ದೇವಸ್ಥಾನ ಮರು ನಿರ್ಮಾಣ ಶೀಘ್ರ: ಮಾಜಿ ಸಚಿವ ರಾಜಶೇಖರ ಪಾಟೀಲ್‌

KannadaprabhaNewsNetwork |  
Published : Sep 02, 2026, 02:45 AM IST
ಚಿತ್ರ 1ಬಿಡಿಆರ್3ಹುಮನಾಬಾದ್‌ ಪಟ್ಟಣದ ಬಾಲಾಜಿ ಮಂದಿರ ಮುಂಭಾಗ ಮಾಜಿ ಸಚಿವ ರಾಜಶೇಖರ ಪಾಟೀಲ್‌ ಅವರ ನೇತೃತ್ವದಲ್ಲಿ ನಡೆದ ಧರಣಿ ಸಂದರ್ಭದಲ್ಲಿ ವಾಗ್ವಾದ ನಡೆದಿರುವುದು. | Kannada Prabha

ಸಾರಾಂಶ

ಶಾಸಕರು ಐತಿಹಾಸಿಕ ಬಾಲಾಜಿ ಮಂದಿರ ಪುನರ್‌ ನಿರ್ಮಾಣಕ್ಕೆ ಸರ್ಕಾರದಿಂದ 30 ಲಕ್ಷ ರುಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸ್ಥಳೀಯ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್‌ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹುಮನಾಬಾದ್‌

ಶಾಸಕರು ಐತಿಹಾಸಿಕ ಬಾಲಾಜಿ ಮಂದಿರ ಪುನರ್‌ ನಿರ್ಮಾಣಕ್ಕೆ ಸರ್ಕಾರದಿಂದ 30 ಲಕ್ಷ ರುಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸ್ಥಳೀಯ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್‌ ಆರೋಪಿಸಿದ್ದಾರೆ.

ಪಟ್ಟಣದ ಬಾಲಾಜಿ ಮಂದಿರ ಮುಂಭಾಗ ನಡೆದ ಧರಣಿ ಸಂದರ್ಭದಲ್ಲಿ ಮಾತನಾಡಿ, ಈ ಭಾಗದ ಐತಿಹಾಸಿಕ ಪ್ರಸಿದ್ಧಿ ಪಡೆದ, ನೂರಾರು ವರ್ಷಗಳ ಇತಿಹಾಸ ವಿರುವ ಬಾಲಾಜಿ ಮಂದಿರ ಶಿಥಿಲಗೊಂಡಿರುವುದು, ಅದರ ಪುನರ್‌ ನಿರ್ಮಾಣವು ಪವಿತ್ರ ಕಾರ್ಯವಾಗಿದೆ, ಆದರೆ ಶಾಸಕರು ಬಾಲಾಜಿ ಮಂದಿರ ಸಮುದಾಯ ಭವನಕ್ಕೆ ಮಂಜೂರಾತಿ ನೀಡಿದ ಅನುದಾನ ದೇವಸ್ಥಾನ ನಿರ್ಮಾಣಕ್ಕೆ ಬಳಸಲು ಬರುವುದಿಲ್ಲ ಎಂದಿದ್ದಾರೆ. ಶ್ರೀರಾಮ ಕೇವಲ ಬಿಜೆಪಿಗೆ ಮಾತ್ರನಾ ? ಕಾಂಗ್ರೆಸ್‌ ಪಕ್ಷದವರಿಗೆ ರಾಮನ ಬಗ್ಗೆ ಅಭಿಮಾನವಿಲ್ಲವೆ ಎಂದು ಪ್ರಶ್ನಿಸಿದರು.

ಅಯೋಧ್ಯೆ ಮಾದರಿಯಲ್ಲಿ ಬಾಲಾಜಿ ಮಂದಿರ ಪುನರ್‌ ನಿರ್ಮಾಣ:

ಒಂದು ವಾರದಲ್ಲಿ ಶಿಥಿಲಾವಸ್ಥೆಗೆ ತಲುಪಿದ ಬಾಲಾಜಿ ಮಂದಿರ ಸರ್ಕಾರದ ನಿಯಮಾನುಸಾರ ತೆರವು ಮಾಡಿ ವಾಸ್ತು ಪ್ರಕಾರ ಪುನರ್‌ ನಿರ್ಮಾಣ ಕಾರ್ಯ ತಕ್ಷಣ ಆರಂಭಿಸುವ ಮೊದಲು ಸ್ಥಳೀಯ ಭಕ್ತರು, ಸಾರ್ವಜನಿಕರ, ದಾನಿಗಳು, ಪಟ್ಟಣದ ವ್ಯಾಪಾರಸ್ಥರು, ಎಲ್ಲಾ ರಾಜಕೀಯ ಮುಖಂಡರು ಸೇರಿದಂತೆ ಅಧಿಕಾರಿಗಳ ಸಭೆ ಕರೆಯಲು ಸ್ಥಳ ಹಾಗೂ ದಿನಾಂಕ ನಿಗದಿ ಮಾಡಿ, ಅಲ್ಲಿ ಎಲ್ಲರೂ ಸೇರಿಕೊಂಡು ಸರ್ಕಾರದ ಅನುದಾನದ ಮೂಲಕ ಪ್ರಾಥಮಿಕ ಅಂದಾಜು ಆರ್ಥಿಕ ವೆಚ್ಚ ವನ್ನು ಹೊಂದಿಸಿಕೊಂಡು ಎಲ್ಲರ ಸಲಹೆ ಮೇರೆಗೆ ಅಯೋಧ್ಯೆಯ ಮಾದರಿಯಲ್ಲಿ ಗುರಿ ಇಟ್ಟಿಕೊಂಡು. ದೇವಾಲಯ ಪುನರ್‌ ನಿರ್ಮಾಣ ಕಾರ್ಯವನ್ನು ಎಲ್ಲರೂ ಒಗ್ಗೂಡಿ ಕೈಗೆತ್ತಿಕೊಳ್ಳೋಣ ಎಂದು ಹೇಳಿದರು.

