ಗೃಹಲಕ್ಷ್ಮೀ ಯೋಜನೆಯಲ್ಲಿ ಸಮಸ್ಯೆ ಇಲ್ಲ: ಲಕ್ಷ್ಮೀ ಹೆಬ್ಬಾಳ್ಕರ್‌

KannadaprabhaNewsNetwork | Published : Nov 2, 2023 1:00 AM

ಸಾರಾಂಶ

ಗೃಹಲಕ್ಷ್ಮೀ ಯೋಜನೆಯಲ್ಲಿ ಯಾವುದೇ ಸಮಸ್ಯೆ ಇಲ್ಲ: ಸಚಿವೆ ಹೆಬ್ಬಾಳ್ಕರ್
ಕನ್ನಡಪ್ರಭ ವಾರ್ತೆ ಉಡುಪಿ ಗೃಹಲಕ್ಷ್ಮೀ ಯೋಜನೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಆಗಿಲ್ಲ, ಖಾತೆಗೆ ಹಣ ಜಮೆಯಾಗುವಾಗ ಒಂದೆರಡು ದಿನ ವಿಳಂಬ ಆಗಿರಬಬಹುದು ಅಷ್ಟೇ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಬುಧವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ತಿಂಗಳು ಫಲಾನುಭವಿಗಳ ಖಾತೆಗೆ ಹಾಕುವ ಸಂದರ್ಭದಲ್ಲಿ ಸ್ವಲ್ಪ ವ್ಯತ್ಯಾಸ ಆಗಬಹುದು, ಆದರೆ ರಾಜ್ಯ 1.08 ಲಕ್ಷ ಫಲಾನುಭವಿಗಳಿಗೆ ಖಂಡಿತವಾಗಿ ಈ ಯೋಜನೆ ತಲುಪುತ್ತಿದೆ. ಸುಮಾರು 2.5 ಸಾವಿರ ಕೋಟಿ ರು. ಪ್ರತಿ ತಿಂಗಳು ಅದಕ್ಕಾಗಿ ವ್ಯಯ ಮಾಡಲಾಗುತ್ತದೆ ಎಂದರು. ಇನ್ನೂ 6 - 7 ಲಕ್ಷ ಮಂದಿ ಈ ಯೋಜನೆಯಿಂದ ಹೊರಗೆ ಉಳಿದುಕೊಂಡಿದ್ದು, ಅವರಲ್ಲಿ 2 ಲಕ್ಷ ಜನ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ಹೋಗಿ ತಿಳಿವಳಿಕೆ ಮೂಡಿಸಿ ಸೇರ್ಪಡೆಗೊಳಿಸುತ್ತಾರೆ. ಬ್ಯಾಂಕ್ ಅಕೌಂಟ್ ಸಮಸ್ಯೆ ಇದ್ದರೆ ಅಂಚೆ ಕಚೇರಿಯಲ್ಲಿ ಖಾತೆ ತೆರೆಯುತ್ತವೆ ಎಂದರು. ಶಾಲಾ ಮಕ್ಕಳಿಗೆ ಮೊಟ್ಟೆ ನೀಡದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ, ಮೊಟ್ಟೆ ಖರೀದಿಗೆ ಟೆಂಡರ್ ಆಗಿದೆ. ಆದಷ್ಟು ಬೇಗ ಟೆಂಡರ್ ಪ್ರಕ್ರಿಯೆಯನ್ನು ಅಂತಿಮಗೊಳಿಸಿ, ಮೊಟ್ಟೆ ನೀಡುವ ಕೆಲಸಕ್ಕೆ ಚಾಲನೆ ಕೊಡುತ್ತೇವೆ ಎಂದರು. ಬೆಳಗಾವಿಯನ್ನು ಕರ್ನಾಟಕದ ಎರಡನೇ ರಾಜಧಾನಿಯಾಗಿ ಬೆಳೆಸುತ್ತೇವೆ. ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಸುವರ್ಣಸೌಧ, ವಿಮಾನ ಏರ್ಪೋರ್ಟ್ ಇದೆ, ಜಿಲ್ಲೆಯ ವಿಸ್ತೀರ್ಣ ದೊಡ್ಡದಾಗಿದೆ. ಅತಿ ಹೆಚ್ಚು ಶಾಸಕರು ಇರುವ ಜಿಲ್ಲೆ ಬೆಳಗಾವಿಯಾಗಿದೆ ಎಂದರು. ಎಂಇಎಸ್ ಬಗ್ಗೆ ಮಾತಾಡಲ್ಲ: ಕರ್ನಾಟಕ ರಾಜ್ಯೋತ್ಸವ ಬಹಳ ಸಂತೋಷದ ದಿನ. ಈ ದಿನ ಬೇರೆ ವಿಚಾರ ನಾನು ಮಾತನಾಡುವುದಿಲ್ಲ ಎಂದು ಎಂಇಎಸ್ ನಿಂದ ಕರಾಳ ದಿನಾಚರಣೆ ವಿಚಾರವಾಗಿ ಮಾತನಾಡಲು ನಿರಾಕರಿಸಿದರು. ಆದರೆ, ಈ ದಿನಾಚರಣೆಯ ಬಗ್ಗೆ ಸರ್ಕಾರ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಅಗತ್ಯ ಕಾನೂನು ಕ್ರಮಗಳಿಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಗಡಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ ಎಂದು ಎಂದರು.

Share this article