ಟೆಲಿ-ಮಾನಸ್‌: 42 ಲಕ್ಷಕ್ಕೂ ಅಧಿಕ ಕರೆಗಳಿಗೆ ಸ್ಪಂದನೆ

KannadaprabhaNewsNetwork |  
Published : Aug 03, 2026, 01:45 AM IST
ಕ್ಯಾಪ್ಷನ1ಕೆಡಿವಿಜಿ32 ಡಾ.ಪ್ರಭಾ ಮಲ್ಲಿಕಾರ್ಜುನ್‌  | Kannada Prabha

ಸಾರಾಂಶ

ದೇಶಾದ್ಯಂತ ಮಾನಸಿಕ ಆರೋಗ್ಯ ಸಂಬಂಧಿತ ಸವಾಲುಗಳು, ಆರೋಗ್ಯ ಸೇವೆಗಳ ಲಭ್ಯತೆಯಲ್ಲಿನ ಕೊರತೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತಜ್ಞ ವೈದ್ಯಕೀಯ ಸೇವೆಗಳ ಸ್ಥಿತಿಗತಿ ಕುರಿತು ಪ್ರಶ್ನೆಕೇಳಿದ್ದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರಿಗೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವಿವರವಾದ ಲಿಖಿತ ಉತ್ತರ ನೀಡಿದೆ.

- ದೇಶದಲ್ಲಿ ಮಾನಸಿಕ ಆರೋಗ್ಯ ಸೇವೆ ಬಲವರ್ಧನೆ ಕುರಿತ ಡಾ.ಪ್ರಭಾ ಪ್ರಶ್ನೆಗೆ ಕೇಂದ್ರ ಸರ್ಕಾರ ಮಾಹಿತಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶಾದ್ಯಂತ ಮಾನಸಿಕ ಆರೋಗ್ಯ ಸಂಬಂಧಿತ ಸವಾಲುಗಳು, ಆರೋಗ್ಯ ಸೇವೆಗಳ ಲಭ್ಯತೆಯಲ್ಲಿನ ಕೊರತೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತಜ್ಞ ವೈದ್ಯಕೀಯ ಸೇವೆಗಳ ಸ್ಥಿತಿಗತಿ ಕುರಿತು ಪ್ರಶ್ನೆಕೇಳಿದ್ದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರಿಗೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವಿವರವಾದ ಲಿಖಿತ ಉತ್ತರ ನೀಡಿದೆ.

ದೇಶದಲ್ಲಿ ಮಾನಸಿಕ ಆರೋಗ್ಯ ಮೂಲಸೌಕರ್ಯ ವಿಸ್ತರಣೆ, ಡಿಎಂಎಚ್‌ಪಿ ವ್ಯಾಪ್ತಿ, ಗ್ರಾಮೀಣ ಆರೋಗ್ಯ ಸೇವೆಯ ಸಮರ್ಪಕತೆ ಹಾಗೂ ಕರ್ನಾಟಕ, ವಿಶೇಷವಾಗಿ ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದಂತೆ ಯಾವುದೇ ಹೊಸ ಯೋಜನೆಗಳ ಅನುಮೋದನೆ ಆಗಿದೆಯೇ ಎಂಬ ಬಗ್ಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರು ಪ್ರಶ್ನೆ ಕೇಳಿದ್ದರು.

ಶೇ.10.6ರಷ್ಟು ವಯಸ್ಕರಲ್ಲಿ ಮಾನಸಿಕ ಅಸ್ವಸ್ಥತೆ:

ಇದಕ್ಕೆ ಪ್ರತಿಕ್ರಿಯಿಸಿದ ಸಚಿವಾಲಯ, ನಿಮ್ಹಾನ್ಸ್‌ ನಡೆಸಿದ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆಯ ಪ್ರಕಾರ 18 ವರ್ಷ ಮೇಲ್ಪಟ್ಟ ವಯಸ್ಕರಲ್ಲಿ ಸುಮಾರು ಶೇ.10.6ರಷ್ಟು ಜನರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಗಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ (ಎನ್‌ಎಂಎಚ್‌ಪಿ) ಜಾರಿಗೊಳಿಸಿದೆ. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು (ಡಿಎಂಎಚ್‌ಪಿ) 2025–26ನೇ ಸಾಲಿನ ವೇಳೆಗೆ ದೇಶದ 767 ಜಿಲ್ಲೆಗಳಿಗೆ ವಿಸ್ತರಿಸಲು ಅನುಮೋದನೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸೇವೆ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ) ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಮಟ್ಟದಲ್ಲಿ ಹೊರರೋಗಿ ಸೇವೆ, ಮಾನಸಿಕ ಆರೋಗ್ಯ ಮೌಲ್ಯಮಾಪನ, ಸಮಾಲೋಚನೆ, ಮನೋಸಾಮಾಜಿಕ ಚಿಕಿತ್ಸೆ, ಜಾಗೃತಿ ಕಾರ್ಯಕ್ರಮ ಹಾಗೂ ಆಂಬ್ಯುಲೆನ್ಸ್‌ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ 10 ಹಾಸಿಗೆಗಳ ಒಳರೋಗಿ ಮಾನಸಿಕ ಆರೋಗ್ಯ ಘಟಕ ಸ್ಥಾಪನೆಗೂ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಚಿವಾಲಯ ವಿವರಿಸಿದೆ.

