ಕನ್ನಡಪ್ರಭ ವಾರ್ತೆ ಹಾಸನ ಶಾಸಕ ಎಚ್.ಡಿ.ರೇವಣ್ಣ ಮಾಹಿತಿ ಹಂಗರಹಳ್ಳಿಯ ರೈಲ್ವೆ ಮೇಲ್ಸೆತುವೆ ದುರಸ್ತಿಗೆ ರೈಲ್ವೆ ಇಲಾಖೆ ೧೦ ಕೋಟಿ ರು. ಮಂಜೂರು ಮಾಡಲಾಗಿದೆ ಎಂದು ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ.ರೇವಣ್ಣ ಹೇಳಿದರು. ಹಾಸನ - ಹೊಳೆನರಸೀಪುರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈಲ್ವೆ ಮೇಲ್ಸೆತುವೆ ೩ ವರ್ಷಗಳ ಹಿಂದೆ ನಿರ್ಮಾಣವಾಗಿತ್ತು. ಸೇತುವೆಯ ಒಂದು ಪಾರ್ಶ್ವದಲ್ಲಿ ಕುಸಿತ ಉಂಟಾಗಿದ್ದರಿಂದ ಸೇತುವೆ ಮೇಲೆ ವಾಹನಗಳ ಸಂಚಾರವನ್ನು ಕಳೆದ ಎರಡು ತಿಂಗಳಿನಿಂದ ನಿರ್ಬಂಧಿಸಲಾಗಿದೆ. ಹಾಸನ - ಮೈಸೂರು ನಡುವೆ ಸಂಚರಿಸುವ ವಾಹನಗಳು ಪಡುವಲಹಿಪ್ಪೆ ಮೂಲಕ ಅರಕಲಗೂಡು ರಸ್ತೆ ಸಂಪರ್ಕಿಸಿ ಹೊಳೆನರಸೀಪುರ ತಲುಪುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರೇವಣ್ಣ ಅವರು, ಈಗಿರುವ ಮೇಲ್ಸೇತುವೆ ದುರಸ್ತಿಗೆ ೧೦ ಕೋಟಿ ರು. ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ. ಆ ಸೇತುವೆ ಪಕ್ಕದಲ್ಲಿ ಮತ್ತೊಂದು ದ್ವಿಪಥ ಮೇಲ್ಸೆತುವೆ ನಿರ್ಮಾಣಕ್ಕೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ೬೦ ಕೋಟಿ ರು. ಮಂಜೂರಾತಿಯ ಹಂತದಲ್ಲಿದೆ ಎಂದು ಹೇಳಿದರು. ಹಾಸನ - ಬೇಲೂರು ನಡುವೆ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಈ ವರ್ಷವೇ ರೈಲು ಮಾರ್ಗ ನಿರ್ಮಾಣದ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದೆ ಎಂದು ರೇವಣ್ಣ ಅವರು ಹೇಳಿದರು. ಕೇವಲ ಮೂರು ವ್ಯಾಪಾರಿಗಳು ಮೆಕ್ಕೆಜೋಳ ಪೂರೈಕೆ ಮಾಡಿ ಕೆಎಂಎಫ್‌ನಿಂದ ಲೂಟಿ ಮಾಡುತ್ತಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸುಗ್ಗಿಯಲ್ಲಿ ರೈತರಿಂದ ಕೆಎಂಎಫ್ ನೇರವಾಗಿ ಮೆಕ್ಕೆಜೋಳ ಖರೀದಿಸಿದರೆ ರೈತರಿಗೂ ಉತ್ತಮ ದರ ನೀಡಿದಂತಾಗುತ್ತದೆ. ಕೆಎಂಎಫ್‌ಗೂ ಲಾಭವಾಗುತ್ತದೆ. ನಾನು ೧೦ ವರ್ಷ ಕೆಎಂಎಫ್ ಅಧ್ಯಕ್ಷನಾಗಿದ್ದಾಗ ಪಶು ಆಹಾರವನ್ನು ಕಡಿಮೆ ದರದಲ್ಲಿ ಕೆಎಂಎಫ್ ನಿಂದ ಪೂರೈಕೆ ಮಾಡಿ ಖಾಸಗಿ ಪಶು ಆಹಾರ ಘಟಕಗಳ ಬಾಗಿಲು ಮುಚ್ಚಿಸಿದ್ದೇ ಎಂದು ರೇವಣ್ಣ ಹೇಳಿದರು. ಕೆಎಂಎಫ್‌ನಲ್ಲಿ ಕೋಟಿ ಕೋಟಿ ಲೂಟಿ ಕೆಎಂಎಫ್ ನಿರ್ವಹಣೆ ಮಾಡುತ್ತಿರುವ ಪಶು ಆಹಾರ ಕಾರ್ಖಾನೆಗಳಿಗೆ ಮೆಕ್ಕೆಜೋಳ ಖರೀದಿಯಲ್ಲಿ ನೂರಾರು ಕೋಟಿ ರು. ಲೂಟಿಯಾಗುತ್ತಿದೆ. ಪ್ರತಿ ತಿಂಗಳೂ ೧೪,೫೦೦ ಟನ್ ಮೆಕ್ಕೆಜೋಳವನ್ನು ಕೆಎಂಎಫ್ ಟೆಂಡರ್ ಮೂಲಕ ಖರೀದಿ ಮಾಡುತ್ತಿದೆ. ಟೆಂಡರ್‌ದಾರರು ಕ್ವಿಂಟಲ್‌ಗೆ ೨೫೬೦ ರು. ದರ ನೀಡಿ ಪೂರೈಕೆ ಮಾಡುತ್ತಿದ್ದಾರೆ. ಆದರೆ ಈಗ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ದರ ಕ್ವಿಂಟಲ್‌ಗೆ ೨೦೦೦ ರು. ಇದೆ. ಅಂದರೆ ವ್ಯಾಪಾರಿಗಳು ರೈತರಿಂದ ೨೦೦೦ ರು.ಗೆ ಜೋಳ ಖರೀದಿಸಿ ಕೆಎಂಎಫ್‌ಗೆ ೨೫೬೦ ರು.ಗೆ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಕ್ವಿಂಟಲ್‌ಗೂ ೫೦೦ ರು.ನಿಂದ ೬೦೦ ರು. ಲಾಭ ಮಾಡಿಕೊಳ್ಳುತ್ತಿದ್ದಾರೆ. ವಾರ್ಷಿಕ ೧೭೪೦೦೦ ಟನ್ ಖರೀದಿ ಮಾಡುತ್ತಿದ್ದು, ಎಷ್ಟು ಕೋಟಿ ಲೂಟಿಯಾಗುತ್ತಿದೆ ಎಂದು ಪ್ರಶ್ನಿಸಿದರು.