ನಾಲ್ಕು ಗಂಟೆಯಲ್ಲಿ ವೃದ್ಧಾಪ್ಯ ವೇತನ ದೊರಕಿಸಿ ಕೊಟ್ಟ ತಹಸೀಲ್ದಾರ್‌

KannadaprabhaNewsNetwork |  
Published : Feb 18, 2024, 01:32 AM IST
ನರಸಪ್ಪ | Kannada Prabha

ಸಾರಾಂಶ

ವೃದ್ಧೆ ಶೀಲಾ ಒಬ್ಬಂಟಿಯಾಗಿದ್ದು, ಸರ್ಕಾರದ ಯಾವುದೇ ಯೋಜನೆಯ ಫಲಾನುಭವಿಯಲ್ಲ. ರೇಷನ್ ಕಾರ್ಡ್ ಇದ್ದರೂ ಗೃಹಲಕ್ಷ್ಮೀ ಸೇರಿದಂತೆ ಯಾವ ಸವಲತ್ತುಗಳು ಸಿಕ್ಕಿಲ್ಲ. ವೃದ್ಧೆಯ ಸಮಸ್ಯೆ ಆಲಿಸಿದ ತಹಸೀಲ್ದಾರ್‌ ಕಾಳಜಿ ವಹಿಸಿದರು.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳಸರ್ಕಾರದ ಸವಲತ್ತುಗಳನ್ನು ಪಡೆಯಲು ಸರ್ಕಾರಿ ಕಚೇರಿಗಳಲ್ಲಿ ಫಲಾನುಭವಿಗಳು ಅಲೆಯಬೇಕಾದ ಸ್ಥಿತಿ ಇರುವ ಇಂದಿನ ಕಾಲದಲ್ಲಿ ಫಲಾನುಭವಿಯನ್ನು ಗುರುತಿಸಿ ಕೇವಲ ನಾಲ್ಕು ಗಂಟೆಗಳಲ್ಲಿ ಪರಿಹಾರ ಸೂಚಿಸಿದ ವಿದ್ಯಮಾನ ಕಾರ್ಕಳ ತಹಸೀಲ್ದಾರ್‌ ಕಚೇರಿಯಲ್ಲಿ ನಡೆದಿದ್ದು, ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ.ಕಾರ್ಕಳ ತಾಲೂಕಿನ ಕೆರುವಾಶೆಯ ಗ್ರಾಮೀಣ ಪ್ರದೇಶದ ನಿವಾಸಿ 70 ವರ್ಷದ ವೃದ್ಧೆ ಶೀಲಾ ಮಲೆಕುಡಿಯ, ಆಧಾರ್ ಕಾರ್ಡ್‌ಗೆ ಮೊಬೈಲ್ ನಂಬರ್ ಲಿಂಕ್ ಮಾಡಲು ತಾಲೂಕು ಆಫೀಸ್‌ಗೆ ಬಂದಿದ್ದರು. ಈ ವೇಳೆ ತಹಸೀಲ್ದಾರ್‌ ನರಸಪ್ಪ ಅವರು ವೃದ್ಧೆಯನ್ನು ಕಂಡು ಮಾತನಾಡಿಸಿದಾಗ ಅವರು ತಮ್ಮ ಸಮಸ್ಯೆಯನ್ನು ತಹಸೀಲ್ದಾರ್‌ ಬಳಿ ತಿಳಿಸಿದರು.

ವೃದ್ಧೆ ಶೀಲಾ ಒಬ್ಬಂಟಿಯಾಗಿದ್ದು, ಸರ್ಕಾರದ ಯಾವುದೇ ಯೋಜನೆಯ ಫಲಾನುಭವಿಯಲ್ಲ. ರೇಷನ್ ಕಾರ್ಡ್ ಇದ್ದರೂ ಗೃಹಲಕ್ಷ್ಮೀ ಸೇರಿದಂತೆ ಯಾವ ಸವಲತ್ತುಗಳು ಸಿಕ್ಕಿಲ್ಲ.

ಸರ್ಕಾರಿ ಸವಲತ್ತುಗಳಿಂದ ವಂಚಿತರಾದ ವೃದ್ಧೆಯ ಸಮಸ್ಯೆಯನ್ನು ಆಲಿಸಿದ ತಹಸೀಲ್ದಾರ್ ನರಸಪ್ಪ, ತಕ್ಷಣಕ್ಕೆ ವೃದ್ಧಾಪ್ಯ ವೇತನವನ್ನು ಮಂಜೂರು ಮಾಡಬೇಕೆಂದು ಅಜೆಕಾರು ಉಪತಹಸೀಲ್ದಾರ್‌ಗೆ ಆದೇಶ ನೀಡಿದರು.

