ತೇಜಸ್ವಿಯವರ ಬದುಕು, ಬರಹ ವಿಸ್ಮಯದಿಂದ ಕೂಡಿದೆ: ಜಯಂತ್ ಕಾಯ್ಕಿಣಿ

KannadaprabhaNewsNetwork |  
Published : Oct 08, 2025, 01:00 AM IST
7ಕೆಎಂಎನ್ ಡಿ16 | Kannada Prabha

ಸಾರಾಂಶ

ಹೊಸ ತಲೆಮಾರಿನ ಓದುಗರು ಪಶ್ಚಿಮ ಘಟ್ಟ ಸೇರಿದಂತೆ ಹಲವು ವಿಷಯಗಳ ಕುರಿತು ಮಾಹಿತಿ ಪೂರ್ಣ ಬರಹಗಳನ್ನು ಹೆಚ್ಚಾಗಿ ಓದುತ್ತಿದ್ದಾರೆ. ಕತೆ, ಕಾವ್ಯ, ಕಾದಂಬರಿಯಂತಹ ಸೃಜನಶೀಲ ಬರಹಗಳನ್ನು ಓದುವವರ ಸಂಖ್ಯೆ ತೀರಾ ಕಡಿಮೆ. ಇಂದಿನ ಯುವಜನರಿಗೆ ಆಯ್ಕೆ ಸಂಕಟಗಳಿವೆ. ತೇಜಸ್ವಿಯವರ ಕತೆಗಳನ್ನು ತಮ್ಮ ಕಿಟಕಿ ತೆರೆದು ನೋಡಬೇಕಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸಾಹಿತಿ ತೇಜಸ್ವಿಯವರ ಬದುಕು ಮತ್ತು ಬರಹ ವಿಸ್ಮಯದಿಂದ ಕೂಡಿದೆ. ಅವರ ಕತೆಗಳು ಬದುಕಿನ ಬಗ್ಗೆ ಪ್ರೀತಿ ಹುಟ್ಟಿಸಿ ಪರ್ಯಾಯ ಲೋಕವನ್ನೇ ಕಟ್ಟಿಕೊಡುತ್ತವೆ ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ತೇಜಸ್ವಿ ಬಳಗದಿಂದ ಕನ್ನಡ ಸಾಹಿತ್ಯ ಪರಿಷತ್ ಮತ್ತು ಮಕ್ಕಳ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ತೇಜಸ್ವಿ ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತೇಜಸ್ವಿ ಅವರ ಬರಹದಲ್ಲಿ ಕಾಂತತ್ವ ಗುಣವಿತ್ತು. ಅವರು ಕಂಪನ ಕೇಂದ್ರವಾಗಿದ್ದರು. ಸಾಮಾಜಿಕ ಮಾಧ್ಯಮಗಳು ಇಲ್ಲದ ಕಾಲಘಟ್ಟದಲ್ಲಿ ನಮ್ಮನ್ನೆಲ್ಲ ಅವರು ತಮ್ಮ ಬರಹದ ಮೂಲಕ ಒಂದುಗೂಡಿಸಿದರು ಎಂದರು.

ಹೊಸ ತಲೆಮಾರಿನ ಓದುಗರು ಪಶ್ಚಿಮ ಘಟ್ಟ ಸೇರಿದಂತೆ ಹಲವು ವಿಷಯಗಳ ಕುರಿತು ಮಾಹಿತಿ ಪೂರ್ಣ ಬರಹಗಳನ್ನು ಹೆಚ್ಚಾಗಿ ಓದುತ್ತಿದ್ದಾರೆ. ಕತೆ, ಕಾವ್ಯ, ಕಾದಂಬರಿಯಂತಹ ಸೃಜನಶೀಲ ಬರಹಗಳನ್ನು ಓದುವವರ ಸಂಖ್ಯೆ ತೀರಾ ಕಡಿಮೆ. ಇಂದಿನ ಯುವಜನರಿಗೆ ಆಯ್ಕೆ ಸಂಕಟಗಳಿವೆ. ತೇಜಸ್ವಿಯವರ ಕತೆಗಳನ್ನು ತಮ್ಮ ಕಿಟಕಿ ತೆರೆದು ನೋಡಬೇಕಿದೆ ಎಂದರು.

