ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಇ ಖಾತೆ ಪಡೆಯುವ ಸಂಬಂಧ ಸರ್ಕಾರ ಕೈಗೊಂಡಿರುವ ತೀರ್ಮಾನವ ಜಾರಿಗೊಳಿಸಲು ಜಿಲ್ಲಾಡಳಿತ ಖಡಕ್ ತೀರ್ಮಾನ ಕೈಗೊಂಡಿದ್ದು ಈ ಸಂಬಂಧ ಮೂರು ತಿಂಗಳ ಗಡವು ನೀಡಿದೆ.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಇ ಖಾತೆ ಪಡೆಯುವ ಸಂಬಂಧ ಸರ್ಕಾರ ಕೈಗೊಂಡಿರುವ ತೀರ್ಮಾನವ ಜಾರಿಗೊಳಿಸಲು ಜಿಲ್ಲಾಡಳಿತ ಖಡಕ್ ತೀರ್ಮಾನ ಕೈಗೊಂಡಿದ್ದು ಈ ಸಂಬಂಧ ಮೂರು ತಿಂಗಳ ಗಡವು ನೀಡಿದೆ. ಜಿಲ್ಲೆಯ ಎಲ್ಲಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ, ಇದುವರೆಗೂ ಇ-ಖಾತಾ ಪಡೆಯದೇ ಇರುವ ಕಟ್ಟಡಗಳ ಮತ್ತು ನಿವೇಶನಗಳ ಮಾಲೀಕರು ಮೂರು ತಿಂಗಳ ಒಳಗಾಗಿ ಅಂದರೆ 2025ರ ಮೇ 10ರೊಳಗೆ ಬಿ ರಿಜಿಸ್ಟರ್‍ನಲ್ಲಿ ನಮೂದಿಸಿಕೊಂಡು ಇ-ಖಾತಾ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕರೆ ನೀಡಿದ್ದಾರೆ. ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಪ್ರಕರಣ 110 ರ ಅನ್ವಯ ಎ ರಿಜಿಸ್ಟರ್ ನಲ್ಲಿ ಅಂದರೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯಲಾದ ಬಡಾವಣೆಯಲ್ಲಿನ ಸ್ವತ್ತುಗಳಿಗೆ ಇ-ಖಾತಾ ನೀಡಲಾಗುತ್ತದೆ. ಆದರೆ, ಭೂ ಪರಿವರ್ತನೆ ಆಗದೇ ಉಪ-ವಿಭಜನೆ ಮಾಡಿ ಮಾರಾಟ ಮಾಡಿರುವ ನಿವೇಶನ, ಕಟ್ಟಡಗಳು ಮತ್ತು ಭೂ ಪರಿವರ್ತನೆಯಾಗಿದ್ದು, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾಗದ ಬಡಾವಣೆಗಳಲ್ಲಿನ ನಿವೇಶನ ಅಥವಾ ಕಟ್ಟಡಗಳಿಗೆ ಬಿ ರಿಜಿಸ್ಟರ್ ನಲ್ಲಿ ನಮೂದಿಸಿಕೊಂಡು ಇ-ಖಾತಾ ನೀಡಲಾಗುತ್ತದೆ. ಈ ಅವಕಾಶವನ್ನು ಒಮ್ಮೆ ಮಾತ್ರ ನೀಡಲಾಗುತ್ತಿದ್ದು, ಕಟ್ಟಡ, ನಿವೇಶನಗಳ ಮಾಲೀಕರು ಈ ಅವಕಾಶದ ಸದುಪಯೋಗ ಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಕರೆ ನೀಡಿದ್ದಾರೆ. ಬಿ ರಿಜಿಸ್ಟರ್ ನಲ್ಲ ದಾಖಲಿಸುವ ಆಸ್ತಿಗಳಿಗೆ 2024-25ನೇ ಸಾಲಿಗೆ ಮೊದಲ ಬಾರಿಗೆ ಸ್ವತ್ತು ತೆರಿಗೆಯ 2 ರಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ. ತದನಂತರದ ವರ್ಷಗಳಲ್ಲಿ ಸ್ವತ್ತು ತೆರಿಗೆಯನ್ನು ಮಾತ್ರ ವಿಧಿಸಲಾಗುತ್ತದೆ. ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ ಪ್ರಕರಣ 106 ಕ್ಕೆ ತಿದ್ದುಪಡಿ ತರಲಾದಂತೆ 10.09.2024 ರಿಂದ ಜಾರಿಗೆ ಬಂದಂತೆ ಈ ತೆರಿಗೆಯನ್ನು ವಿಧಿಸಲಾಗುತ್ತದೆ. ಬಿ ರಿಜಿಸ್ಟರ್ ನಲ್ಲಿ ಸರ್ಕಾರಿ ಜಾಗದಲ್ಲಿರುವ ಸ್ವತ್ತುಗಳು, ಸರ್ಕಾರದ ನಿಗಮ ಮಂಡಳಿಗಳ ಜಾಗಗಳು, ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಜಾಗಗಳು ಹೊರತುಪಡಿಸಲಾಗಿದೆ. 10.09.2024 ರ ಪೂರ್ವಕ್ಕೆ ನೋಂದಾಯಿತವಾದ ಭೂ ಪರಿವರ್ತನೆ ಆಗದೇ ಉಪ ವಿಭಜನೆ ಮಾಡಿ ನಿವೇಶನಗಳಾಗಿ ಮಾರಾಟ ಮಾಡಿರುವ ನಿವೇಶನ, ಕಟ್ಟಡಗಳು ಮತ್ತು ಭೂ ಪರಿವರ್ತನೆಯಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾಗದ ಬಡಾವಣೆಗಳಲ್ಲಿನ ನಿವೇಶನ, ಕಟ್ಟಡಗಳಿಗೆ ಬಿ ರಿಜಿಸ್ಟರ್‍ನಲ್ಲಿ ನಮೂದಿಸಿಕೊಂಡು ಇ-ಖಾತಾ ನೀಡಲಾಗುತ್ತದೆ. ಇದುವರೆಗೆ ಇ-ಖಾತಾ ಪಡೆಯದ ಎಲ್ಲಾ ಸ್ವತ್ತುಗಳ ಮಾಲೀಕರು ಕೂಡಲೇ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಕಛೇರಿಗಳಿಗೆ ಭೇಟಿ ನೀಡಿ ಅಥವಾ ಸಹಾಯವಾಣಿ ಸಂಪರ್ಕಿಸಬೇಕು. ಜಿಲ್ಲಾಧಿಕಾರಿ ಕಚೇರಿಯಿಂದ ಏರ್ಪಡಿಸಲಾಗುವ ವಾರ್ಡ್‍ವಾರು ಕ್ಯಾಂಪ್‍ಗಳಿಗೆ ಭೇಟಿ ನೀಡಿ ‘ಬಿ’ ರಿಜಿಸ್ಟರ್ ನಲ್ಲಿ ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸಿ, ಸರ್ಕಾರ ನೀಡಿರುವ ಅವಕಾಶ ಸದುಪಯೋಗ ಪಡಿಸಿಕೊಳ್ಳುವಂತೆ ಡಿಸಿ ವೆಂಕಟೇಶ್ ಮನವಿ ಮಾಡಿದ್ದಾರೆ.
ಇ-ಖಾತಾಗೆ ಸಂಬಂಧಿಸಿದಂತೆ ಸಹಾಯವಾಣಿ: ಚಿತ್ರದುರ್ಗ ನಗರಸಭೆ-08194-222401, ಕೆ.ಕಿರಣ್ ಕುಮಾರ್-9606281164, ಚಳ್ಳಕೆರೆ ನಗರಸಭೆ-08195-200093, ಎಸ್.ವೀರಭದ್ರಪ್ಪ-8050551355.ಹಿರಿಯೂರು ನಗರಸಭೆ-08193-296220, ಮಲ್ಲಿಕಾರ್ಜುನ ಸ್ವಾಮಿ-9620287514.ಹೊಸದುರ್ಗ ಪುರಸಭೆ- 08199-295095, ಎನ್.ವಿನಯ್-9353833372.ಹೊಳಲ್ಕೆರೆ ಪುರಸಭೆ-08191-275861, ಎಂ.ದೇವರಾಜ್-9845912244.ಮೊಳಕಾಲ್ಮೂರು ಪಟ್ಟಣ ಪಂಚಾಯಿತಿ-08198-229044, ಎಲ್.ಎಚ್.ತಿಪ್ಪೇಸ್ವಾಮಿ-9845174196.ನಾಯಕನಹಟ್ಟಿ ಪಟ್ಟಣ ಪಂಚಾಯಿತಿ-08190-200232, ಆರ್.ಸಂದೀಪ್-9606307100
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.