ಗೊಬ್ಬರಗಳ ಅವೈಜ್ಞಾನಿಕ ಬೆಲೆಯ ನಿಯಂತ್ರಣ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರಟ್ಟೀಹಳ್ಳಿ: ಬೀಜ ನಿಯಂತ್ರಣ ಕಾಯ್ದೆಯಡಿ ಸರಕಾರಗಳು ಬಿತ್ತನೆ ಬೀಜದ ದರವನ್ನು ನಿಯಂತ್ರಣ ಮಾಡಬೇಕು. ಗೊಬ್ಬರಗಳ ಅವೈಜ್ಞಾನಿಕ ಬೆಲೆಯ ನಿಯಂತ್ರಣ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಮೆಕ್ಕಜೋಳ ಬೀಜದ ಕಂಪನಿಗಳು ಈ ಹಿಂದೆ 200 ರಿಂದ 500ಕ್ಕೆ ಮಾರಾಟ ಮಾಡುತ್ತಿದ್ದ ಕಂಪನಿಗಳು ಪ್ರಸ್ತುತ 1400 ರಿಂದ 2800ಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ರೈತರು ವಕ್ಕಲುತನ ಮಾಡುವುದೇ ದುಸ್ತರವಾಗಿದೆ. ಇದೆಲ್ಲ ಗೊತ್ತಿದ್ದರೂ ಸರಕಾರಗಳು ಜಾಣ ಕುರುಡು ಪ್ರದರ್ಶಿಸುತ್ತಿವೆ. ಕೂಡಲೇ ಅವೈಜ್ಞಾನಿಕ ದರದ ನೀತಿಯನ್ನು ನಿಯಂತ್ರಣ ಮಾಡಬೇಕು ಎಂದು ಆಗ್ರಹಿಸಿದರು.
ರಸಗೊಬ್ಬರದ ದರವನ್ನು ವರ್ಷದಲ್ಲಿ ನಾಲ್ಕು ಬಾರಿ ಏರಿಸಿದ್ದು ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಪ್ರತಿ 50.ಕೆಜಿ ಡಿ.ಎ.ಪಿ. ಹಾಗೂ ಕಾಂಪ್ಲೆಕ್ಸ್ ದರ ₹600 ರಿಂದ ₹800ಕ್ಕೆ ಏರಿಸಿದ್ದು, ಈ ಬಗ್ಗೆ ಶಾಸಕರು ತಹಸೀಲ್ದಾರ್ ಹಾಗೂ ರೈತ ಮುಖಂಡರ ಜೊತೆ ಚರ್ಚಿಸಿ ಸರಕಾರಕ್ಕೆ ಮನವರಿಕೆ ಮಾಡುವಂತೆ ಮನವಿ ಮಾಡಿದರು.