ನಿಶ್ಯಬ್ದ ತೇಜಸ್ವಿಯವರ ಅವಿಭಾಜ್ಯ ಅಂಗವಾಗಿತ್ತು. ಮಾತಿನ ಅವಶ್ಯವಿಲ್ಲದ ಬರಹ, ಛಾಯಾಗ್ರಹಣ, ಮೀನಿಗೆ ಗಾಳ ಹಾಕುವ ಹವ್ಯಾಸಗಳನ್ನು ರೂಢಿಸಿಕೊಂಡಿದ್ದರು. ಅವರ ಬದುಕು ಮತ್ತು ಬರಹ ಒಂದು ರೀತಿಯಲ್ಲಿ ವಿಸ್ಮಯದಿಂದ ಕೂಡಿತ್ತು ಎಂದು ಬಣ್ಣಿಸಿದರು.

ತೇಜಸ್ವಿ ಅವರ ನಿಗೂಢ ಮನುಷ್ಯರು, ಮಾಯಾಲೋಕ, ಕರ್ವಾಲೊ ಕೃತಿಗಳಲ್ಲಿನ ಸೈಲೆನ್ಸ್ ನಮ್ಮನ್ನು ಸೆಳೆಯುತ್ತದೆ. ಸಮತ ಮತ್ತು ಮಮತೆಗಿಂತ ಮಿಗಿಲಾದ ಆಧ್ಯಾತ್ಮವಿಲ್ಲ ಎಂಬುವನ್ನು ತೇಜಸ್ವಿ ನಂಬಿದ್ದರು. ಈ ಮೌಲ್ಯ, ಆದರ್ಶಗಳನ್ನು ಇಂದಿನ ಸ್ಥಿತಿಯಲ್ಲಿ ಪುನ‌ರ್ ಸ್ಥಾಪಿಸುವ ಅಗತ್ಯವಿದೆ ಎಂದರು.

ಮೌನವಾಗಿದ್ದುಕೊಂಡೇ ಅವರು ಅನೇಕ ಹೋರಾಟಗಳನ್ನು ನಡೆಸಿದರು. ಅಂತರಂಗ ಬಹಿರಂಗದಲ್ಲಿ ವ್ಯತ್ಯಾಸಗಳಿಲ್ಲದಂತೆ ಬದುಕಿದ್ದರು. ಸಮಾಜ ಮತ್ತು ಬದುಕನ್ನು ಪ್ರೀತಿಸಿದಾಗ ಅದು ಖಾಸಗಿಯಾಗುತ್ತದೆ. ನಾವು ಖಾಸಗಿಯಾಗಿ ಗಳಿಸಿದ್ದು ಸಾಮಾಜಿಕವಾಗುತ್ತದೆ. ಆಗ ಬದುಕು ಸರಳವಾಗುತ್ತದೆ ಎಂದು ಅರ್ಥೈಸಿದರು ಎಂದರು.

ನಾವು ಬಳಸುವ ಪ್ರತಿ ವಸ್ತುಗಳ ತಯಾರಿಕೆಯಲ್ಲಿ ಶ್ರಮಿಕ ವರ್ಗದವರ ಬೆವರಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಾವು ಶ್ರಮಿಕರ ಋಣದಲ್ಲಿ ಬದುಕುತ್ತಿದ್ದೇವೆ. ಈ ಋಣಾನುಬಂಧವನ್ನು ಎಂದಿಗೂ ಮರೆಯಬಾರದು. ಸಾಮಾಜಿಕ ಋಣಾನುಬಂಧದ ಬಗ್ಗೆ ಬರೆಯುವುದೇ ಸಾಹಿತ್ಯ. ತೇಜಸ್ವಿ ಬರಹಗಳನ್ನು ಓದುವಾಗ ಅವರು ನಮ್ಮ ಬಗ್ಗೆ ಹೇಳುತ್ತಿದ್ದಾರೆ. ನಮ್ಮನ್ನು ಪ್ರೀತಿಸುತ್ತಿದ್ದಾರೆ ಅಂತ ಅನಿಸುತ್ತದೆ. ಹೀಗಾಗಿ ತೇಜಸ್ವಿ ಎಲ್ಲರಿಗೂ ಅಪ್ತರಾಗುತ್ತಾರೆ ಎಂದರು.

