- ಆರೆಸ್ಸೆಸ್ ಟೀಕಿಸುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ । ಆರೆಸ್ಸೆಸ್‌ಗೆ ನೂರಾರು ವರ್ಷಗಳ ಇತಿಹಾಸ - - -
ಆರೆಸ್ಸೆಸ್ ನೋಂದಣಿ ಮಾಡಿಸುವಂತೆ ಮೋಹನ ಭಾಗವತ್ ಅವರಿಗೆ ಪತ್ರ ಬರೆದಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಅಧಿಕಾರದ ಮದ ಹೆಚ್ಚಾದಂತೆ ಕಾಣುತ್ತದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮಗ ಎಂಬುದನ್ನು ಬಿಟ್ಟರೆ ಪ್ರಿಯಾಂಕ್ ಖರ್ಗೆ ಅವರಿಗೆ ಯಾವುದೇ ಐಡೆಂಟಿಟಿ ಸಹ ಇಲ್ಲ. ಇಂತಹ ವ್ಯಕ್ತಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಆರೆಸ್ಸೆಸ್ ಬಗ್ಗೆ ಮಾತನಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಸಂಘವನ್ನು ನೋಂದಣಿ ಮಾಡಿಸುವಂತೆ ಪತ್ರ ಬರೆಯಲು ಪ್ರಿಯಾಂಕ್ ಖರ್ಗೆ ಯಾರು? ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಬ್ರಿಟಿಷರ ಆಳ್ವಿಕೆಯಲ್ಲೇ ಆರೆಸ್ಸೆಸ್ ಅಸ್ತಿತ್ವಕ್ಕೆ ಬಂದಿದೆ. ಈ ವಿಚಾರವನ್ನು ಪ್ರಿಯಾಂಕ ಖರ್ಗೆ ಅರಿಯಲಿ ಎಂದರು.ಆರ್‌ಡಿಪಿಆರ್, ಐಟಿ ಬಿಟಿ ಸಚಿವರಾಗಿ ಹಿಂದೆ ಇದೇ ಪ್ರಿಯಾಂಕ್ ಖರ್ಗೆ ಮಾಡಿದ ಸಾಧನೆ ಏನು? ರಾಜ್ಯದಲ್ಲಿ ಮಟ್ಕಾ, ಇಸ್ಪೀಟ್ ಜೂಜಾಟ ಕೇಂದ್ರಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿವೆ. ಇನ್ನೂ ಅನೇಕ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ. ಐಜಿಪಿ, ಎಸ್ಪಿ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುತ್ತಿಲ್ಲ. ಮೊದಲು ಅಂತಹವುಗಳಿಗೆ ಪ್ರಿಯಾಂಕ್ ಖರ್ಗೆ ಕಡಿವಾಣ ಹಾಕಲಿ ಎಂದರು.
ಪ್ರಿಯಾಂಕ್ ಖರ್ಗೆ ನಿಮ್ಮ ಹಾಗೂ ನಿಮ್ಮ ತಂದೆಯ ಆಸ್ತಿ ಹಿಂದೆ ಎಷ್ಟು ಇತ್ತು? ಈಗ ಎಷ್ಟಾಗಿದೆ ಎಂಬುದನ್ನು, ಆಸ್ತಿಯ ಮೂಲ ಏನೆಂಬುದನ್ನು ಮೊದಲು ಬಹಿರಂಗಪಡಿಸಿ. ಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳು ನೋಂದಣಿ ಆಗಿದೆಯಾ? ಮೊದಲು ದೇಶದ್ರೋಹಿ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಿ. ದೇಶಭಕ್ತ ಸಂಘಟನೆ ಆರೆಸ್ಸೆಸ್ ಬಗ್ಗೆ ಟೀಕಿಸುವುದನ್ನು ಮೊದಲು ನಿಲ್ಲಿಸಿ ಎಂದು ತಾಕೀತು ಮಾಡಿದರು.
ಅನಗತ್ಯವಾಗಿ ಹಿಂದುಗಳನ್ನು, ಸಂಘ ಪರಿವಾರವನ್ನು ಕೆಣಕಬೇಡಿ. ಇದೇ ರೀತಿ ನೀವು ಆಟವಾಡುತ್ತಿದ್ದರೆ ಮುಂಬರುವ 2028ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೇಳ ಹೆಸರಿಲ್ಲದಂತೆ ನೆಲಕಚ್ಚುತ್ತದೆ. ವಿಧಾನಸೌಧದ 3ನೇ ಮಹಡಿಯಲ್ಲಿ ಪಾಕ್ ಪರ ಜೈಕಾರ ಹಾಕಿದ್ದ ನಿಮ್ಮ ಪಕ್ಷದ ಮುಖಂಡನ ವಿರುದ್ಧ ಎಫ್ಎಸ್‌ಎಲ್ ವರದಿ ಬಂದಿದೆ. ಅದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ? ಸಂಘವನ್ನು ಕೆಣಕಿದರೆ ಸರ್ವನಾಶವಾಗುತ್ತೀರಿ ಎಂದ ರೇಣುಕಾಚಾರ್ಯ, ಸಂಘವನ್ನು ಟೀಕಿಸಿದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ತನಗೆ ಸಿಎಂ ಮಾಡುತ್ತಾರೆಂದು ಪ್ರಿಯಾಂಕ್ ಖರ್ಗೆ ಅವರು ಅಂದುಕೊಂಡಿರಬಹುದು ಎಂದು ಕುಟುಕಿದರು.
