ಇಂಡಿ, ಸಿಂದಗಿ 371ಜೆ ಸೇರ್ಪಡೆಗೆ ಸರ್ಕಾರದ ನಿಲುವೇನು?

KannadaprabhaNewsNetwork |  
Published : Aug 22, 2025, 02:00 AM IST
ಇಂಡಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ವಿಜಯಪುರ ಜಿಲ್ಲೆಯ ಇಂಡಿ ಮತ್ತು ಸಿಂದಗಿ ತಾಲೂಕುಗಳು ಭೌಗೋಳಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಔದ್ಯೋಗಿಕವಾಗಿ, ಧಾರ್ಮಿಕವಾಗಿ ಹಾಗೂ ಕಲ್ಯಾಣ ಕರ್ನಾಟಕದೊಂದಿಗೆ ಹೊಂದಿಕೊಂಡಿವೆ. ಸಿಂದಗಿ ಮತ್ತು ಇಂಡಿ ತಾಲೂಕುಗಳನ್ನು 371ಜೆ ಸೇರ್ಪಡೆ ಮಾಡುವ ಬಗ್ಗೆ ಸರ್ಕಾರದ ಸ್ಪಷ್ಟ ನಿಲುವು ಒದಗಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸದನದಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳುವುದರ ಮೂಲಕ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ವಿಜಯಪುರ ಜಿಲ್ಲೆಯ ಇಂಡಿ ಮತ್ತು ಸಿಂದಗಿ ತಾಲೂಕುಗಳು ಭೌಗೋಳಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಔದ್ಯೋಗಿಕವಾಗಿ, ಧಾರ್ಮಿಕವಾಗಿ ಹಾಗೂ ಕಲ್ಯಾಣ ಕರ್ನಾಟಕದೊಂದಿಗೆ ಹೊಂದಿಕೊಂಡಿವೆ. ಸಿಂದಗಿ ಮತ್ತು ಇಂಡಿ ತಾಲೂಕುಗಳನ್ನು 371ಜೆ ಸೇರ್ಪಡೆ ಮಾಡುವ ಬಗ್ಗೆ ಸರ್ಕಾರದ ಸ್ಪಷ್ಟ ನಿಲುವು ಒದಗಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸದನದಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳುವುದರ ಮೂಲಕ ಒತ್ತಾಯಿಸಿದರು.ಇಂಡಿ ಮತ್ತು ಸಿಂದಗಿ ತಾಲೂಕುಗಳನ್ನು 371ಜೆ ಅಡಿಯಲ್ಲಿ ಸೇರ್ಪಡೆ ಮಾಡಿ ಎಲ್ಲ ರಂಗಗಳಲ್ಲೂ ಅಭಿವೃದ್ಧಿಪಡಿಸುವ ಆಸಕ್ತಿ ಸರ್ಕಾರಕ್ಕೆ ಇದೆಯೇ ಎಂದು ಪ್ರಶ್ನಿಸಿದ ಶಾಸಕರು, ವಿಜಯಪುರ ಜಿಲ್ಲೆಯ ಅತ್ಯಂತ ಹಿಂದುಳಿದ ಇಂಡಿ ಮತ್ತು ಸಿಂದಗಿ ತಾಲೂಕುಗಳನ್ನು 371ಜೆ ಅಡಿಯಲ್ಲಿ ಸೇರ್ಪಡೆ ಬಗ್ಗೆ ಅಥವಾ ಈ ಭಾಗಕ್ಕೆ ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ಸರ್ಕಾರ ಕೈಗೊಳ್ಳುವ ಕ್ರಮಗಳ ಕುರಿತು ಸ್ಪಷ್ಟ ಅಭಿಪ್ರಾಯ ತಿಳಿಸುವಂತೆ ಕೋರಿದರು.