ನಮ್ಮನ್ನು ಮತ್ತಷ್ಟು ಕೌಟುಂಬಿಕವಾಗಿಸುವ, ಮಾನವೀಯವಾಗಿಸುವ ದೊಡ್ಡ ಅವರಣವೇ ಸಾಹಿತ್ಯ. ಸಮಾಜವೇ ಒಂದು ಕುಟುಂಬ ಅಂತ ನಂಬಿ ಬರೆದವರು ತೇಜಸ್ವಿ. ತೇಜಸ್ವಿ ಬಳಗ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ರಂಗಭೂಮಿ ನಿರ್ದೇಶಕ, ಚಿತ್ರನಟ ಮಂಡ್ಯ ರಮೇಶ್ ಮತ್ತು ಪ್ರಗತಿಪರ ಚಿಂತಕ ಎಂ.ವಿ.ಕೃಷ್ಣ, ಬಿಜಿಎಸ್ ಆಸ್ಪತ್ರೆ ತಜ್ಞವೈದ್ಯ ಡಾ.ಕೃಷ್ಣ ಅವರು ತೇಜಸ್ವಿ ಕುರಿತು ಮಾತನಾಡಿದರು. ಇದೇ ವೇಳೆ ಜಯಂತ್ ಕಾಯ್ಕಿಣಿ ಅವರಿಗೆ ತೇಜಸ್ವಿ ಬಳಗದ ವತಿಯಿಂದ ಗೌರೀಶ ಕಾಯ್ಕಿಣಿ ಅವರೊಂದಿಗೆ ಜಯಂತ್ ಇರುವ ಭಾವಚಿತ್ರವನ್ನು ನೀಡಿ ಗೌರವಿಸಲಾಯಿತು.

ಭೈರಪ್ಪಗೆ ಶ್ರದ್ಧಾಂಜಲಿ:

ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್. ಭೈರಪ್ಪ ಮತ್ತು ರಂಗಕರ್ಮಿ ಯಶವಂತ ಸರದೇಶಪಾಂಡೆ ಅವರ ಭಾವಚಿತ್ರಕ್ಕೆ ಕಾರ್ಯಕ್ರಮದಲ್ಲಿ ಗಣ್ಯರು ಪುಷ್ಪ ನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಉಪನ್ಯಾಸಕಿ ಉಷಾರಾಣಿ ನಿರೂಪಿಸಿದರು. ತೇಜಸ್ವಿ ಬಳಗದಡಾ.ಕೆ.ಎಸ್.ಅಭಿನಯ್ ತೇಜಸ್ವಿ ಪ್ರಾಸ್ತಾವಿಕ ನುಡಿಗಳ ನ್ನಾಡಿದರು. ನಾಗಲಿಂಗೇಗೌಡ ಅವರು ಕಾವ್ಯವನ್ನು ಹಾಡಿದರು.

ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ಪ್ರಗತಿಪರ ಕೃಷಿಕ ನವೀನ್ ಸಂಗಾಪುರ,ಎಚ್.ಆರ್. ಧನ್ಯಕುಮಾರ್, ಮೋಹನ್ ಕುಮಾರ್, ಅಮಿತ್ ಕೃಷ್ಣ, ಹಾರೋಹಳ್ಳಿ ಡಿ.ಗುರುಮೂರ್ತಿ, ಕೆ.ಎಸ್.ಮನು, ಶಿಕ್ಷಕ ಕುಮಾರ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!