ಮುಂಡರಗಿ: ಹಿಂದೂ ದೇವಸ್ಥಾನಗಳಲ್ಲಿನ ದೇವರ ಮೂರ್ತಿಗಳನ್ನು ಭಗ್ನಗೊಳಿಸಿ ಸಮಾಜದ ಸ್ವಾಸ್ಥ್ಯಕೆಡಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಹಿಂದೂ ರಾಷ್ಟ್ರ ಸಂಕಲ್ಪ ಸಮಿತಿಯಿಂದ ಬುಧವಾರ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪುರಸಭೆ ಮಾಜಿ ಉಪಾಧ್ಯಕ್ಷ ಶಿವನಗೌಡ ಗೌಡರ, ಮಾಜಿ ಯೋಧ ಶೇಖರಗೌಡ ಪಾಟೀಲ, ಪ್ರಭಾವತಿ ಹೊಸಳ್ಳಿಹಿರೇಮಠ ಮಾತನಾಡಿದರು. ಮನವಿಯಲ್ಲಿ ಇತ್ತೀಚೆಗೆ ಸಿಂಗಟಾಲೂರು, ಮಲ್ಲಿಕಾರ್ಜುನಪುರ, ಆದರಳ್ಳಿ ಗ್ರಾಮದಲ್ಲಿ ಈಶ್ವರ, ಹೊನ್ನತ್ತಿದೇವಿ ಸೇರಿದಂತೆ ಇತರ ಮೂರ್ತಿಗಳನ್ನು ಭಗ್ನಗೊಳಿಸಲಾಗಿದೆ. ಈವರೆಗೂ ಆರೋಪಿಗಳನ್ನು ಪತ್ತೆ ಹಚ್ಚಿಲ್ಲ. ಕೂಡಲೇ ಹಿಂದೂ ದೇವಸ್ಥಾನಗಳ ದೇವರನ್ನು ಭಗ್ನಗೊಳಿಸುತ್ತಿರುವ ಕಿಡಿಗೇಡಿಗಳನ್ನು ಬಂಧಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.ಈ ಸಂದರ್ಭದಲ್ಲಿ ಈಶಣ್ಣ ಬೆಟಗೇರಿ, ಅಶೋಕ ಸಿದ್ಲಿಂಗ, ಕನಕಪ್ಪ ಕಾತರಕಿ, ಕೃಷ್ಣ ಮುಖ್ಯೆ, ನಾಗರಾಜ ಹೊಸಮನಿ, ಶೋಭಾ ಜೋಶಿ, ಮಹೇಂದ್ರಕರ, ನಾವಡೆ, ಮಹಾಂತೇಶ ಕಲಾಲ, ನಾಗರಾಜ ಮುರಡಿ, ಹನುಮಂತ ಅಕ್ಕಸಾಲಿ, ಹವಳೆ, ಧ್ರುವಕುಮಾರ ಹೂಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಮನವಿ ಸ್ವೀಕರಿಸಿದರು.
ರೋಣ: ತಾಲೂಕಿನ ಕುರಹಟ್ಟಿ ಗ್ರಾಮದ ಸಾವಯವ ಕೃಷಿ ಪ್ರಗತಿಪರ ರೈತ ಶೇಖರಗೌಡ ಪಾಟೀಲ ಅವರ ತೋಟಕ್ಕೆ ಬುಧವಾರ ತಡರಾತ್ರಿ ಬೆಂಕಿ ತಗುಲಿದ್ದು, ತೋಟದಲ್ಲಿ ಬೆಳೆದಿದ್ದ ಅಪಾರ ಪ್ರಮಾಣದ ಏಲಕ್ಕಿ ಬಾಳೆ ಬೆಳೆ ಹಾನಿಯಾಗಿದೆ.2018ರಲ್ಲಿ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದಿದ್ದ ರೈತ ಚಂದ್ರಶೇಖರಗೌಡ ಪಾಟೀಲ ಸಾವಯವ ಕೃಷಿ ಮಾದರಿಯಿಂದ ಪ್ರೇರೇಪಣೆಗೊಂಡು ಗ್ರಾಮದ ಸರ್ವೆ ನಂ. 210/1ರಲ್ಲಿ ತಮ್ಮ 2 ಎಕರೆ 20 ಗುಂಟೆ ಜಮೀನಿನಲ್ಲಿ ಮಹಾರಾಷ್ಟ್ರದಿಂದ ತಂದ 3000 ಏಲಕ್ಕಿ ಬಾಳೆ ಸಸಿಗಳನ್ನು ವರ್ಷಗಳ ಹಿಂದೆ ಗುಂಪು ಸಸಿ ಮಾದರಿಯಲ್ಲಿ ನಾಟಿ ಮಾಡಿದ್ದರು. ಫಸಲು ಕೈಗೆ ಬರುವ ಸಂದರ್ಭದಲ್ಲಿ ಬಾಳೆ ತೋಟಕ್ಕರ ಬೆಂಕಿ ತಗುಲಿ ಅಪಾರ ಬೆಳೆ ನಾಶವಾಗಿದೆ. ರೈತ ಚಂದ್ರಶೇಖರಗೌಡ ಗುರುವಾರ ಬೆಳಗಿನ ಜಾವ ತೋಟಕ್ಕೆ ನೀರು ಹಾಯಿಸಲು ಹೋದಾಗ ಬೆಂಕಿ ಕಂಡು ತಕ್ಷಣವೇ ರೋಣ ಅಗ್ನಿಶಾಮಕ ಠಾಣೆಗೆ ತಿಳಿಸಿದ್ದು, ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ತೋಟಕ್ಕೆ ಕುರಹಟ್ಟಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು, ಅಗ್ನಿಶಾಮಕ ಇಲಾಖೆಯಿಂದ ವರದಿ ಪಡೆದು ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.