ಇದಕ್ಕೆ ಉತ್ತರಿಸಿದ ಸಚಿವ ಡಿ.ಸುಧಾಕರ, ಇಂಡಿ ಮತ್ತು ಸಿಂದಗಿ ತಾಲೂಕುಗಳನ್ನು 371ಜೆ ಅಡಿಯಲ್ಲಿ ಸೇರ್ಪಡೆ ಮಾಡುವ ಯಾವುದೇ ಪ್ರಸ್ತಾವನೆ ಪ್ರಸ್ತುತ ಸರ್ಕಾರದ ಮುಂದೆ ಇಲ್ಲ. ಡಾ.ಡಿ.ಎಂ.ನಂಜುಂಡಪ್ಪ ವರದಿಯನ್ವಯ ಎರಡು ತಾಲೂಕುಗಳು ಅತ್ಯಂತ ಹಿಂದುಳಿದ ತಾಲೂಕುಗಳ ವರ್ಗದಲ್ಲಿ ಬರುತ್ತವೆ. ಪ್ರಸ್ತುತ ಡಾ.ಡಿ.ಎಂ.ನಂಜುಂಡಪ್ಪ ವರದಿಯು 22 ವರ್ಷಗಳಷ್ಟು ಹಳೆಯದಾಗಿದ್ದು, ಸೂಚ್ಯಂಕಗಳು ಮೌಲ್ಯ ಕಳೆದುಕೊಂಡಿವೆ. ಹೊಸದಾಗಿ ಸೂಚ್ಯಂಕ ಕಂಡುಹಿಡಿಯಲು ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿಯವರು ಘೋಷಿಸಿದಂತೆ ಪ್ರೊ.ಎಂ.ಗೋವಿಂದರಾವ್ ಅಧ್ಯಕ್ಷತೆಯಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ರಚಿಸಲಾಗಿದೆ. ಈ ಸಮಿತಿ ನೀಡುವ ಸೂಚ್ಯಂಕಗಳ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಅನುದಾನ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ವಸತಿ ನಿಲಯಗಳ ಮಂಜೂರು:

ಇಂಡಿ ತಾಲೂಕಿನ ಹಡಲಸಂಗ, ಬಸನಾಳ, ನಿಂಬಾಳ ಗ್ರಾಮಗಳಲ್ಲಿ ಹೆಚ್ಚಾಗಿ ಪರಿಶಿಷ್ಟ ಜಾತಿಯ ಬಡ ವಿದ್ಯಾರ್ಥಿಗಳು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಿಲ್ಲದೇ ಪೋಷಕರು ಉದ್ಯೋಗಕ್ಕಾಗಿ ದೂರದ ಪಟ್ಟಣಗಳಿಗೆ ಗುಳೇ ಹೋಗುತ್ತಿರುವುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸವು ಮೊಟಕುಗೊಳ್ಳುತ್ತಿದೆ. ಈ ಗ್ರಾಮಗಳಲ್ಲಿ ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರ ವಸತಿ ನಿಲಯಗಳನ್ನು ಮಂಜೂರು ಮಾಡುವುದು ಸರ್ಕಾರದ ಮುಂದೆ ಇದ್ದರೆ, ಯಾವಾಗ ವಸತಿ ನಿಲಯ ಮಂಜೂರು ಮಾಡಲಾಗುವುದು? ಗುಳೆ ಹೋಗುತ್ತಿರುವ ಪಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಸರ್ಕಾರ ಕೈಗೊಳ್ಳುವ ಕ್ರಮಗಳ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಈ ವೇಳೆ ಉತ್ತರ ನೀಡಿದ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಇಂಡಿ ತಾಲೂಕಿನ ನಿಂಬಾಳ ಎಲ್.ಟಿ ಗ್ರಾಮದಲ್ಲಿ ಇಲಾಖೆಯಿಂದ ಒಂದು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವನ್ನು ನಿರ್ವಹಿಸಲಾಗುತ್ತಿದೆ. ಹಡಲಸಂಗ ಮತ್ತು ಬಸನಾಳ ಗ್ರಾಮದಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡುವಂತೆ ಶಾಸಕರು ಕೋರಿದ್ದು, ಸಕ್ಷಮ ಮುಖ್ಯ ಕಾರ್ಯಪ್ರಾಧಿಕಾರಿಗಳಾದ ನಿರ್ವಾಹಣಾಧಿಕಾರಿಗಳು, ಜಿಲ್ಲಾ ಪಂಚಾಯತಿ ಮುಖಾಂತರ ಪ್ರಸ್ತಾವನೆ ಸ್ವೀಕೃತಗೊಂಡ ನಂತರ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!