ತಜ್ಞವೈದ್ಯರ ಕೊರತೆ ನೀಗಿಸಲು ದೇಶದಲ್ಲಿ 25 ಶ್ರೇಷ್ಠತಾ ಕೇಂದ್ರಗಳನ್ನು (ಸೆಂಟರ್ಸ್‌ ಆಫ್‌ ಎಕ್ಸಲೆನ್ಸ್‌) ಸ್ಥಾಪಿಸಲಾಗಿದ್ದು, 19 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 47 ಸ್ನಾತಕೋತ್ತರ ವಿಭಾಗಗಳಿಗೂ ನೆರವು ನೀಡಲಾಗಿದೆ. ಇದಲ್ಲದೇ, ದೇಶಾದ್ಯಂತ 1.8 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್‌ ಆರೋಗ್ಯ ಮಂದಿರಗಳಲ್ಲಿ ಮಾನಸಿಕ ಆರೋಗ್ಯ ಸೇವೆಯನ್ನು ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಯ ಭಾಗವಾಗಿ ಸೇರಿಸಲಾಗಿದೆ.

42 ಲಕ್ಷಕ್ಕೂ ಅಧಿಕ ಕರೆಗಳಿಗೆ ಟೆಲಿ-ಮಾನಸ್‌ ಸ್ಪಂದನೆ:

2022ರಿಂದ ಜಾರಿಯಲ್ಲಿರುವ ಟೆಲಿ-ಮಾನಸ್‌ ಸೇವೆ, ಉಚಿತ ಸಹಾಯವಾಣಿ 14416ರ ಮೂಲಕ 24×7 ಮಾನಸಿಕ ಆರೋಗ್ಯ ಸಮಾಲೋಚನೆ ನೀಡುತ್ತಿದೆ. 2026ರ ಜುಲೈ 27ರ ವೇಳೆಗೆ ದೇಶದ 36 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 53 ಟೆಲಿ-ಮಾನಸ್‌ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ. 20 ಭಾಷೆಗಳಲ್ಲಿ ಸೇವೆ ಒದಗಿಸಲಾಗುತ್ತಿದೆ. ಈವರೆಗೆ 42 ಲಕ್ಷಕ್ಕೂ ಅಧಿಕ ಕರೆಗಳಿಗೆ ಸ್ಪಂದಿಸಲಾಗಿದೆ. 2024ರಿಂದ ಟೆಲಿ-ಮಾನಸ್‌ ಮೊಬೈಲ್‌ ಆ್ಯಪ್‌ ಹಾಗೂ ವಿಡಿಯೊ ಸಮಾಲೋಚನೆ ಸೌಲಭ್ಯವನ್ನೂ ಆರಂಭಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಧಾರವಾಡದ ** DIMHANS **ಗೆ ಶ್ರೇಷ್ಠತಾ ಕೇಂದ್ರದ ಮಾನ್ಯತೆ:

ಕರ್ನಾಟಕಕ್ಕೆ ಸಂಬಂಧಿಸಿದಂತೆ, ಧಾರವಾಡದಲ್ಲಿರುವ ಧಾರವಾಡ ಇನ್‌ಸ್ಟಿಟ್ಯೂಟ್‌ ಆಫ್‌ ಮೆಂಟಲ್‌ ಹೆಲ್ತ್‌ ಅಂಡ್‌ ನ್ಯೂರೋ ಸೈನ್ಸಸ್‌ ** (DIMHANS) ** ಅನ್ನು ಕೇಂದ್ರ ಸರ್ಕಾರ ಶ್ರೇಷ್ಠತಾ ಕೇಂದ್ರವಾಗಿ (ಸೆಂಟರ್‌ ಆಫ್‌ ಎಕ್ಸಲೆನ್ಸ್‌) ಮಾನ್ಯತೆ ನೀಡಿದೆ. ದಾವಣಗೆರೆ ಜಿಲ್ಲೆಗೆ ನಿರ್ದಿಷ್ಟವಾಗಿ ಪ್ರತ್ಯೇಕ ಯೋಜನೆ ಅನುಮೋದನೆ ಬಗ್ಗೆ ಸಚಿವಾಲಯ ಪ್ರತ್ಯೇಕ ಮಾಹಿತಿ ನೀಡಿಲ್ಲವಾದರೂ, ರಾಷ್ಟ್ರೀಯಮಟ್ಟದ ಮೇಲಿನ ಎಲ್ಲ ಯೋಜನೆಗಳು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅನ್ವಯವಾಗುತ್ತವೆ ಎಂದು ಸ್ಪಷ್ಟಪಡಿಸಿದೆ.

ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯ ಹಾಗೂ ತಜ್ಞ ವೈದ್ಯಕೀಯ ಸೇವೆಗಳ ಸಮರ್ಪಕತೆ ಕುರಿತು ಎತ್ತಿದ ಪ್ರಶ್ನೆಗೆ, ಆಯುಷ್ಮಾನ್‌ ಆರೋಗ್ಯ ಮಂದಿರ ಹಾಗೂ ಡಿಎಂಎಚ್‌ಪಿ ವಿಸ್ತರಣೆಯ ಮೂಲಕ ಗ್ರಾಮೀಣ ಪ್ರದೇಶಗಳಲ್ಲೂ ಸೇವೆ ತಲುಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಚಿವಾಲಯ ಪ್ರತಿಕ್ರಿಯಿಸಿದೆ.

- - -

-1ಕೆಡಿವಿಜಿ32: ಡಾ.ಪ್ರಭಾ ಮಲ್ಲಿಕಾರ್ಜುನ್‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ
ಶಿಕ್ಷಣದಿಂದ ಮಾತ್ರ ಪಿಡುಗುಗಳನ್ನು ತಡೆಯಬಹುದು: ನ್ಯಾ. ಯೋಗೇಂದ್ರ ಶೆಟ್ಟಿ ಸಲಹೆ