* ಶೀಘ್ರ ಕೆಲಸ

ಅಜೆಕಾರು ನಾಡಕಚೇರಿಯ ಉಪತಹಸೀಲ್ದಾರ್ ನಮಿತಾ ಬಿ. ಅರ್ಜಿಯನ್ನು ಸಲ್ಲಿಸಿ ಅವರ ನೇತೃತ್ವದಲ್ಲಿ ಶಿರ್ಲಾಲು ಕರ್ಣಾಟಕ ಬ್ಯಾಂಕ್ ಶಾಖೆಯಲ್ಲಿ ಫಲಾನುಭವಿ ಶೀಲಾ ಅವರ ಖಾತೆ ತೆರೆಸಿ, ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಅನುಷಾ ಅವರಿಂದ ವಯಸ್ಸಿನ ದೃಢಪ್ರತಿ ಪಡೆಯಲಾಯಿತು. ಕೆರುವಾಶೆ ಗ್ರಾಮ ಆಡಳಿತಾಧಿಕಾರಿ ರವಿಚಂದ್ರ ಪಾಟೀಲ್, ಕಂದಾಯ ನಿರೀಕ್ಷಕ ಮೊಹಮ್ಮದ್ ರಿಯಾಜ್ ಸಂಬಂಧಿತ ಎಲ್ಲ ವರದಿಗಳನ್ನು ತರಿಸಿದ ಉಪತಹಸೀಲ್ದಾರ್, ತಹಸೀಲ್ದಾರ್‌ಗೆ ಹಸ್ತಾಂತರಿಸಿದರು.ಬಳಿಕ ತಹಸೀಲ್ದಾರ್ ನರಸಪ್ಪ, ಸಂಧ್ಯಾ ಸುರಕ್ಷಾ ಯೋಜನೆಯನ್ನು ಮಂಜೂರುಗೊಳಿಸಿ ಮಂಜುರಾತಿ ಪತ್ರವನ್ನು ಶೀಲಾ ಅವರಿಗೆ ಹಸ್ತಾಂತರಿಸಿದರು. ನಂತರ ಶೀಲಾ ಅವರ ಸುಮಾರು 22 ವರ್ಷಗಳಿಂದ ಖಾತೆ ಬದಲಾವಣೆಯಾಗಿರದ ಪಹಣಿಯನ್ನು ಬದಲಾಯಿಸುವ ಬಗ್ಗೆ ಭರವಸೆ ನೀಡಿ, ಸಂಬಂಧಿತ ಇಲಾಖೆಗೆ ಮಾಹಿತಿ ನೀಡಿದರು.

ಶೀಲಾ ಅವರಿಗೆ ಸೇವೆ ಒದಗಿಸುವಲ್ಲಿ ಕರ್ಣಾಟಕ ಬ್ಯಾಂಕ್ ಸಿಬ್ಬಂದಿ ಗಾಯತ್ರಿ ಶೆಣೈ, ಮುಖ್ಯ ಪ್ರಬಂಧಕ ಉದಯ ಶಂಕರ್, ಅಜೆಕಾರು ನೆಮ್ಮದಿ ಕೇಂದ್ರದ ಸುರೇಂದ್ರ ನಾಯ್ಕ್, ಭೋಜೆಗೌಡ ಸಹಕಾರ ನೀಡಿದ್ದಾರೆ.

* ಪ್ರಾಮಾಣಿಕ ಅಧಿಕಾರಿ

ತಹಸೀಲ್ದಾರ್ ನರಸಪ್ಪ, ರಾಯಚೂರು ಜಿಲ್ಲೆಯ ಸಿಂಧನೂರು ತಾಲುಕಿನ ಸಾಲಗುಂದ ಗ್ರಾಮದವರು. ಅವರು 13 ವರ್ಷಗಳ ಕಾಲ ಶಿಕ್ಷಕರಾಗಿ, ಬಳಿಕ ಕೆಎಎಸ್ ಪರೀಕ್ಷೆ ಬರೆದು ಲಿಂಗಸೂರು ಪುರಸಭೆಯ ಮುಖ್ಯಾಧಿಕಾರಿಯಾಗಿ ಕರ್ತವ್ಯ ಸಲ್ಲಿಸಿದ್ದರು. ಬಳಿಕ ಕಾರ್ಕಳ ತಹಸೀಲ್ದಾರ್‌ ಆಗಿ ನಿಯೋಜನೆಗೊಂಡಿದ್ದರು.

ಸರ್ಕಾರ ನೀಡುವ ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸುವ ಪ್ರಮಾಣಿಕ ಪ್ರಯತ್ನ ಮಾಡಿದ್ದೇವೆ. ಸರ್ಕಾರ ನೀಡುವ ಎಲ್ಲ ಸೇವೆಗಳನ್ನು ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳಬೇಕು.

। ನರಸಪ್ಪ, ತಹಸೀಲ್ದಾರ್ ಕಾರ್ಕಳ

-----ವೃದ್ಧಾಪ್ಯ ವೇತನ ಯೋಜನೆ ನನಗೆ ನೀಡಿರುವುದು ಖುಷಿ ತಂದಿದೆ. ಬದುಕಿಗೆ ಭದ್ರತೆ ನೀಡುತ್ತದೆ.। ಶೀಲಾ, ವೃದ್ಧಾಪ್ಯ ವೇತನ ಪಡೆದ ಫಲಾನುಭವಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಕನಿಷ್ಠ ಆದಾಯ ಮಿತಿ 3 ಲಕ್ಷ ರು.ಗೆ ಏರಿಕೆ: ಮುನಿಯಪ್ಪ
ಏ.1ರಿಂದ ರಾಜ್ಯದ ರಾಷ್ಟ್ರೀಯ ಹೆದ್ದಾರಿ ಟೋಲ್‌ ಶುಲ್ಕ ಹೆಚ್ಚಳ