ಕನ್ನಡಪ್ರಭ ವಾರ್ತೆ ಅರಸೀಕೆರೆ
ಸನಾತನ ಧರ್ಮ, ಸಂಸ್ಕೃತಿಯ ಪ್ರತೀಕವಾದ ಮಠಮಾನ್ಯಗಳು ಹಾಗೂ ಧಾರ್ಮಿಕ ಕೇಂದ್ರಗಳಾದ ದೇವಾಲಯಗಳು ಮನುಷ್ಯನ ಬದುಕಿಗೆ ಸುಖ, ಶಾಂತಿ, ನೆಮ್ಮದಿಯನ್ನು ಕರುಣಿಸುವ ಶ್ರದ್ಧಾಕೇಂದ್ರಗಳಾಗಿವೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.ತಾಲೂಕಿನ ಕಸಬ ಹೋಬಳಿ ವ್ಯಾಪ್ತಿಯ ಪನ್ನಸಮುದ್ರ ಗ್ರಾಮದ ಶ್ರೀ ಬೊಮ್ಮಲಿಂಗೇಶ್ವರ ಸ್ವಾಮಿಯವರಿಗೆ ಸುಮಾರು 40 ಕೇಜಿಯ ನೂತನ ರಜತ ಕವಚಧಾರಣೆ ಮತ್ತು ಸಿದ್ದೇಶ್ವರ ಸ್ವಾಮಿಗೆ ಬೆಳ್ಳಿಯ ಪ್ರಭಾವಳಿ, ಬೆತ್ತದ ಪಲ್ಲಕಿ ಸೇವೆಯ ನೂತನ ಪೀಠ ಲೋಕಾರ್ಪಣೆ ಮತ್ತು ನೂತನ ಸಮುದಾಯ ಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಯವರ ಆಶೀರ್ವಾದ ಪಡೆದು ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇವರು, ಧರ್ಮ, ತಂದೆ ತಾಯಿ, ಗುರು ಹಿರಿಯರು ಎನ್ನುವಂತಹ ಪೂಜ್ಯಭಾವನೆಗಳಲ್ಲಿ ಉತ್ತಮ ಸಂಸ್ಕಾರವನ್ನು ಪಡೆದು ಜೀವನದ ಸಾರ್ಥಕತೆಯನ್ನು ನಾವು ಕಾಣುತ್ತೀದ್ದೇವೆ, ಆದರೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ನಂಬಿರುವ ಜನರು ಸಕಲ ವೈಭೋಗದ ಶ್ರೀಮಂತಿಕೆಯನ್ನು ತೊರೆದು ಸುಖ, ಶಾಂತಿ ನೆಮ್ಮದಿಯ ಜೀವನಕ್ಕಾಗಿ ಭಾರತದ ಕಡೆಗೆ ಬರುತ್ತಿದ್ದು, ಹರೇ ರಾಮ ಹರೇ ಕೃಷ್ಣ ಎಂದು ಭಗವಂತನ ಧ್ಯಾನವನ್ನು ಮಾಡುತ್ತಿರುವುದು ಕಾಣುತ್ತಿದ್ದೇವೆ. ದೇವನೊಬ್ಬ ನಾಮ ಹಲವು ಎನ್ನುವ ವಿಶಾಲ ಹಾಗೂ ವೈವಿಧ್ಯಮಯ ಸಂಸ್ಕೃತಿಯಲ್ಲಿ ಏಕತೆಯನ್ನು ಕಾಣುತ್ತಿರುವ ನಮಗೆ ರಾಮಾಯಣ ಹಾಗೂ ಮಹಾಭಾರತ ಮಹಾನ್ ಗ್ರಂಥಗಳೇ ಪ್ರೇರಣೆ ನೀಡುತ್ತಿದ್ದು, ಧರ್ಮದ ಆಚರಣೆಯಿಂದಲ್ಲೇ ಮನುಷ್ಯ ತನ್ನ ಬದುಕಿನಲ್ಲಿ ಸುಖ, ಶಾಂತಿ ನೆಮ್ಮದಿಯನ್ನು ಕಾಣಲು ಸಾಧ್ಯ ಎನ್ನುವ ಇತಿಹಾಸವನ್ನು ಕಂಡಿರುವ ನಾವು ದೇವಾಲಯಗಳ ಜೀರ್ಣೋದ್ಧಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಎಂದು ತಿಳಿಸಿದರು.ಮಾಡಾಳು ನಿರಂಜನ ಗುರುಪೀಠದ ಶ್ರೀ ರುದ್ರಮುನಿ ಸ್ವಾಮಿ ಆಶೀರ್ವಚನ ನೀಡಿ, ಯುವಪೀಳಿಗೆಯಲ್ಲಿ ದೇವರು, ಧರ್ಮ, ಭಕ್ತಿ ಪೂಜ್ಯ ಮನೋಭಾವ ಕ್ಷೀಣಿಸುತ್ತಿದೆ, ಹಿಂದಿನಿಂದಲೂ ದೇವಾಲಯಗಳು, ಮಠಮಾನ್ಯಗಳು, ಧಾರ್ಮಿಕ ಶ್ರದ್ಧಾ ಭಕ್ತಿ ಕೇಂದ್ರಗಳ ಉಳಿವಿಗೆ ಭಕ್ತರೇ ಕಾರಣರಾಗುತ್ತಿದ್ದಾರೆ. ಮನುಷ್ಯ ಇಂದಿನ ಆಧುನಿಕ ಯುಗದಲ್ಲಿ ಎಷ್ಟೇ ಬೆಳೆದರೂ ದೇವರು ಧರ್ಮ ಮತ್ತು ಪೂಜೆ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳು ನೆರವೇರುತ್ತವೆ ಎಂದರು.