ಈಗಾಗಲೇ ಮುಜರಾಯಿ ಸಚಿವರೊಂದಿಗೆ ಮಾತನಾಡಿದ್ದು, ಬಾಲಾಜಿ ದೇವಸ್ಥಾನ ಧಾರ್ಮಿಕ ದತ್ತಿ ‘ಸಿ ಗ್ರೇಡ್‌’ ದೇವಸ್ಥಾನವಾಗಿದೆ. ದೇವಸ್ಥಾನ ಶಿಥಿಲಾವಸ್ಥೆ ತಲುಪಿದ್ದು, ನೆಲಸಮ ಮಾಡಲು ಅನುಮತಿಗಾಗಿ ತಂಡ ರಚಿಸಿ ಆದೇಶ ನೀಡಿದ್ದು, ಹಿರಿಯ ಆಗಮ ಪಂಡಿತರು ಜಿ.ಎ.ವಿಜಯಕುಮಾರ ಅವರು ನಾಳೆ ಆಗಮಿಸಿ ತನಿಖೆ ನಡೆಸಿ ವರದಿ ನೀಡಿದ ತಕ್ಷಣ ವಾರದಲ್ಲಿ ದೇವಸ್ಥಾನ ನೆಲಸಮ ಮಾಡುವ ಆದೇಶ ತರಲಾಗುವುದು ಎಂದರು.

ತಹಸೀಲ್ದಾರ್‌ ಜಗದೀಶ ಚೌರ ಮಾತನಾಡಿ, 2012ರಿಂದ ಈ ದೇವಸ್ಥಾನ ಮುಜರಾಯಿ ಇಲಾಖೆ ಒಳಪಟ್ಟಿದೆ. ಇದೀಗ ದೇವಸ್ಥಾನಕ್ಕೆ ಸಂಬಂಧಿತ 7 ಮಳಿಗೆಗಳು, ಬಾಲಾಜಿ ಮಠ, ಗಣೇಶ ಮಂದಿರ ಜೊತೆಗೆ ಹುಮನಾಬಾದ್‌, ಘಾಟಬೋರಳ, ಧುಮ್ಮನಸೂರ ಸೇರಿದ ಆಸ್ತಿ ವಿವರಗಳ ದಾಖಲೆಗಳು ಹಾಗೂ ಲೆಕ್ಕಪತ್ರಗಳ ವಿವರ ಕಚೇರಿಗೆ ಸಲ್ಲಿಸಿ ಮುಂದಿನ ಕ್ರಮಕ್ಕೆ ಸಹಕಾರವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಾಲಾಜಿ ಮಂದಿರ ಸೇವಾ ಟ್ರಸ್ಟ್‌ ಸದಸ್ಯರ ಹಾಗೂ ತಹಸೀಲ್ದಾರ್‌ ಮಧ್ಯೆ ಕೆಲಕಾಲ ವಾಗ್ವಾದ ನಡೆದು ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣ ಮಾಜಿ ಸಚಿವ ರಾಜಶೇಖರ ಪಾಟೀಲ್‌, ವಿಧಾನ ಪರಿಷತ್‌ ಸದಸ್ಯ ಡಾ.ಚಂದ್ರಶೇಖರ ಪಾಟೀಲ್‌, ಭೀಮರಾವ್‌ ಪಾಟೀಲ್‌, ಸುರೇಶ ಸೀಗಿ ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿ ಶಾಂತಗೊಳಿಸಿದರು.

ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಅಭಿಷೇಕ ಪಾಟೀಲ್‌, ಮಲ್ಲಿಕಾರ್ಜುನ ಮಾಳಶಟ್ಟಿ, ವೆಂಕಟೇಶ ಕುಲಕರ್ಣಿ, ರೇವಣಸಿದ್ದಪ್ಪ ಪಾಟೀಲ್‌ ಸೇರಿದಂತೆ ಸ್ಥಳೀಯ ವ್ಯಾಪಾರಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಧಾನಸಭಾ ಚುನಾವಣೆ ವೇಳೆಗೆ ರಾಜಕೀಯಕ್ಕೆ ಪ್ರವೇಶ: ಚೇತನ್ ಅಹಿಂಸಾ
ಗಿಡ ನೆಡುವ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತ ಬೇಡ: ಶ್ರೀಶಿವಬಸವ ಸ್ವಾಮೀಜಿ