ಧಾರವಾಡ: ಸರ್ಕಾರಿ ಕಚೇರಿಗಳಲ್ಲಿ ಏಜೆಂಟರ ಹಾವಳಿಯನ್ನು ತಂತ್ರಜ್ಞಾನದ ಮೂಲಕ ತಪ್ಪಿಸಲು ಸಾಧ್ಯ ಮಾತ್ರವಲ್ಲದೇ, ಸರ್ಕಾರ ನೀಡುವ ಸೇವೆಗಳು ಸಮಯಕ್ಕೆ ಸರಿಯಾಗಿ ಜನರಿಗೆ ತಲುಪಲು ಮಾಹಿತಿ ತಂತ್ರಜ್ಞಾನದ ಪಾತ್ರ ಪ್ರಮುಖ ಪಾತ್ರವಹಿಸುತ್ತದೆ ಎಂದು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ ಹೇಳಿದರು.
ಈಗಾಗಲೇ ಆಡಳಿತದಲ್ಲಿ ತಂತ್ರಜ್ಞಾನವನ್ನು ಅನೇಕ ಯೋಜನೆಗಳಲ್ಲಿ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಸಕಾಲ ಮತ್ತು ಸೇವಾ ಸಿಂಧು ತಂತ್ರಾಂಶಗಳ ಮುಖಾಂತರ ಸುಲಭವಾಗಿ ಮತ್ತು ಪಾರದರ್ಶಕ ರೀತಿಯಲ್ಲಿ ಸೇವೆ ನೀಡಲಾಗುತ್ತದೆ. ಆಡಳಿತ ವಿಕೇಂದ್ರೀಕರಣದಿಂದ ಸರಳ ಆಡಳಿತ ಮಾಡಲು ಸಾಧ್ಯ ಎಂದ ಅವರು, ಜನರು ಪದೇ ಪದೇ ಕಚೇರಿಗಳಿಗೆ ಅಲೆಯುವದನ್ನು ತಪ್ಪಿಸಲು ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯತೆಗಾಗಿ ತಂತ್ರಜ್ಞಾನ ಸ್ನೇಹಿ ತಂತ್ರಾಂಶಗಳು ಬಹಳ ಪಾತ್ರ ವಹಿವೆ. ರಾಜ್ಯದಲ್ಲಿ ಇ-ಆಫಿಸ್, ಸೇವಾ ಸಿಂಧು, ಮೈ-ಗೌರ್ನಮೆಂಟ್, ಜಾಲತಾಣಗಳು ಬಹಳ ಉಪಯುಕ್ತವಾಗಿದೆ. ಪ್ರಸ್ತುತ ಪೇಪರ್-ಲೇಸ್ ಆಡಳಿತಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ಶೇ. 90ರಷ್ಟು ಮೊಬೈಲ್ ತಂತ್ರಜ್ಞಾನ ಆಧಾರಿತ ಅಪ್ಲಿಕೇಶನಗಳನ್ನು ಆಡಳಿತದಲ್ಲಿ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿವಿ ವಿಶ್ರಾಂತ ಕುಲಪತಿ ಪ್ರೊ. ಎಂ.ಎಸ್.ಸುಭಾಷ್ ಮಾತನಾಡಿ, ಜನರಿಗಾಗಿ ಸರ್ಕಾರ ಎಂಬುದು ಬಹಳ ಮುಖ್ಯವಾಗಿದೆ. ಸರ್ಕಾರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವದು ಇಂದಿನ ಅಗತ್ಯ ಎಂದರು.ಪ್ರೊ. ಎಸ್.ಎಸ್. ಪಟಗುಂಡಿ ಮಾತನಾಡಿ, ಸಾರ್ವಜನಿಕ ನೀತಿ ನಿರೂಪಣೆಯಲ್ಲಿ ಆಡಳಿತಾತ್ಮಕ ಸುಧಾರಣೆ ಬಹಳ ಮುಖ್ಯವಾಗಿದೆ. ಉತ್ತಮ ಆಡಳಿತಕ್ಕೆ ತಂತ್ರಜ್ಞಾನದ ಸಹಕಾರ ಬಹಳ ಮುಖ್ಯವಾಗಿದೆ ಎಂದರು.
ಕವಿವಿ ರಾಜ್ಯಶಾಸ್ತ್ರ ಮುಖ್ಯಸ್ಥ ಡಾ. ಬಿ.ಎಂ. ರತ್ನಾಕರ್, ಡಾ. ವಿಜಯಕುಮಾರ್ ಬೇಟಗಾರ, ಪ್ರೊ. ಎಂ.ಜಿ.ಖಾನ್, ಡಾ. ಎಂ.ಬಿ. ದಳಪತಿ. ಡಾ. ಎನ್.ಆರ್. ಬಾಳಿಕಾಯಿ, ಡಾ. ಲಕ್ಷ್ಮಣ, ಡಾ. ಪೊಲಿಸ್ ಪಾಟೀಲ, ಡಾ. ಜಗದೀಶಗೌಡ, ಡಾ. ಆರ್.ಎನ್. ಮರೇಪ್ಪಗೌಡರ, ಡಾ. ಬಸಪ್ಪ ಅಥಣಿ ಇದ್ದರು.