ಗುರು ಪರಂಪರೆಯ ಮೇಲೆ ನಂಬಿಕೆ ಇಟ್ಟು ಗುರುವಿನ ಮೂಲಕ ದೈವವನ್ನ ಕಾಣುವ ನಮ್ಮ ಸಂಸ್ಕೃತಿ ಆಚಾರ-ವಿಚಾರಕ್ಕೆ ಅದರದ್ದೇ ಆದ ಮಹತ್ವವಿದೆ. ಹರ ಮುನಿದರು ಗುರು ಕಾಯುವನು ಎಂಬ ನಂಬಿಕೆಯೇ ಶಿಷ್ಯ ಕುಲವನ್ನ ಕೈಹಿಡಿದು ನಡೆಸುತ್ತಿದೆ. ಗುರುವಿನ ಅನುಗ್ರಹ ಹಾಗೂ ಮಾರ್ಗದರ್ಶನವಿಲ್ಲದೇ ಯಾರ ಬದುಕು ಪೂರ್ಣವಾಗುವುದಿಲ್ಲ. ಹಾಗಾಗಿಯೇ ನಮ್ಮ ಹಿರಿಯರು ಮುಂದೆ ಗುರಿ ಹಿಂದೆ ಗುರು ಬದುಕಿನಲ್ಲಿ ಯಾರು ಹೊಂದಿರುತ್ತಾರೋ ಅವರ ಬದುಕು ಇತರರಿಗೆ ಮಾದರಿಯಾಗಿರುತ್ತದೆ. ಹಾಗಾಗಿ ಗುರು ಶಿಷ್ಯರ ಸಂಬಂಧ ದೈವ ಸಂಬಂಧ ಎಂದು ಹೇಳಿದರು. ಚಿಕ್ಕಮಗಳೂರು ಬಸವ ತತ್ವ ಪೀಠದ ಡಾ. ಬಸವ ಮರುಳಸಿದ್ದ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿ, ಭಾರತೀಯ ಹಿಂದೂ ಸನಾತನ ಸಂಸ್ಕೃತಿ ಜಗತ್ತಿಗೆ ಮಾದರಿಯಾಗಿದೆ. ಹಿಂದೂ ಎನ್ನುವುದು ಕೇವಲ ಧರ್ಮವಲ್ಲ. ಬದಲಾಗಿ ಅದೊಂದು ಭವ್ಯ ಸಂಸ್ಕೃತಿ ಎನ್ನುವ ಭಾವನೆ ಜನರಲ್ಲಿ ಮನೆ ಮಾಡಿದೆ. ಇಲ್ಲಿನ ಸಂಪ್ರದಾಯ, ಆಚರಣೆಗಳ ಕಾರಣದಿಂದಾಗಿಯೇ ಪಾಶ್ಚಾತ್ಯರು ಕೂಡ ನಮ್ಮತ್ತ ತಿರುಗಿ ನೋಡುವಂತಾಗಿದೆ. ದೇವರು ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಜಾತಿ ಬೇಧವಿಲ್ಲ ಎನ್ನುವುದನ್ನು ಮಹಾಕವಿ ಹರಿಹರ ಮಾದಾರ ಚನ್ನಯ್ಯ, ಕೋಳೂರು ಕೊಡಗೂಸಿನ ರಗಳೆಯಲ್ಲಿ ಸಾಬೀತಾಗಿದೆ. ಪೂಜೆ, ಪುನಸ್ಕಾರಗಳ ಜತೆಗೆ ಪಂಚಭೂತಗಳಲ್ಲಿ ದೈವೀ ಸಾಕ್ಷಾತ್ಕಾರ ಕಂಡುಕೊಂಡಿರುವುದು ನಮ್ಮೆಲ್ಲರ ಸೌಭಾಗ್ಯವೆಂದರೆ ತಪ್ಪಾಗಲಾರದು. ಪಾಲಕರು ಹಾಗೂ ಗುರು, ಹಿರಿಯರು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡುವ ಮೂಲಕ ಭವಿಷ್ಯ ರೂಪಿಸುವ ಹೊಣೆಗಾರಿಕೆ ಪ್ರದರ್ಶಿಸಬೇಕು ಎಂದು ಹೇಳಿದರು.ಈ ಸಮಾರಂಭದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ಬೊಮ್ಮಣ್ಣ, ಸೋಮಶೇಖರಪ್ಪ ಗ್ರಾಮದ ಹಿರಿಯರು, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಜಯಣ್ಣ, ಗ್ರಾಮದ ಮಲ್ಲಿಕಾರ್ಜುನ್, ಮಹೇಶಣ್ಣ, ಕುಮಾರ್, ಶ್ರೀಧರ್, ಚರಣ್, ರಾಜೇಶ್, ನಾಗರಾಜ್ ಶಶಿಧರ್, ಪರಮೇಶ್, ದೇವರಾಜ್, ರವಿ, ರಾಕೇಶ್, ನಟರಾಜ್ ಮುಂತಾದವರು ಉಪಸ್ಥಿತರಿದ್ದರು.