ಒಳಿತು:
ಪ್ರಸ್ತುತ ನಡೆಯುುವ ಪ್ರತಿ ಕನ್ನಡ ಸಾಹಿತ್ಯ ಸಮ್ಮೇಳನವೂ ವಿಶ್ವ ಕನ್ನಡ ಸಮ್ಮೇಳನಗಳೇ. ಯಾವುದೇ ಮೂಲೆಯಲ್ಲಿ ನಡೆಯುವ ಸಮ್ಮೇಳನವನ್ನು ಏಕಕಾಲದಲ್ಲಿ ವಿಶ್ವದ ಇನ್ನೊಂದು ಮೂಲೆಯಿಂದ ನೋಡಬಹುದು. ನಾವು ಮಾಡಬೇಕಾದ ಕೆಲಸವನ್ನು ತಂತ್ರಜ್ಞಾನ ಮಾಡುತ್ತಿದೆ. ಹೀಗಾಗಿ ತಂತ್ರಜ್ಞಾನವನ್ನು ದೂರುವ ಬದಲು ಅದನ್ನು ಹೇಗೆ ಕನ್ನಡದ ಅಭಿವೃದ್ಧಿಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದು ಜೋಗಿ ಸಲಹೆ ನೀಡಿದರು.
ಹಿರಿಯ ಸಾಹಿತಿ ದೇವನೂರು ಮಹಾದೇವ ಅವರ ಊರಿನ ರಸ್ತೆಗೆ ಮೊದಲು ಡಾಂಬರು ಬಂದ ಕತೆಯನ್ನು ಬರೆದಿದ್ದರು. ಅದೇ ರೀತಿ ನಾಗತಿಹಳ್ಳಿ ಚಂದ್ರಶೇಖರ್ ಅವರು ‘ಪುಟ್ಟಕ್ಕನ ಹೈವೇ’ ಎಂಬ ಕತೆ ಬರೆದರು, ಬಿ. ಸುರೇಶ್ ನಿರ್ದೇಶನದಲ್ಲಿ ಅದು ಸಿನಿಮಾ ಆಯ್ತು. ಇಂಥ ಬದಲಾವಣೆಗಳು ಕತೆಯಾಗಿ ಹೊಳೆಯೋದು ಇಂದಿನ ಯುವಕರಿಗೆ ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಅಡಿಗರು, ಬಿ.ವಿ. ಕಾರಂತರು, ಕುವೆಂಪು, ದ.ರಾ ಬೇಂದ್ರೆಯಂಥ ಸಾಹಿತಿಗಳಿಗೆ ಎಲ್ಲೋ ಒಂದೆಡೆ ಇದ್ದುಕೊಂಡು ಇಡೀ ನಾಡನ್ನು ಪ್ರಭಾವಿಸುವ ಶಕ್ತಿ ಇತ್ತು. ಮುಂದಿನ ತಲೆಮಾರು ಸಾಹಿತ್ಯಕ್ಕಿರುವ ಇಂಥ ಶಕ್ತಿಯನ್ನು ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಸನ್ಮಾನಿಸಿದರು. ಸಮ್ಮೇಳನ ಅಧ್ಯಕ್ಷ ಡಾ.ಪ್ರಭಾಕರ ಶಿಶಿಲ ಮಾತನಾಡಿದರು. ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ, ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ. ಶ್ರೀನಾಥ, ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್., ಎಸ್‌ವಿಪಿ ಕನ್ನಡ ಅಧ್ಯಯನ ಪೀಠದ ಡಾ.ಸೋಮಣ್ಣ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಮತ್ತಿತರರಿದ್ದರು.
ರಾಜ್ಯದಲ್ಲಿರುವ ಕೆಲವು ಕನ್ನಡ ಮಾಧ್ಯಮ ಶಾಲೆಗಳನ್ನಾದರೂ ಮಾದರಿ ಶಾಲೆಗಳನ್ನಾಗಿ ಮಾಡಬೇಕಾದ ಅಗತ್ಯವಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಒತ್ತಾಯಿಸಿದ್ದಾರೆ.