ದೇವಾಲಯಗಳು ಧಾರ್ಮಿಕ ಶ್ರದ್ಧೆಯ ಪ್ರತೀಕ : ಸಿರಿಗೆರೆ ಶ್ರೀ

KannadaprabhaNewsNetwork | Published : May 4, 2025 1:30 AM

ಸಾರಾಂಶ

ಚಿಕ್ಕಮಗಳೂರು, ದೇವಾಲಯಗಳು ಧಾರ್ಮಿಕ ಶ್ರದ್ಧೆಯ ಪ್ರತೀಕವಾಗಿದ್ದು ಭಕ್ತರ ಹೃದಯದಲ್ಲಿ ದೇವರ ಪ್ರತಿಷ್ಠಾಪನೆ ಆಗಬೇಕು ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ನುಡಿದರು

ಶ್ರೀ ಕಲ್ಲೇಶ್ವರ ಸ್ವಾಮಿಯವರ ನೂತನ ದೇವಾಲಯ ಮತ್ತು ಗೋಪುರ ಕಳಸಾರೋಹಣ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ದೇವಾಲಯಗಳು ಧಾರ್ಮಿಕ ಶ್ರದ್ಧೆಯ ಪ್ರತೀಕವಾಗಿದ್ದು ಭಕ್ತರ ಹೃದಯದಲ್ಲಿ ದೇವರ ಪ್ರತಿಷ್ಠಾಪನೆ ಆಗಬೇಕು ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ನುಡಿದರು.

ಕಡೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಸುಮಾರು ₹1.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶ್ರೀ ಕಲ್ಲೇಶ್ವರ ಸ್ವಾಮಿ ನೂತನ ದೇವಾಲಯ ಮತ್ತು ಗೋಪುರ ಕಳಸಾರೋಹಣ ಹಾಗೂ ಧಾರ್ಮಿಕ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಸರ್ಕಾರ ಉಳುವವನೇ ಭೂಮಿ ಒಡೆಯ ಎಂಬ ಕಾನೂನು ಜಾರಿ ಮಾಡಿದ ನಂತರ ಭೂಮಿಯನ್ನು ಅಪಹರಿಸಿರುವ ಉದಾಹರಣೆಗಳಿವೆ. ಇದು, ಈ ಶಾಸನಕ್ಕೆ ತದ್ವಿರುದ್ದವಾಗಿರುವುದನ್ನು ಮನಗಾಣಬಹುದಾಗಿದೆ. ಕನ್ನಡ ನಾಡಿನಲ್ಲಿ ಹಳ್ಳಿ ಹೆಸರಿನಲ್ಲಿ ಇನಿಷಿಯಲ್‌ ಇದೆ ಉದಾಹರಣೆಗೆ ಎಸ್.ಬಿದರೆ, ಕೆ.ಬಿದರೆ ಎಂಬುದು ಹಳ್ಳಿಗಳ ವೈಶಿಷ್ಟ್ಯ ಎಂದರು.

