ದೇವಾಲಯಗಳು ನಮ್ಮ ಸಂಸ್ಕೃತಿ, ಪರಂಪರೆಯ ರಾಯಬಾರಿ

KannadaprabhaNewsNetwork | Published : May 25, 2024 12:50 AM
Follow Us

ಸಾರಾಂಶ

ದೇವಾಲಯಗಳು ನಮ್ಮ ಪರಂಪರೆ,ಇತಿಹಾಸ ಹೇಳುವ ಜೊತೆಯಲ್ಲಿ ನೆರೆ ಹೊರೆಯವರೊಂದಿಗೆ ಯಾವ ರೀತಿ ಬಾಳಬೇಕು ಎಂದು ಕಲಿಸುವ ಕಾರ್ಯ ಮಾಡಿವೆ

ಲಕ್ಷ್ಮೇಶ್ವರ: ದೇವಸ್ಥಾನಗಳು ಧಾರ್ಮಿಕ ಶ್ರದ್ಧಾ ಕೇಂದ್ರಗಳು ಮಾತ್ರವಲ್ಲದೆ ನಮ್ಮ ಶ್ರೇಷ್ಠ ಪರಂಪರೆಯ ರಾಯಭಾರಿಗಳು. ಇದಕ್ಕೆ ಉತ್ತಮ ಉದಾಹರಣೆ ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನ ಎಂದು ಉಪನ್ಯಾಸಕ ಸೋಮಶೇಖರ ಕೆರಿಮನಿ ಹೇಳಿದರು.

ಸ್ಥಳೀಯ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ವತಿಯಿಂದ ಪ್ರತಿ ಹುಣ್ಣಿಮೆಯಂದು ಹಮ್ಮಿಕೊಳ್ಳುವ ಪುಲಿಗೆರೆ ಪೌರ್ಣಿಮೆ ಕಾರ್ಯಕ್ರಮ ಸರಣಿಯ 30ನೇ ಸಂಚಿಕೆಯಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಂದು ದೇವಾಲಯವು ನಮಗೆ ಆತ್ಮಶಾಂತಿ ನೀಡುವ ಜತೆ ಧಾರ್ಮಿಕತೆ, ಪರಂಪರೆ ಮತ್ತು ಸಂಸ್ಕೃತಿ ಬಿತ್ತುವ ಹಾಗೂ ಅವುಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಹಂಚುವ ಕಾರ್ಯದಲ್ಲಿ ದೇವಸ್ಥಾನಗಳ ಪಾತ್ರ ಯಾವ ಶಾಲೆಗಳಿಗೂ ಕಡಿಮೆ ಇಲ್ಲ. ದೇವಾಲಯಗಳು ನಮ್ಮ ಪರಂಪರೆ,ಇತಿಹಾಸ ಹೇಳುವ ಜೊತೆಯಲ್ಲಿ ನೆರೆ ಹೊರೆಯವರೊಂದಿಗೆ ಯಾವ ರೀತಿ ಬಾಳಬೇಕು ಎಂದು ಕಲಿಸುವ ಕಾರ್ಯ ಮಾಡಿವೆ ಎಂದರು.

ಬ್ರಹ್ಮಾಕುಮಾರಿ ನಾಗಲಾಂಬಿಕೆ ಮಾತನಾಡಿ, ಐತಿಹಾಸಿಕ, ಸಾಂಸ್ಕೃತಿಕ, ಸಾಹಿತ್ಯಿಕವಾಗಿ ಸೋಮೇಶ್ವರ ದೇವಸ್ಥಾನದ ಪಾತ್ರ ಮಹತ್ತರವಾದುದು. ಅಂತಹ ಹಿರಿಮೆ ಸಾರುವ ಇಲ್ಲಿ ಪ್ರತಿ ಹುಣ್ಣಿಮೆಯಂದು ಉತ್ತಮ ಕಾರ್ಯ ಸಂಘಟಿಸಲಾಗುತ್ತಿರುವದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಮಾತನಾಡಿ, ಸೋಮೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷ ಮೇ ಕೊನೆಯ ವಾರ ಸೂರ್ಯನ ಪ್ರಥಮ ಕಿರಣಗಳು ಗರ್ಭ ಗುಡಿಯಲ್ಲಿನ ಸೋಮೇಶ್ವರ ಮೂರ್ತಿ ತಲುಪುವ ವಿಹಂಗಮ ನೋಟ ಈವಾಗಲೂ ಕಣ್ತುಂಬಿಕೊಳ್ಳಬಹುದು ಎಂದರು.

ಈ ವೇಳೆ ವಿದ್ಯುತ್ ಸರಬರಾಜು ನಿಗಮದ ಗುರುರಾಜ್.ಸಿ, ಸಾಂಸ್ಕೃತಿಕ ಚಿಂತಕ ವಾಸಣ್ಣ ಪಾಟೀಲ ಕುಲಕರ್ಣಿ ಮಾತನಾಡಿದರು.

ನೀಲಪ್ಪ ಕಜ್ರಕ್ಕಣ್ಣನವರ, ಸುರೇಶ ರಾಚನಾಯ್ಕರ, ಸಿದ್ದನಗೌಡ್ರ ಬಳ್ಳೋಳ್ಳಿ, ಎಸ್.ಎಫ್.ಆದಿ, ಪಿ.ಬಿ.ಖರಾಟೆ, ಎನ್.ಆರ್. ಸಾತಪೂತೆ, ದೇವಣ್ಣ ಬಳಿಗಾರ, ಸೋಮಣ್ಣ ಅಣ್ಣಿಗೇರಿ, ಎಂ.ಶಿದ್ಲಿಂಗಯ್ಯ, ಗೀತಾ ಮಾನ್ವಿ, ಲಲಿತಕ್ಕ ಕೆರಿಮನಿ, ಸರೋಜಕ್ಕ ಬನ್ನೂರ, ಸೋಮಣ್ಣ ಮುಳಗುಂದ, ಕುಬೇರಪ್ಪ ಮಹಾಂತಶೇಟ್ಟರ, ಎಂ.ಎನ್. ಹುಬ್ಬಳ್ಳಿ, ವಿರುಪಾಕ್ಷಪ್ಪ ಆದಿ, ಎಸ್.ಎ. ಸಾತಣ್ಣನವರ, ಆಶೋಕ ನೀರಾಲೋಟಿ ಹಾಗೂ ಇತರರು ಇದ್ದರು.

ಜಯಪ್ರಕಾಶ ಹೊಟ್ಟಿ, ನಾಗರಾಜ ಕಳಸಾಪೂರ, ಜಿ.ಎಸ್. ಗುಡಗೇರಿ ಕಾರ್ಯಕ್ರಮ ನಿರ್ವಹಿಸಿದರು.