ಕಾವೇರಿ ಆರತಿ ವೇದಿಕೆ ನಿರ್ಮಾಣಕ್ಕೆ ಶೀಘ್ರವೇ ಟೆಂಡರ್: ಡಿಸಿಎಂ ಡಿ.ಕೆ.ಶಿವಕುಮಾರ್‌

KannadaprabhaNewsNetwork |  
Published : May 26, 2025, 12:23 AM ISTUpdated : May 26, 2025, 12:17 PM IST
fight against bjp jds from booth level dcm dk shivakumar calls rav

ಸಾರಾಂಶ

ಕಾವೇರಿ ಆರತಿ ಎಂಬುದು ಕೊಡಗು, ಮಲೆನಾಡು, ಕರಾವಳಿ, ಬೆಂಗಳೂರು ಭಾಗದ ಆಚರಣೆ. ಹೀಗಾಗಿ ಈ ಭಾಗದ ಮಠಗಳನ್ನು ಒಳಗೊಂಡು ಕಾರ್ಯಕ್ರಮದ ವಿಧಾನ ರೂಪಿಸಲಾಗುವುದು. ವಾರಾಂತ್ಯದ 3 ದಿನ ಈ ಕಾರ್ಯಕ್ರಮ ನಡೆಯಬೇಕು ಎಂದು ಚಿಂತನೆ ನಡೆಸಿದ್ದೇವೆ. ಪೂಜಾ ಕಾರ್ಯದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಮಾಡಲಾಗುವುದು.

 ಬೆಂಗಳೂರು : ಕಾವೇರಿ ಆರತಿ ನಮ್ಮ ರಾಜ್ಯದ ಸಂಸ್ಕೃತಿ, ಪರಂಪರೆಯ ಪ್ರತೀಕವಾಗಲಿದೆ. ಕಾವೇರಿ ಆರತಿ ಸಿದ್ಧತೆ ಹಾಗೂ ಆಚರಣೆಗಾಗಿ ಕಾವೇರಿ ನಿಗಮದಲ್ಲಿ 92 ಕೋಟಿ ರು. ಮೀಸಲಿಟ್ಟಿದ್ದು, ಕಾವೇರಿ ಆರತಿ ವೇದಿಕೆ ನಿರ್ಮಿಸಲು ಸದ್ಯದಲ್ಲೇ ಟೆಂಡರ್‌ ಕರೆಯುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಶನಿವಾರ ಕಾವೇರಿ ಆರತಿ ಸಂಬಂಧ ಶಾಸಕರು ಹಾಗೂ ಅಧಿಕಾರಿಗಳು, ಸಂಗೀತ ನಿರ್ದೇಶಕರ ಜತೆ ಸಭೆ ನಡೆಸಿದ ಅವರು ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಕಾವೇರಿ ಆರತಿ ಎಂಬುದು ಕೊಡಗು, ಮಲೆನಾಡು, ಕರಾವಳಿ, ಬೆಂಗಳೂರು ಭಾಗದ ಆಚರಣೆ. ಹೀಗಾಗಿ ಈ ಭಾಗದ ಮಠಗಳನ್ನು ಒಳಗೊಂಡು ಕಾರ್ಯಕ್ರಮದ ವಿಧಾನ ರೂಪಿಸಲಾಗುವುದು. ವಾರಾಂತ್ಯದ 3 ದಿನ ಈ ಕಾರ್ಯಕ್ರಮ ನಡೆಯಬೇಕು ಎಂದು ಚಿಂತನೆ ನಡೆಸಿದ್ದೇವೆ. ಪೂಜಾ ಕಾರ್ಯದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಮಾಡಲಾಗುವುದು ಎಂದರು.

ಹರಿಯುವ ನೀರಿನಲ್ಲಿ ಕಾರ್ಯಕ್ರಮದ ವೇದಿಕೆ ನಿರ್ಮಿಸಲು ತೀರ್ಮಾನಿಸಲಾಗಿದೆ. ವೇದಿಕೆ ನಿರ್ಮಾಣಕ್ಕೆ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ಜತೆಗೆ ಕಾವೇರಿ ಆರತಿ ವೇಳೆ ಕಾವೇರಿಯ ಮಹತ್ವ ಹಾಗೂ ಪರಂಪರೆಯನ್ನು ಹಾಡಿನ ಮೂಲಕ ತಿಳಿಸಲು ಉದ್ದೇಶಿಸಿದ್ದು, ಈ ಸಂಬಂಧ ಹಿರಿಯ ಸಂಗೀತ ನಿರ್ದೇಶಕರಾದ ಹಂಸಲೇಖ, ಸಾಧು ಕೋಕಿಲ ಹಾಗೂ ಅರ್ಜುನ್‌ ಜನ್ಯ ಅವರಿಗೆ ಪತ್ರ ಬರೆದಿದ್ದೇನೆ. ಜತೆಗೆ ಈ ಸಭೆಯಲ್ಲೂ ಅತ್ಯುತ್ತಮ ಗೀತ ರಚನೆ ಸಂಬಂಧ ಸಂಗೀತ ನಿರ್ದೇಶಕರ ಜತೆ ಚರ್ಚಿಸಿದ್ದೇನೆ ಎಂದು ಡಿ.ಕೆ.ಶಿವಕುಮಾರ್‌ ಮಾಹಿತಿ ನೀಡಿದರು.

10 ಸಾವಿರ ಆಸನ ವ್ಯವಸ್ಥೆ:

ಇಂಧನ ಇಲಾಖೆ, ಲೋಕೋಪಯೋಗಿ, ಪ್ರವಾಸೋದ್ಯಮ, ಧಾರ್ಮಿಕ ದತ್ತಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಈ ಕಾರ್ಯಕ್ರಮಕ್ಕೆ ಕೈ ಜೋಡಿಸಲಿದೆ. ಕಾರ್ಯಕ್ರಮದ ಸಾರ್ವಜನಿಕ ವೀಕ್ಷಣೆಗಾಗಿ 10 ಸಾವಿರ ಆಸನಗಳ ಗ್ಯಾಲರಿಯ ವಿನ್ಯಾಸ ಕೂಡ ಸಿದ್ಧವಾಗಿದೆ.

ಇದು ದಕ್ಷಿಣ ಭಾರತದ ಕಾರ್ಯಕ್ರಮ. ಕಾವೇರಿ ನದಿ ಹರಿಯುವ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ರಾಜ್ಯಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು. ಈ ಎಲ್ಲಾ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಬಹುತೇಕ ಎಲ್ಲಾ ನೀಲನಕ್ಷೆಗಳು ಸಿದ್ಧವಾಗಿವೆ. ಇವು ಪೂರ್ಣಗೊಂಡ ನಂತರ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಸಭೆಯಲ್ಲಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ವಿಧಾನಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕಾವೇರಿ ಆರತಿ ಸಮಿತಿ ಅಧ್ಯಕ್ಷರು ಹಾಗೂ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್, ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ಅರ್ಜುನ್ ಜನ್ಯ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