ದೇಗುಲಗಳು ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುವ ತಾಣಗಳು: ಸಚಿವ ಚಲುವರಾಯಸ್ವಾಮಿ

KannadaprabhaNewsNetwork | Published : Feb 23, 2025 12:33 AM

ಸಾರಾಂಶ

ಮನುಷ್ಯನ ಬದುಕು ಹಾಗೂ ಭಾವನೆಗಳಿಗೆ ಜೊತೆಯಾಗಿ ಸಂಸ್ಕೃತಿ ಹಾಗೂ ಧರ್ಮವಿರಬೇಕು. ಆದರೆ, ನಮ್ಮಂತಹ ರಾಜಕಾರಣಿಗಳು ಸ್ವಾರ್ಥಕ್ಕಾಗಿ ಧರ್ಮದ ದುರುಪಯೋಗವನ್ನು ಮಾಡಿಕೊಳ್ಳುತ್ತಿದ್ದೇವೆ. ನಮ್ಮೆಲ್ಲರ ಪುಣ್ಯ ಈ ಅಫೀಮು ಗ್ರಾಮೀಣ ಪ್ರದೇಶಕ್ಕೆ ಹೆಚ್ಚಾಗಿ ವ್ಯಾಪಿಸಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಇಂದಿನ ಒತ್ತಡದ ಜೀವನದಲ್ಲಿ ದೇವಾಲಯಗಳು ನಮ್ಮ ಮನಸ್ಸಿಗೆ ಶಾಂತಿ ನೆಮ್ಮದಿ ನೀಡುವ ತಾಣಗಳಾಗಿವೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ತಾಲೂಕಿನ ಬೇಲದಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಅಮೃತೇಶ್ವರ ಸ್ವಾಮಿಯ ನೂತನ ದೇವಾಲಯ ಲೋಕಾರ್ಪಣೆ ಅಂಗವಾಗಿ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದರು.

ನಾವು ಎಷ್ಟೇ ಒತ್ತಡದಲ್ಲಿದ್ದರೂ ಸ್ವಲ್ಪ ಬಿಡುವು ಮಾಡಿಕೊಂಡು ದೇವರ ದರ್ಶನ ಮಾಡಿದರೆ ಸಾಕು ನಮ್ಮ ಮನಸ್ಸಿನ ಕ್ಲೇಶವು ಕಳೆದು ಶಾಂತಿ ನೆಮ್ಮದಿ ಜೊತೆಗೆ ಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಾಧಿಸಬಹುದು ಎಂದರು.

ಮನುಷ್ಯನ ಬದುಕು ಹಾಗೂ ಭಾವನೆಗಳಿಗೆ ಜೊತೆಯಾಗಿ ಸಂಸ್ಕೃತಿ ಹಾಗೂ ಧರ್ಮವಿರಬೇಕು. ಆದರೆ, ನಮ್ಮಂತಹ ರಾಜಕಾರಣಿಗಳು ಸ್ವಾರ್ಥಕ್ಕಾಗಿ ಧರ್ಮದ ದುರುಪಯೋಗವನ್ನು ಮಾಡಿಕೊಳ್ಳುತ್ತಿದ್ದೇವೆ. ನಮ್ಮೆಲ್ಲರ ಪುಣ್ಯ ಈ ಅಫೀಮು ಗ್ರಾಮೀಣ ಪ್ರದೇಶಕ್ಕೆ ಹೆಚ್ಚಾಗಿ ವ್ಯಾಪಿಸಿಲ್ಲ. ಇದನ್ನು ಗ್ರಾಮೀಣ ಭಾಗದ ಯುವಕರು ಅರ್ಥ ಮಾಡಿಕೊಂಡು ಹಿರಿಯರ ಆಶೋತ್ತರಗಳಂತೆ ಜೀವನ ನಡೆಸುವಂತೆ ಕಿವಿಮಾತು ಹೇಳಿದರು.

ಇದೇ ವೇಳೆ ಗ್ರಾಮಸ್ಥರು ಸಚಿವರನ್ನು ಅಭಿನಂದಿಸಿದರು. ಯುವ ಕಾಂಗ್ರೆಸ್ ಮುಖಂಡ ಬಿ.ಪಿ.ಮಂಜುನಾಥ್ ಅವರ ಮನೆಗೆ ತೆರಳಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಪೂಜಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್, ಬಿ.ಪ್ರಕಾಶ್, ಕಾಂಗ್ರೆಸ್ ನಾಯಕ ಬಿ. ಎಲ್.ದೇವರಾಜು, ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಳಹಳ್ಳಿ ವಿಶ್ವನಾಥ್, ಬಿ.ನಾಗೇಂದ್ರ ಕುಮಾರ್, ಜಿಪಂ ಮಾಜಿ ಸದಸ್ಯ ಶೀಳನೆರೆ ಅಂಬರೀಶ್, ಪುರಸಬಾ ಸದಸ್ಯರಾದ ಡಿ.ಪ್ರೇಮಕುಮಾರ್, ಕೆ.ಆರ್.ರವೀಂದ್ರಬಾಬು, ಮುಖಂಡರಾದ ಕೆ.ಬಿ.ಪ್ರಕಾಶ್, ಮೆಡಿಕಲ್ ಮಂಜು, ಬೇಲದಕೆರೆ ಚನ್ನೇಗೌಡ, ನಂಜಪ್ಪ, ಪಾಪೇಗೌಡ, ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.

Share this article