(ಬಾಕ್ಸ್) * ಭದ್ರಾ ಡ್ಯಾಂ ಬಳಿ ಜಿಲೆಟಿನ್ ಬಳಸಿ ಏಕಶಿಲೆ ಸ್ಫೋಟ: ಆರೋಪ
ದಾವಣಗೆರೆ: ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಡ್ಯಾಂ ಬಲ ನಾಲೆಯಿಂದ ಕೇವಲ 800 ಮೀಟರ್ ದೂರದಲ್ಲಿ ಏಕಶಿಲೆಯನ್ನು ಜಿಲೆಟಿನ್ ಕಡ್ಡಿಗಳನ್ನು ಇಟ್ಟು ಸ್ಫೋಟಿಸಿದ್ದು, ಇನ್ನೂ ನಾಲ್ಕೈದು ಸಲ ಸ್ಫೋಟಿಸುವ ಮಾಹಿತಿ ಇದೆ. ಇದು ಡ್ಯಾಂಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ ಎಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲೆಟಿನ್ ಇಟ್ಟು ಏಕಶಿಲೆ ಸ್ಫೋಟಿಸಿದರೆ ಭದ್ರಾ ಡ್ಯಾಂಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಜಾಕ್ ವೆಲ್ ನಿರ್ಮಿಸಲು ಏಕಶಿಲೆ ಸ್ಫೋಟಿಸುವ ಕೆಲಸವಾಗುತ್ತಿದೆ. ಜಾಕ್‌ವೆಲ್ ಹೆಸರಲ್ಲಿ ಭದ್ರಾ ಡ್ಯಾಂ ಭದ್ರಗೊಳಿಸುವ ಕೆಲಸ ಆಗಬಾರದು. ಕುಡಿಯುವ ನೀರು ಪೂರೈಸಲು ನಮ್ಮ ವಿರೋಧವಿಲ್ಲ. ಆದರೆ, ಅಚ್ಚುಕಟ್ಟು ರೈತರು, ಭದ್ರಾ ಡ್ಯಾಂಗೆ ಸಂಕಷ್ಟ ತಂದೊಡ್ಡುವುದಕ್ಕೆ ನಮ್ಮ ವಿರೋಧವಿದೆ ಎಂದು ಸ್ಪಷ್ಚಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ರೈತರ ಒಕ್ಕೂಟದ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ, ಬಿಜೆಪಿ ರೈತ ಮೋರ್ಚಾ ಮುಖಂಡ ಲೋಕಿಕೆರೆ ನಾಗರಾಜ, ಚಂದ್ರಶೇಖರ ಪೂಜಾರ, ಧನಂಜಯ ಕಡ್ಲೇಬಾಳ್, ಎನ್.ಎಚ್.ಹಾಲೇಶ ನಾಯ್ಕ, ಜಯರುದ್ರಪ್ಪ ಇತರರು ಇದ್ದರು.
- - -(ಕೋಟ್) ಕಾಂಗ್ರೆಸ್ಸಿಗೆ ಹೊನ್ನಾಳಿ, ದಾವಣಗೆರೆಯಷ್ಟೇ ಅಲ್ಲ, ಇಡೀ ರಾಜ್ಯದಲ್ಲೇ ನರ ನಾಡಿ ಇಲ್ಲದಂತಾಗಿದೆ. ಅಭಿವೃದ್ಧಿ ಕಾಮಗಾರಿ ಮರೀಚಿಕೆಯಾಗಿವೆ. ಬಿಡದಿ ರೈತ ಭೂಮಿಯನ್ನು ಕಬಳಿಸಲು ಹೊರಟಿರುವುದು ಸರಿಯಲ್ಲ. ಈ ವಿಚಾರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಮಾತನಾಡುತ್ತಾರೆ. ನಿಮ್ಮ ಟೌನ್ ಶಿಪ್ ಯೋಜನೆ, ಕೈಗಾರಿಕಾ ಕಾರಿಡಾರನ್ನು ಬಂಜರು ಭೂಮಿಯಲ್ಲಿ ಮಾಡಿ. ಸಮೃದ್ಧವಾಗಿರುವ ಬಿಡದಿ ಕೃಷಿ ಭೂಮಿಯಲ್ಲಲ್ಲ. - ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮಾಜಿ ಸಚಿವ.
- - --17ಕೆಡಿವಿಜಿ1, 2: ದಾವಣಗೆರೆಯಲ್ಲಿ ಬುಧವಾರ ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. -17ಕೆಡಿವಿಜಿ3, 4, 5, 6: ಭದ್ರಾ ಡ್ಯಾಂನ 800 ಮೀಟರ್ ಅಂತರದಲ್ಲೇ ಅಪಾಯಕಾರಿ ಜಿಲೆಟಿನ್ ಬಳಸಿ ಏಕಶಿಲೆಯನ್ನು ಸ್ಪೋಟಿಸಿ, ಭದ್ರಾ ಡ್ಯಾಂಗೆ ಅಪಾಯ ತಂದೊಡ್ಡುತ್ತಿರುವ ಸ್ಥಳದ ಚಿತ್ರಗಳು.