ಛತ್ರಿ ಹಿಡಿದುಕೊಂಡೇ ತಹಸೀಲ್ದಾರ್‌ ಕಚೇರಿ ಸಿಬ್ಬಂದಿ ಕಾರ್ಯ

KannadaprabhaNewsNetwork | Published : Jul 27, 2024 12:48 AM

ಸಾರಾಂಶ

ಹಾವೇರಿ ನಗರದ ತಹಸೀಲ್ದಾರ್ ಕಚೇರಿ ಚಾವಣಿ ಸೋರುತ್ತಿದ್ದರಿಂದ ಇಲ್ಲಿನ ಸಿಬ್ಬಂದಿ ಛತ್ರಿ ಹಿಡಿದುಕೊಂಡೆ ಕಾರ್ಯನಿರ್ವಹಿಸುವ ಸ್ಥಿತಿ ಎದುರಾಗಿದೆ.

ಹಾವೇರಿ: ನಗರದ ತಹಸೀಲ್ದಾರ್ ಕಚೇರಿ ಚಾವಣಿ ಸೋರುತ್ತಿದ್ದರಿಂದ ಇಲ್ಲಿನ ಸಿಬ್ಬಂದಿ ಛತ್ರಿ ಹಿಡಿದುಕೊಂಡೆ ಕಾರ್ಯನಿರ್ವಹಿಸುವ ಸ್ಥಿತಿ ಎದುರಾಗಿದೆ.

ಕಳೆದ ಎಂಟು ಹತ್ತು ದಿನಗಳಿಂದ ಆಗುತ್ತಿರುವ ಮಳೆಯಿಂದಾಗಿ ನಗರದ ತಹಸೀಲ್ದಾ‌ರ್ ಕಚೇರಿ ಚಾವಣಿ ಸೋರುತ್ತಿದ್ದು, ಕಚೇರಿಯಲ್ಲಿನ ದಾಖಲೆಗಳನ್ನು ಸಂರಕ್ಷಿಸಲು ಸಿಬ್ಬಂದಿ ಪರದಾಡುತ್ತಿದ್ದರು. ಚಾವಣಿಗೆ ತಾಡಪತ್ರೆ ಕಟ್ಟಿ ನೀರು ಒಂದಡೆ ಸಂಗ್ರಹವಾಗುವಂತೆ ಮಾಡಿ ಬಕೆಟ್ ಮೂಲಕ ನೀರು ಹೊರಹಾಕುತ್ತಿದ್ದರು. ರಾತ್ರಿ ಇಟ್ಟು ಹೋಗುವ ಬಕೆಟ್ ಬೆಳಗ್ಗೆ ಕಚೇರಿಗೆ ಬರುವ ವೇಳೆಗೆ ತುಂಬಿ ನೀರು ಹೊರಚೆಲ್ಲಿರುತ್ತದೆ. ಆ ನೀರನ್ನು ಹೊರಹಾಕಲು ಸಿಬ್ಬಂದಿ ಸಾಹಸಪಡುತ್ತಿದ್ದಾರೆ ಆದರೆ, ಶುಕ್ರವಾರ ಮಳೆಯಿಂದಾಗಿ ರಕ್ಷಿಸಿಕೊಳ್ಳಲು ಕಚೇರಿಯ ಸಿಬ್ಬಂದಿ ಕೊಡೆ ಹಿಡಿದುಕೊಂಡು ಕೆಲಸ ಮಾಡಬೇಕಾಯಿತು. ಕಚೇರಿ ಚಾವಣಿ ಸೋರುತ್ತಿರುವ ಹಿನ್ನೆಲೆ ಜಿಲ್ಲಾಧಿಕಾರಿಗಳು ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿ ದುರಸ್ತಿಗೆ ಕ್ರಮ‌ಕೈಗೊಳ್ಳಲು ಸೂಚಿಸಿದ್ದಾರೆ. ಆದರೆ ನಿರಂತರ ಮಳೆ ಆಗುತ್ತಿದ್ದರಿಂದ ಚಾವಣಿ ದುರಸ್ತಿ ಕಾರ್ಯಕ್ಕೂ ಅಡ್ಡಿಯಾಗಿದೆ. ಹೀಗಾಗಿ ಇಲ್ಲಿನ ಸಿಬ್ಬಂದಿ ಅನಿವಾರ್ಯವಾಗಿ ಕೊಡೆ ಹಿಡಿದು ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ತಹಶೀಲ್ದಾರ ಕಚೇರಿಯ ಮೊದಲ ಮಹಡಿಯಲ್ಲಿರುವ ಭೂದಾಖಲೆಗಳ ಕಚೇರಿಯಲ್ಲಿ ಸೋರುವ ಕುರಿತು ಕನ್ನಡಪ್ರಭ ಮಂಗಳವಾರ ಸಮಗ್ರ ವರದಿ ಮಾಡಿತ್ತಾದರೂ ಸಹ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.ಮಳೆ ನೀರು ಸೋರಿಕೆಯಿಂದ ಆದಾಯ, ಜಾತಿ, ಆಸ್ತಿ ಪತ್ರಗಳು ಹಾಗೂ ಕಚೇರಿ ಪ್ರತಿಗಳು ಒದ್ದೆಯಾಗಿದ್ದು, ಸಿಬ್ಬಂದಿ ಅವುಗಳನ್ನು ಒಣಗಿಸಲು ಹಾಕುತ್ತಿದ್ದಾರೆ. ಮಹತ್ವದ ದಾಖಲೆಗಳು, ಕಂಪ್ಯೂಟ‌ರ್ ರಕ್ಷಿಸಿಕೊಳ್ಳುವುದೇ ಇಲ್ಲಿನ ಸಿಬ್ಬಂದಿಗೆ ದೊಡ್ಡ ಸವಾಲಾಗಿದ್ದು ಕೂಡಲೇ ಕಟ್ಟದ ದುರಸ್ತಿ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ನಿರಂತರ ಮಳೆಯಿಂದಾಗಿ ಕಚೇರಿಯ ಚಾವಣಿ ಸೋರುತ್ತಿದೆ. 8 ಲಕ್ಷ ವೆಚ್ಚದಲ್ಲಿ ಕಚೇರಿ ಚಾವಣಿಗೆ ಸೀಟ್ ಅಳವಡಿಸಲು ಮುಂದಾಗಿದ್ದು, ಇನ್ನು ಎರಡು ದಿನಗಳಲ್ಲಿ ಸೀಟ್ ಅಳವಡಿಕೆ ಕಾರ್ಯ ಮುಗಿಯಲಿದೆ ಎಂದು ತಹಸೀಲ್ದಾರ್‌ ಜಿ.ಎಸ್‌. ಶಂಕರ ಹೇಳಿದರು.

Share this article