ಸೀಗೋಡು ನಾಗಲಕ್ಷ್ಮಿ ಸಭಾ ಭವನದಲ್ಲಿ ಮಲೆನಾಡು ವೈಭವ ಕಾರ್ಯಕ್ರಮ
ದೇವಾಲಯಗಳು ಶ್ರದ್ಧಾ ಕೇಂದ್ರಗಳಾಗಿರಬೇಕು. ಆಕರ್ಷಕ ಕೇಂದ್ರಗಳಾಗಬಾರದು. ದೇವಾಲಯಗಳಲ್ಲಿ ಭಕ್ತಿಯ ಪೂಜೆ ಗಿಂತ ಆಡಂಬರದ ಪೂಜೆ ಹೆಚ್ಚಾಗುತ್ತಿದೆ. ಇದರಿಂದ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಪೂಜೆಯಲ್ಲಿ ಭಕ್ತಿ ಹೆಚ್ಚಾಗಿ ರಬೇಕು ಎಂದು ರಾಜ್ಯ ಆರ್ಯವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷ ಆರ್.ಪಿ. ರವಿಶಂಕರ್ ಹೇಳಿದರು.
ಕರ್ನಾಟಕ ರಾಜ್ಯ ಆರ್ಯವೈಶ್ಯ ಮಹಾಸಭಾದ ಜಿಲ್ಲಾ ಘಟಕ ಸೀಗೋಡು ನಾಗಲಕ್ಷ್ಮಿ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ "ಮಲೆನಾಡು ವೈಭವ " ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ನಮ್ಮ ಸಮಾಜದ ದೇವತೆ ವಾಸವಿ ದೇವಿ ತ್ಯಾಗದ ಸಂಕೇತ ಆಗಿದ್ದಾರೆ. ಅದರಂತೆ ನಾವು ತ್ಯಾಗದ ಮನೋಭಾವದಲ್ಲಿ ಬದುಕಬೇಕು. ಇನ್ನೊಬ್ಬರನ್ನು ತೇಜೋವಧೆ ಮಾಡುವ ಬದಲು ಕಷ್ಟದಲ್ಲಿರುವವರಿಗೆ ನಮ್ಮ ಕೈಯಲ್ಲಾದಷ್ಟು ಸಹಕಾರ ನೀಡಬೇಕು. ಸಹಾಯ ಮಾಡಲು ಕಷ್ಟವಾದಲ್ಲಿ ಸುಮ್ಮನಿರುವುದು ಒಳ್ಳೆಯದು ಎಂದರು.ರಾಮಾಯಣ ಕಾಲದಲ್ಲಿ ರಾಮನ ಪಟ್ಟಾಭಿಷೇಕದ ಸಂದರ್ಭದಲ್ಲಿ ಐದು ಜನ ಮುಖ್ಯಸ್ಥರಲ್ಲಿ ಆರ್ಯವೈಶ್ಯ ಮಂಡಳಿಯವರು ಒಬ್ಬರಾಗಿದ್ದರು. ಅಂದಿನ ಕಾಲದಿಂದಲೂ ಆರ್ಯವೈಶ್ಯರು ಇರುವುದಕ್ಕೆ ಪುರಾವೆಗಳಿವೆ. ಸ್ವತಂತ್ರ ಪೂರ್ವದಲ್ಲಿ 1908 ರಲ್ಲಿ ಕರ್ನಾಟಕ ರಾಜ್ಯ ಆರ್ಯವೈಶ್ಯ ಮಂಡಳಿ ಪ್ರಾರಂಭವಾಗಿದ್ದು, 1927 ರಲ್ಲಿ ಮೈಸೂರು ಮಹಾರಾಜರು ಮಂಡಳಿಗೆ ಬೆಂಗಳೂರಿನಲ್ಲಿ ಜಾಗ ನೀಡಿದ್ದರು. ಮಂಡಳಿ ಚಟುವಟಿಕೆಗೆ ಸ್ವಂತ ಕಟ್ಟಡ ಹೊಂದಿದೆ. ವಾಸವಿ ಕೋ ಆಪರೇಟಿವ್ ಬ್ಯಾಂಕ್ ನಮ್ಮ ಮಂಡಳಿ ಹೆಮ್ಮೆಯ ಹಣಕಾಸಿನ ಸಂಸ್ಥೆ. ಈ ಸಂಸ್ಥೆ ಪ್ರತಿ ತಾಲೂಕಿನಲ್ಲಿ ಶಾಖೆಗಳು ಹೊಂದಬೇಕು. ಇದಕ್ಕೆ ಆರ್ಯವೈಶ್ಯ ಮಂಡಳಿ ಪ್ರತಿಯೊಬ್ಬರು ಸದಸ್ಯರಾಗಬೇಕೆಂದರು.
ಜಯಪುರದ ಸೀಗೋಡು ನಾಗಲಕ್ಷ್ಮಿ ಸಭಾ ಭವನದಲ್ಲಿ ನಡೆದ ಮಲೆನಾಡು ವೈಭವ ಕಾರ್ಯಕ್ರಮವನ್ನು ರಾಜ್ಯ ಆರ್ಯವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷ ಆರ್.ಪಿ. ರವಿಶಂಕರ್ ಉದ್ಘಾಟಿಸಿದರು. ಡಿ.ಎಂ. ಗಣೇಶ್, ವೆಂಕಟೇಶ್, ರವಿಕುಮಾರ್ ಇದ್ದರು.