ದೇವಾಲಯಗಳು ಮನುಷ್ಯನಿಗೆ ನೆಮ್ಮದಿ ಕೇಂದ್ರ: ಡಾ.ನಿಶ್ಚಲಾನಂದನಾಥ ಸ್ವಾಮೀಜಿ

KannadaprabhaNewsNetwork | Published : Feb 4, 2025 12:30 AM

ಸಾರಾಂಶ

ಸಮಾಜದಲ್ಲಿ ಧರ್ಮ ಮಾತ್ರ ಉಳಿಯುತ್ತದೆ. ಅಧರ್ಮ ಕೇವಲ ತಾತ್ಕಾಲಿಕವಾಗಿ ದೊರೆಯುವ ಅಲ್ಪ ಶಾಂತಿ. ಅಧರ್ಮದ ಹಿಂದೆ ಹೋದರೆ ನಮಗೆ ಅಶಾಂತಿ ದೊರೆಯುವ ಜತೆಗೆ ಜೀವನವೇ ಡೋಲಾಯಮಾನವಾಗುತ್ತದೆ. ಪ್ರತಿಯೊಬ್ಬರು ಧರ್ಮದ ಕಡೆ ನಡೆದಾಗ ಮಾತ್ರ ಮನುಕುಲದ ಜೀವನ ಸಾರ್ಥಕವಾಗುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ದೇವಾಲಯಗಳು ಮನುಷ್ಯನಿಗೆ ನೆಮ್ಮದಿ ಕೇಂದ್ರಗಳಾಗಿವೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ. ನಿಶ್ಚಲಾನಂದನಾಥ ಸ್ವಾಮಿ ಅಭಿಪ್ರಾಯಪಟ್ಟರು.

ಸಮೀಪದ ಬೊಮ್ಮನದೊಡ್ಡಿ ಗ್ರಾಮದಲ್ಲಿ ಶ್ರೀಮಾರಮ್ಮ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಮನುಷ್ಯನಿಗೆ ಎಷ್ಟೆ ಒತ್ತಡವಿದ್ದರೂ ಆತ ಒಂದು ಬಾರಿ ದೇವಾಲಯಕ್ಕೆ ಹೋಗಿ ಕೆಲ ನಿಮಿಷಗಳು ಅಲ್ಲಿ ಕಾಲ ಕಳೆದರೆ ಆತನಿಗೆ ಸಿಗುವ ನೆಮ್ಮದಿ, ಶಾಂತಿ ಬೇರೆಲ್ಲೂ ಸಿಗುವುದಿಲ್ಲ ಎಂದರು.

ಸಮಾಜದಲ್ಲಿ ಧರ್ಮ ಮಾತ್ರ ಉಳಿಯುತ್ತದೆ. ಅಧರ್ಮ ಕೇವಲ ತಾತ್ಕಾಲಿಕವಾಗಿ ದೊರೆಯುವ ಅಲ್ಪ ಶಾಂತಿ. ಅಧರ್ಮದ ಹಿಂದೆ ಹೋದರೆ ನಮಗೆ ಅಶಾಂತಿ ದೊರೆಯುವ ಜತೆಗೆ ಜೀವನವೇ ಡೋಲಾಯಮಾನವಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಯೊಬ್ಬರು ಧರ್ಮದ ಕಡೆ ನಡೆದಾಗ ಮಾತ್ರ ಮನುಕುಲದ ಜೀವನ ಸಾರ್ಥಕವಾಗುತ್ತದೆ. ಕೆಟ್ಟ ಆಲೋಚನೆ ಬಿಟ್ಟು ಸನ್ಮಾರ್ಗದತ್ತ ತಮ್ಮ ದಿಟ್ಟ ಹೆಜ್ಜೆ ಇಟ್ಟುಕೊಂಡು ಸಾಮಾಜಿಕ ಕಾರ್ಯಗಳತ್ತ ತಮ್ಮ ಚಿತ್ತ ಹರಿಸಿದರೇ ಉತ್ತಮ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ ಎಂದರು.

ಹಳ್ಳಿ ಜನ ಮುಗ್ದರು. ಮದುವೆಗೆ ದುಂದು ವೆಚ್ಚ ಮಾಡುತಿದ್ದಾರೆ. ಸರಳ ಮದುವೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಇದರಿಂದ ಆರ್ಥಿಕ ಹೊರೆ ತಪ್ಪಲಿದೆ. ರಾಷ್ಟ್ರಕವಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಪರಿಕಲ್ಪನೆಯಲ್ಲಿ ಮದುವೆಗಳನ್ನು ನೆರವೇರಿಸಿ ಎಂದರು.

ಎಲ್ಲರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಗ್ರಾಮದ ಒಳಿತಿಗೆ ಪಕ್ಷ ಭೇದ ಬಿಟ್ಟು ದುಡಿಯಬೇಕು. ಗ್ರಾಮಸ್ಥರು ಒಗ್ಗಟಾಗಿ ದುಡಿದರೇ ಗ್ರಾಮದ ಸಮಗ್ರ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಜನತೆ ನೀರಿನ ಮಹತ್ವ ಅರಿತು ಮಿತ ಬಳಕೆ ಮಾಡಿಕೊಂಡು ರೈತರು ಜಮೀನಿನಲ್ಲಿ ಸಾವಯುವ ಬೇಸಾಯಕ್ಕೆ ಹೆಚ್ಚು ಒತ್ತು ನೀಡಬೇಕು. ರಾಸಾಯನಿಕ ಮುಕ್ತ ಆಹಾರ ಸೇವಿಸಲು ಸನ್ನದರಾಗಿ ಉತ್ತಮ ಆರೋಗ್ಯ ಕಾಪಾಡಿ ಕೊಳ್ಳಬಹುದು ಎಂದರು.

ಈ ವೇಳೆ ಮಠದದೊಡ್ಡಿ ಶ್ರೀವೇದಮೂರ್ತಿ ವಿದ್ವಾನ್ ದೊಡ್ಡಸಂಗೇಒಡೆಯರ್, ಬಿಸ್ಕಟ್ ಪ್ಯಾಕ್ಟರಿ ಕೃಷ್ಣಪ್ಪ, ಗ್ರಾಪಂ ಸದಸ್ಯ ಬೊಮ್ಮನದೊಡ್ಡಿ ಕೃಷ್ಣ, ಗ್ರಾಮದ ಮುಖಂಡರಾದ ನಾಗರಾಜು, ಮಾದೇಗೌಡ, ಬೋರೇಗೌಡ, ಪುಟ್ಟೇಗೌಡ, ರವೀಂದ್ರ, ಅಜಿತ್ ಸೇರಿದಂತೆ ಮತ್ತಿತರಿದ್ದರು.

Share this article