ಮನುಷ್ಯನ ನೆಮ್ಮದಿಗೆ ದೇವಸ್ಥಾನಗಳು ಪೂರಕ: ಎಚ್.ಎಂ.ವೆಂಕಟೇಶ್

KannadaprabhaNewsNetwork | Published : Mar 10, 2025 12:16 AM

ಸಾರಾಂಶ

ಮನುಷ್ಯ ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ, ಸಾಕಷ್ಟು ಹಣವಿದ್ದರೂ ಆತನಿಗೆ ಸಮಾಧಾನವಿರುವುದಿಲ್ಲ. ಈಗ ವಿದ್ಯ ಹಾಗೂ ತಂತ್ರಜ್ಞಾನವಿದೆ. ಎಲ್ಲದರಲ್ಲೂ ಕೂಡ ಬೆಳವಣಿಗೆ ನೋಡುತ್ತಿದ್ದೇವೆ. ಆದರೆ, ಕಷ್ಟಕಾರ್ಪಣ್ಯಗಳ ನಿವಾರಣೆ, ನೆಮ್ಮದಿಗಾಗಿ ದೇವಾಲಯಕ್ಕೆ ಹೋದರೆ ಮನಸ್ಸಿಗೆ ಸಮಾಧಾನ ಸಿಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಆಧ್ಯಾತ್ಮಿಕದಿಂದ ಮಾತ್ರ ಮನುಷ್ಯ ನೆಮ್ಮದಿಯಾಗಿರಲು ಸಾಧ್ಯ. ಇದಕ್ಕೆ ದೇವಸ್ಥಾನಗಳು ಪೂರಕವಾಗಿವೆ ಎಂದು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಎಚ್.ಎ.ವೆಂಕಟೇಶ್ ತಿಳಿಸಿದರು.

ತಾಲೂಕಿನ ಬಸರಾಳು ಹೋಬಳಿಯ ಹಲ್ಲೇಗೆರೆ ಗ್ರಾಮದಲ್ಲಿ ಶ್ರೀಲಕ್ಷ್ಮಿದೇವಿ ದೇವಸ್ಥಾನ ಟ್ರಸ್ಟ್‌ನಿಂದ ನಿರ್ಮಿಸಿರುವ ಶ್ರೀಲಕ್ಷ್ಮಿ ದೇವಿ ವಿಗ್ರಹದ ಪ್ರತಿಷ್ಠಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯನ ಶಾಂತಿಯುತ ಜೀವನಕ್ಕಾಗಿ ಆಧ್ಯಾತ್ಮಿಕ ಚಿಂತನೆ ಹೆಚ್ಚು ಪರಿಣಾಮಕಾರಿಯಾಗಿ ಪ್ರತಿಪಾದನೆ ಮಾಡಬೇಕಿದೆ ಎಂದರು.

ಮನುಷ್ಯ ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ, ಸಾಕಷ್ಟು ಹಣವಿದ್ದರೂ ಆತನಿಗೆ ಸಮಾಧಾನವಿರುವುದಿಲ್ಲ. ಈಗ ವಿದ್ಯ ಹಾಗೂ ತಂತ್ರಜ್ಞಾನವಿದೆ. ಎಲ್ಲದರಲ್ಲೂ ಕೂಡ ಬೆಳವಣಿಗೆ ನೋಡುತ್ತಿದ್ದೇವೆ. ಆದರೆ, ಕಷ್ಟಕಾರ್ಪಣ್ಯಗಳ ನಿವಾರಣೆ, ನೆಮ್ಮದಿಗಾಗಿ ದೇವಾಲಯಕ್ಕೆ ಹೋದರೆ ಮನಸ್ಸಿಗೆ ಸಮಾಧಾನ ಸಿಗುತ್ತದೆ ಎಂದರು.

ಪೂರ್ವಿಕರು ಬಹಳಷ್ಟೂ ವರ್ಷಗಳ ಹಿಂದೆ ನಿರ್ಮಿಸಿದ್ದ ಶ್ರೀಲಕ್ಷ್ಮೀದೇವಿ ದೇವಸ್ಥಾನ ಶಿಥಿಲಾವಸ್ಥೆಯಲ್ಲಿತ್ತು. ಗ್ರಾಮದ ಎಲ್ಲಾ ಮುಖಂಡರು ಸೇರಿ ಶ್ರೀ ಲಕ್ಷ್ಮಿದೇವಿ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ ಲೋಕಾರ್ಪಣೆ ಮಾಡಿದ್ದಾರೆ ಎಂದರು.