ಈ ಹಿಂದೆ ಪ್ರತಿಭಟನೆ ಸಂದರ್ಭದಲ್ಲಿ ರಾಣಿಬೆನ್ನೂರ ಹೆಸ್ಕಾಂ ಅಧಿಕಾರಿಗಳಿಗೆ ಮತ್ತು ಹಾವೇರಿ ಎಸ್.ಇ. ಅವರಿಗೆ ಮನವಿ ಮಾಡಿ ತಿಂಗಳ ಒಳಗೆ ಎಲ್.ಟಿ. ಲೈನ್ ಹಾಗೂ ಟಿಸಿಗಳನ್ನು ನೀಡಿವುದಾಗಿ ವಾಗ್ದಾನ ನೀಡಿದ್ದರು. ಓವರ್ ಲೋಡ್ ಆದ ಟಿಸಿಗಳನ್ನು ಒಂದು ತಿಂಗಳ ಒಳಗಾಗಿ ಬದಲಿಸಿ ಕೊಡಲು ಹುಬ್ಬಳ್ಳಿ ಎಂಡಿ ಅವರ ಗಮನಕ್ಕೂ ತಂದರೂ ಇಲ್ಲಿ ವರೆಗೆ ಯಾವುದೇ ಕೆಲಸ ಆಗಿಲ್ಲ. ಒಂದು ವಾರದೊಳಗೆ ಸರಿಪಡಿಸದಿದ್ದರೆ ಹಿರೇಕೆರೂರ ಹೆಸ್ಕಾಂ ಕಚೇರಿ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕೇಂದ್ರ ಹಾಗೂ ರಾಜ್ಯಸರಕಾರಗಳು ವಿದ್ಯುತ್ ಖಾಸಗೀಕರಣ ಮಾಡಲು ನಿರ್ಧರಿಸಿದ್ದು, ಕರ್ನಾಟಕದ 19 ಜಿಲ್ಲೆಗಳನ್ನು ಟಾಟಾ ಕಂಪನಿಗೆ ವಿದ್ಯುತ್ ವಿತರಣೆಯ ಜವಾಬ್ದಾರಿಯನ್ನು ನೀಡುವ ತಿರ್ಮಾನದಿಂದ ತಾಲೂಕಿನ ರೈತರ ಪಂಪ ಸೆಟ್‍ಗಳಿಗೆ ಡಿಜಿಟಲ್ ಮೀಟರ್ ಅಳವಡಿಸುವ ಹುನ್ನಾರ ನಡೆಸಿದ್ದು ಇಂತಹ ರೈತ ವಿರೋಧಿ ನಿತಿಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಶಿಗ್ಗಾಂವಿ: ಕೇಂದ್ರ ಸರ್ಕಾರ ವಿದ್ಯುತ್ ಖಾಸಗಿಕರಣ ಮಾಡುತ್ತಿರುವುದನ್ನು ವಿರೋಧಿಸಿ ಹಾಗೂ ರಸಗೊಬ್ಬರ ಏಕರೂಪ ದರ ನಿಗದಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಿಗ್ಗಾಂವ ತಾಲೂಕು ಘಟಕದಿಂದ ಪ್ರತಿಭಟನೆ ಮಾಡಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಲಾಭ ನಷ್ಟ ವಿಚಾರ ಗಮನಿಸದೇ ಖಾಸಗಿಕರಣ ಕೂಡಲೇ ಕೈ ಬಿಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಮಾನಗಳಲ್ಲಿ ನಿರಂತರ ಧರಣಿ ಮಾಡಬೇಕಾಗುತ್ತದೆ. ರೈತರನ್ನು ದಾರಿ ತಪ್ಪಿಸುತ್ತಿರುವ ಕೇಂದ್ರ ಸರ್ಕಾರ ನಡೆಯನ್ನು ತೀವ್ರವಾಗಿ ವಿರೋಧಿಸಲಾಯಿತು.ರಸಗೊಬ್ಬರದ ಏಕರೂಪ ದರ ಮತ್ತು ಶಿಗ್ಗಾಂವ ತಾಲೂಕಿನಲ್ಲಿ ಯುರಿಯಾ ಗೊಬ್ಬರದ ಕೊರತೆ ನೀಗಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ತಾಲೂಕಾಧ್ಯಕ್ಷ ಆನಂದ ಕೆಳಗಿನಮನಿ, ಉಪಾಧ್ಯಕ್ಷ ಶಂಕರಗೌಡ ಪಾಟೀಲ, ಮುಖಂಡರಾದ ಈರಣ್ಣ ಸಮಗೊಂಡ, ನಾಗರಾಜ ಅಂಗಡಿ, ಪ್ರಕಾಶಗೌಡ ಮಣ್ಣೂರ, ನಾಗರಾಜ ಸೌಳಿ, ರಾಮನಗೌಡ್ರ ಗೌಳಿಗೌಡ್ರ, ಚಂದ್ರಶೇಖರ ಬಿ. ಹಿರೇಮಠ, ಸೇರಿದಂತೆ ಹಲವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.