ಯಾವ ದೇವರ ಹೆಸರಿನಲ್ಲಿ ಹಿಂದೆ ಕೊಟ್ಟಿರುವ ಭೂಮಿಗೆ ಆ ದೇವರೆ ಮಾಲಿಕ ಎಂದು ಸುಪ್ರಿಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಿಂದಿನವರ ಶ್ರದ್ಧೆ ಭಕ್ತಿ ಕಣ್ಮರೆಯಾಗಿದೆ ಎಂದು ಭಾವಿಸುವುದಿಲ್ಲ, ಎಲ್ಲಾ ಕಾಲದಲ್ಲೂ ಸಜ್ಜನರು, ದುರ್ಜನರು ಇದ್ದಾರೆ. ಹೀಗಾಗಿ ಹಿಂದಿನ ಕಾಲ ಚೆನ್ನಾಗಿತ್ತು, ಈಗ ಎಲ್ಲಾ ಕೆಟ್ಟು ಹೋಗಿದೆ ಎಂಬ ಬಗ್ಗೆ ದೋಷಾರೋಪಣೆ ಮಾಡುವುದಿಲ್ಲ ಎಂದು ಹೇಳಿದರು.ಕೆರೆಕಟ್ಟಿಸು, ದೇವಾಲಯ ನಿರ್ಮಿಸು ಎಂಬ ಬಗ್ಗೆ ತಿಳಿಸಿದ ಶ್ರೀಗಳು, ದೇವಾಲಯಗಳು ಸಾಂಸ್ಕೃತಿಕ ಕೇಂದ್ರಗಳಾಗಿದ್ದವು, ವಿದ್ಯೆ ಕ್ಷೇತ್ರಗಳಾಗಿದ್ದವು ಇವುಗಳು ಭಾರತದ ಪರಂಪರೆಯಲ್ಲಿ ಬಂದಿವೆ ಎಂದು ಉಲ್ಲೇಖಿಸಿದರು.ದೇವಾಲಯ ನಿರ್ಮಾಣದ ಜೊತೆಗೆ ಪ್ರೌಢಶಾಲೆಯಿಂದ ಕಾಲೇಜು ಕಟ್ಟಡ ನಿರ್ಮಿಸಲು ಯುವಕರು ಮುಂದಾಗಬೇಕು. ಇದಕ್ಕೆ ಬೇಕಾಗುವ ಆರ್ಥಿಕ ನೆರವನ್ನು ಮಠದಿಂದ ನೀಡುವುದಾಗಿ ಭರವಸೆ ನೀಡಿದ ಶ್ರೀಗಳು ಈ ಕಾರ್ಯಕ್ಕೆ ಮುಂದಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು ವಿದ್ಯಾ ದೇಗುಲವನ್ನು ನಿರ್ಮಿಸಲು ಯುವಕರು ಮುಂದಾಗಬೇಕು. ಕಟ್ಟಡ ಉದ್ಘಾಟನೆಗೆ ಮತ್ತೆ ಬರುವಂತೆ ನೀವು ಮಾಡಬೇಕೆಂದು ಹಾರೈಸಿದರು.ಮಗುವಿಗೆ ಜನ್ಮ ನೀಡಿದರೆ ಮಾತ್ರ ತಾಯಿ ಎಂಬ ಬಿರುದು ಸಿಗುತ್ತದೆ. ಮಗುವಿನಿಂದಾಗಿ ತಾಯಿಗೆ ಜೀವಂತ ಬದುಕಿನಲ್ಲಿ ಮರುಜನ್ಮ ಸಿಗುತ್ತದೆ. ದೇವರೆ ನಮಗೆ ಪ್ರಾಣಕೊಟ್ಟಿದ್ದರು ಪುನಃ ದೇವರಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುತ್ತೇವೆ. ಈ ಹಿನ್ನಲೆಯಲ್ಲಿ ಕಲ್ಲಿಗೆ ದೇವರೆಂಬ ಸಂಸ್ಕಾರ ಬರುವುದು ನಿಮ್ಮಂತಹ ತಾಯಿಯಿಂದ ಎಂದು ಹೇಳಿದರು.ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಧಾರ್ಮಿಕ ದತ್ತಿ ಸಚಿವರಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಮಠ ಮಾನ್ಯಗಳ ಬಗ್ಗೆ ಅಧ್ಯಯನ ಮಾಡುತ್ತಾ ಸಿರಿಗೆರೆ ಮಠಕ್ಕೆ ಭೇಟಿ ನೀಡಿದಾಗ ಅನೇಕ ವಿಶಿಷ್ಟ, ವೈಶಿಷ್ಟ್ಯಗಳನ್ನು ಕಂಡು ಕೊಂಡೆ. ಸರ್ಕಾರಕ್ಕೆ ಸಮಾನಾಂತರವಾಗಿ ನ್ಯಾಯದಾನ ಮಾಡುವಂತಹ ಮಠವಿದ್ದರೆ ಅದು ಸಿರಿಗೆರೆ ಮಠ ಎಂದು ಸದನದಲ್ಲಿ ಪ್ರಸ್ತಾಪಿಸಿದೆ ಎಂದು ತಿಳಿಸಿದರು.ರಾಜಕೀಯ ಧೃವೀಕರಣದಿಂದ ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಅನಿವಾರ್ಯ ಹಾಗೂ ಅಗತ್ಯ ಕಾರಣ ಗಳಿಂದಾಗಿ ಸ್ಪರ್ಧಿಸಬೇಕಾಯಿತು. ಈ ಬಗ್ಗೆ ಶ್ರೀಗಳ ಬಳಿಗೆ ಹೋಗಿ ಆಶೀರ್ವಾದ ಕೇಳಿದಾಗ ತಮ್ಮದೇ ಆದ ಕಟ್ಟು ಪಾಡುಗಳು, ನಿಯಮಗಳು, ಸಂಸ್ಕೃತಿ ಅಳವಡಿಸಿಕೊಂಡ ಶ್ರೀಗಳು ಆಶೀರ್ವದಿಸಿದರು ಎಂದು ಹೇಳಿದರು.

ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಭಾರತದ ಧರ್ಮ, ಸಂಸ್ಕಾರ, ಸಂಸ್ಕೃತಿ, ಧಾರ್ಮಿಕತೆ ಮೊದಲು ಉಳಿಯ ಬೇಕು. ಇಲ್ಲದಿದ್ದರೆ ದೇಶದ ಭವಿಷ್ಯ ಮುಂದಿನ ದಿನಗಳಲ್ಲಿ ಕಷ್ಟ ಸಾಧ್ಯ ಎಂದು ಹೇಳಿದರು.

ವಿವಿಧತೆಯಲ್ಲಿ ಏಕತೆ ವೈವಿಧ್ಯತೆ ಕಾಣುವಂತ ದೇಶ ಪ್ರಪಂಚದಲ್ಲೇ ಭಾರತ ಮಾತ್ರ, ದೇವನೊಬ್ಬ ನಾಮ ಹಲವು, ಸಾವಿರಾರು ಸಂಸ್ಕಾರದಿಂದ ಕೂಡಿದ ಧರ್ಮಗಳಿರುವ ಈ ದೇಶದಲ್ಲಿ ಹಿಂದೆ ಘಜನಿ ಮೊಹಮ್ಮದ್, ಬ್ರಿಟೀಷರ ಆಳ್ವಿಕೆ ಇದ್ದರೂ ಭಾರತದಲ್ಲಿ ಸಂಸ್ಕಾರ, ಧರ್ಮ ಉಳಿದಿದ್ದರೆ ವಿವಿಧತೆಯಲ್ಲಿ ವೈವಿಧ್ಯತೆ ಕಾರಣ ಎಂದರು.ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಭಾರತ ದೇಶದಲ್ಲಿ ಅಮೋಘ ಪರಂಪರೆಯನ್ನು ನಮ್ಮ ಪೂರ್ವಿಕರು ಬಿಟ್ಟು ಹೋಗಿದ್ದಾರೆ. ನೂರಾರು ಗುಡಿಗಳನ್ನು ಕಟ್ಟಿ, ನೂರಾರು ಹೆಸರುಗಳನ್ನಿಟ್ಟು ಪೂಜಿಸಿದರು. ಮೂಲತತ್ವ ಒಂದೇ ಆಗಿದೆ, ದೇವನೊಬ್ಬ ನಾಮ ಹಲವು ಎಂಬಂತೆ ದೇವರನ್ನು ಪೂಜಿಸುತ್ತಿದ್ದೇವೆ ಎಂದು ಹೇಳಿದರು.

ಮಲ್ಲೇಗೌಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಹಡಿಮನೆ ಸತೀಶ್, ಬಿ.ಎಚ್. ಹರೀಶ್, ಡಾ. ಆನಂದ್, ಡಾ. ವಿನಾಯಕ್, ಎಚ್.ಸಿ. ಕಲ್ಮುರುಡಪ್ಪ, ಚಿದಾನಂದ್, ನಿರಂಜನ್, ಶೇಖರಪ್ಪ, ಕಾಂತರಾಜು, ರೇವಣ್ಣ, ಮಲ್ಲಿಕಾರ್ಜುನ್ , ಅರ್ಚನಾ ನಿಲಕಂಠಪ್ಪ ಉಪಸ್ಥಿತರಿದ್ದರು.

3 ಕೆಸಿಕೆಎಂ 9ಕಡೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಿರಿಗೆರೆ ತರಳಬಾಳು ಬೃಹನ್ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಆಶೀರ್ವಚನ ನೀಡಿದರು. ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿ, ಶಾಸಕ ಎಚ್‌.ಡಿ. ತಮ್ಮಯ್ಯ ಇದ್ದರು.

---------------------------------

Share this article