ಹಲ್ಲೇಗೆರೆ ಗ್ರಾಮವನ್ನು ವಿಶ್ವ ತಿರುಗಿ ನೋಡಬೇಕು, ಶಾಂತಿ ನೆಲೆಸಬೇಕು, ನೆಮ್ಮದಿ ಜೀವನ ನಡೆಸಬೇಕು ಎಂದು ಗ್ರಾಮದ ಮೂರ್ತಿಯವರು ಭೂದೇವಿ ದೇವಸ್ಥಾನ ನಿರ್ಮಾಣ ಮಾಡುತ್ತಿದ್ದಾರೆ ಎಂದರು.

ಸ್ಕೋಪ್ ಫೌಂಡೇಶನ್ ಅಧ್ಯಕ್ಷ ಡಾ.ಹಲ್ಲೇಗೆರೆ ಮೂರ್ತಿ ಮಾತನಾಡಿ, ಸಣ್ಣ ಹಳ್ಳಿಯಲ್ಲಿ ಜನರಿಗೆ ಶಾಂತಿ ನೆಲೆಸಬೇಕೆಂದು ವಿಶ್ವದಲ್ಲೇ ಮೊದಲ ಬಾರಿಗೆ ಭೂದೇವಿ ಆಧ್ಯಾತ್ಮಿಕ ಕೇಂದ್ರವನ್ನು ಹಲ್ಲೇಗೆರೆ ಗ್ರಾಮದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದರ ಅಭಿವೃದ್ಧಿಗಾಗಿ ಸಲಹೆ ಕೊಡಿ ಅದನ್ನು ಅಳವಡಿಸಿಕೊಂಡು ಮತ್ತಷ್ಟು ಅಭಿವೃದ್ಧಿ ಮಾಡುತ್ತೇವೆ ಎಂದರು.

ಬೆಂಗಳೂರಿನ ಶ್ರೀನಿವಾಸಪುರ ಓಂಕಾರ ಆಶ್ರಮದ ಪೀಠಾಧಿಪತಿ ಡಾ.ಮಧುಸೂದನಾನಂದಪುರಿ ಸ್ವಾಮೀಜಿ, ಬೆಂಗಳೂರಿನ ಶಿರಡಿ ಸಾಯಿ ಭಿಕ್ಷಾ ಕೇಂದ್ರದ ಸಂಸ್ಥಾಪಕರಾದ ಶ್ರೀಲಕ್ಷ್ಮಿ ಶ್ರೀನಿವಾಸ ಗುರೂಜಿ, ಶ್ರೀಲಕ್ಷ್ಮೀದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಎಚ್.ವಿ.ವೆಂಕಟರಾಮು, ಉಪಾಧ್ಯಕ್ಷರಾದ ಎಚ್.ವಿ.ನಾಗರಾಜು, ಎಚ್.ಪಿ.ಶಿವಶಂಕರ್, ಮೈಸೂರು ವಿವಿ ಮಾಜಿ ಕುಲಸಚಿವ ಆರ್.ಶಿವಪ್ಪ, ಹಿರಿಯ ಚಾರ್ಟೆಂಟ್ ಅಕೌಂಟೆಂಟ್ ಸುರೇಂದ್ರ ಹೆಗಡೆ, ರೈಟ್ ಜನರಲ್ ಮ್ಯಾನೇಜರ್ ಎಂ.ಜಿ.ಸುದೀಪ್, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮಾಜಿ ಸದಸ್ಯ ಚಿಕ್ಕಬಳ್ಳಿ ಕೃಷ್ಣ, ಗ್ರಾಮದ ಮುಖಂಡರಾದ ಎಚ್.ಸಿ. ಜಯರಾಮ್, ಕಂಡಕ್ಟರ್ ಎಚ್.ಕೆ.ನಾಗರಾಜು, ಎಚ್.ಟಿ.ನಾಗೇಂದ್ರ ರಾವ್, ಬಿ.ಎಲ್. ಪುಟ್ಟಸ್ವಾಮಿ, ಎಚ್.ಜೆ.ಬೋರೇಗೌಡ, ರಾಘವೇಂದ್ರ, ಪುಟ್ಟಸ್ವಾಮಿ, ಸೇರಿದಂತೆ ಇತರರು ಹಾಜರಿದ್ದರು.

Share this article