ಕನ್ನಡಪ್ರಭ ವಾರ್ತೆ ಗೋಕಾಕ
ಪ್ರವಾಹ ಬಂದಾಗ ಭೇಟಿ ನೀಡಿ ಫೋಟೋಗೆ ಪೋಸ್ ನೀಡುವ ಬದಲು, ಅದರ ಶಾಶ್ವತ ಪರಿಹಾರಕ್ಕಾಗಿ ಘಟಪ್ರಭಾ ನದಿ ರಕ್ಷಣಾ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಸರ್ಕಾರ ಟೆಂಡರ್ ಕರೆಯಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.ನಗರದಲ್ಲಿ ಘಟಪ್ರಭಾ ನದಿಯ ಪ್ರವಾಹ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾತನಾಡಿದ ಅವರು, ನಾವು ವಿರೋಧ ಪಕ್ಷದಲ್ಲಿದ್ದಾಗ ಮಾತನಾಡುವುದು ತಪ್ಪಾಗುತ್ತದೆ. ಸರ್ಕಾರ ಒಳ್ಳೆಯ ಕೆಲಸ ಮಾಡಬೇಕು. ಬಿಜೆಪಿ ಸರ್ಕಾರದಲ್ಲಿ ನಾನು ಜಿಲ್ಲಾ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಘಟಪ್ರಭಾ ನದಿಗೆ ರಕ್ಷಣಾ ತಡೆಗೋಡೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಆದರೆ ಕಾಮಗಾರಿ ಆಗಿಲ್ಲ, ನಾನು ಮನವಿ ಮಾಡಿಕೊಳ್ಳುತ್ತೇನೆ ಮುಖ್ಯಮಂತ್ರಿಗಳು ಗೋಕಾಕ ನಗರವನ್ನು ಪ್ರವಾಹದಿಂದ ರಕ್ಷಿಸಲು ಕೂಡಲೇ ಟೆಂಡರ್ ಪ್ರಕ್ರಿಯೆ ನಡೆಸಿ ರಕ್ಷಣಾ ತಡೆಗೋಡೆ ನಿರ್ಮಾಣ ಮಾಡಬೇಕು ಎಂದರು.
ಪ್ರವಾಹ ಕಡಿಮೆಯಾಗುವ ಸಂಭವವಿದೆ. ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಭೇಟಿ ನೀಡಿ ಯಾವುದೇ ತೊಂದರೆಗಳಾಗದಂತೆ ಕ್ರಮವಹಿಸಿದ್ದಾರೆ. ಕಾಳಜಿ ಕೇಂದ್ರಗಳಲ್ಲೂ ಸಂತ್ರಸ್ತರಿಗೆ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪ್ರವಾಹ ಇಳಿಮುಖವಾದ ನಂತರ ಸೇತುವೆಯನ್ನು ಸಂಪೂರ್ಣ ಪರಿಶೀಲನೆ ನಡೆಸಿ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಶಾಸಕರು ತಿಳಿಸಿದರು.ಕಾಳಜಿ ಕೇಂದ್ರಕ್ಕೆ ಭೇಟಿ:
ಶಾಸಕ ರಮೇಶ ಜಾರಕಿಹೊಳಿ ಅವರು ನಗರದ ಘಟಪ್ರಭಾ ನದಿ ಪ್ರವಾಹ ಸಂತ್ರಸ್ತರ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು. ಸಂತ್ರಸ್ತರಿಗೆ ನೀಡುವ ಆಹಾರ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಮಾಜಿ ಜಿಪಂ ಸದಸ್ಯ ಟಿ ಆರ್ ಕಾಗಲ, ತಹಶೀಲದಾರ ಡಾ.ಮೋಹನ ಭಸ್ಮೆ, ಡಿವೈಎಸ್‌ಪಿ ರವಿಕುಮಾರ ನಾಯಕ, ತಾಪಂ ಇಒ ಪರಶುರಾಮ ಘಸ್ತೆ, ನಗರಸಭೆ ಪೌರಾಯುಕ್ತ ರವಿ ರಂಗಸುಭೆ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.