ತೇರದಾಳ ವಿಜ್ಞಾನ ಪಿಯು ಕಾಲೇಜು ಶೈಕ್ಷಣಿಕ ಮಾನ್ಯತೆ ರದ್ದು

KannadaprabhaNewsNetwork |  
Published : Jun 01, 2025, 02:29 AM IST
ಅಥಣಿ | Kannada Prabha

ಸಾರಾಂಶ

ಇಲ್ಲಿನ ತೇರದಾಳ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಆರಂಭದ ಪೂರ್ವದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅನುಮತಿ ಪಡೆದುಕೊಳ್ಳುವಾಗ ಅಗತ್ಯ ಕಾಗದ ಪತ್ರಗಳಿಗೆ ಫೋರ್ಜರಿ ಸಹಿ ಮಾಡಿ ಖೊಟ್ಟಿ ದಾಖಲಾತಿಗಳನ್ನು ಸೃಷ್ಟಿಸಿದ ಇಲಾಖೆಗೆ ವಂಚನೆ ಮಾಡಿರುವ ಹಿನ್ನೆಲೆಯಲ್ಲಿ ಕಾಲೇಜಿನ ಶೈಕ್ಷಣಿಕ ಮಾನ್ಯತೆಯನ್ನು ರದ್ದು ಪಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಅಥಣಿ

ಇಲ್ಲಿನ ತೇರದಾಳ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಆರಂಭದ ಪೂರ್ವದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅನುಮತಿ ಪಡೆದುಕೊಳ್ಳುವಾಗ ಅಗತ್ಯ ಕಾಗದ ಪತ್ರಗಳಿಗೆ ಫೋರ್ಜರಿ ಸಹಿ ಮಾಡಿ ಖೊಟ್ಟಿ ದಾಖಲಾತಿಗಳನ್ನು ಸೃಷ್ಟಿಸಿದ ಇಲಾಖೆಗೆ ವಂಚನೆ ಮಾಡಿರುವ ಹಿನ್ನೆಲೆಯಲ್ಲಿ ಕಾಲೇಜಿನ ಶೈಕ್ಷಣಿಕ ಮಾನ್ಯತೆಯನ್ನು ರದ್ದು ಪಡಿಸಲಾಗಿದೆ.

ಪಟ್ಟಣದ ಹೊರವಲಯದಲ್ಲಿ ಸನ್ 2019-20ನೇ ಸಾಲಿನಲ್ಲಿ ಆರಂಭಗೊಂಡ ಶ್ರೀ ಅಣ್ಣಪ್ಪ ತೇರದಾಳ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆಯ ತೇರದಾಳ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯವರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಕಚೇರಿಗೆ ಸಲ್ಲಿಸಿದ ಅಗತ್ಯ ದಾಖಲಾತಿಗಳನ್ನು ನಕಲಿ ಸೃಷ್ಟಿಸಿ, ಇಲಾಖೆಗೆ ವಂಚನೆ ಮಾಡಿದ್ದಲ್ಲದೆ, ಶಾಲಾ ಶಿಕ್ಷಣ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ, ಇಲಾಖೆಗೆ ಆರ್ಥಿಕ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಬಳ್ಳಾರಿಯ ವೆಂಕಟೇಶ್ವರ ಆಸ್ಪತ್ರೆಯ ಆನಂದ ಕಿರಶ್ಯಾಳ ಎಂಬವರು ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಲಿಖಿತ ದೂರು ಸಲ್ಲಿಸಿದ್ದರು.ಈ ದೂರಿನ ಅನ್ವಯ ಕಳೆದ ಫೆಬ್ರವರಿ ತಿಂಗಳಲ್ಲಿ ಪದವಿ ಪೂರ್ವ ಶಿಕ್ಷಣ ನಿರ್ದೇಶಕರ ಕಚೇರಿಯ ತಂಡವು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ನಕಲಿ ದಾಖಲೆ ಸೃಷ್ಟಿ: ಅಥಣಿ ಗ್ರಾಮೀಣ ಸಂಕೋನಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರಿ.ಸ.ನಂ. 1898/2ಕದಲ್ಲಿ 3 ಎಕರೆ 35 ಗುಂಟೆ ಜಾಗದಲ್ಲಿ ಕಾಲೇಜು ನಡೆಸಲು 2019-20 ರಲ್ಲಿ ಅನುಮತಿ ಪಡೆದುಕೊಳ್ಳಲಾಗಿತ್ತು. ಅನುಮತಿ ಪಡೆದುಕೊಳ್ಳುವಾಗ ಅಗತ್ಯವಿರುವ ಗ್ರಾಮ ಪಂಚಾಯತಿ ಸಂಪೂರ್ಣ ಅಧಿಕಾರಿಗಳ ಹೆಸರಿನಲ್ಲಿ ಸಹಿ ಹೊಂದಿರುವ ದಾಖಲಾತಿಗಳನ್ನು ನಕ್ಲಿಸ್ ಸೃಷ್ಟಿಸಿದ್ದಾರೆ ಎಂದು ಸನ್ 2024ರಲ್ಲಿ ಇಲಾಖೆಗೆ ಆನಂದ ಕಿರಶ್ಯಾಳ ದೂರು ಸಲ್ಲಿಸಿದ್ದರು.ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ಚಿಕ್ಕೋಡಿ ಉಪನಿರ್ದೇಶಕರು ಮತ್ತು ಅವರ ತಂಡದಿಂದ ಕೂಡಾ ಅಗತ್ಯ ದಾಖಲಾತಿಗಳನ್ನು ಪರಿಶೀಲಿಸಿದಾಗ ಕಾಗದಪತ್ರಗಳಲ್ಲಿ ಸಹಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ 1983ರ ನಿಯಮ 39ರಂತೆ ಕಾಲೇಜು ನಡೆಸಲು ನೀಡಿರುವ ಶೈಕ್ಷಣಿಕ ಮಾನ್ಯತೆಯನ್ನು ಹಿಂಪಡೆಯಲು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರು. ಆದರೆ, ಕಾಲೇಜಿನ ಆಡಳಿತ ಮಂಡಳಿಯವರು ಪೋರ್ಜರಿ ಸಹಿ ಮತ್ತು ನಕಲಿ ದಾಖಲಾತಿಗಳನ್ನು ಸೃಷ್ಟಿಸಿರುವ ಆಪಾದನೆಯನ್ನು ಅಲ್ಲಗಳೆದು ಶಿಕ್ಷಣ ಇಲಾಖೆಗೆ ಸಮಜಾಯಿಸಿ ಉತ್ತರ ನೀಡಿದ್ದರು. ಇದಲ್ಲದೆ ಪ್ರಾಧಿಕಾರದ ಅನುಮತಿ ಇಲ್ಲದೆ ಕಾಲೇಜಿನ ಕಟ್ಟಡವನ್ನು ಸ್ಥಳಾಂತರಿಸಲಾಗಿದ್ದು, ಶಾಲಾ ಶಿಕ್ಷಣ ಇಲಾಖೆಗೆ ನೀಡಿದ ಕಾಲೇಜು ಕಟ್ಟಡದ ನೀಲ ನಕ್ಷೆ ಮತ್ತು ಈಗ ನಡೆಸುತ್ತಿರುವ ಕಾಲೇಜಿನ ಕಟ್ಟಡ ಬೇರೆಯಾಗಿರುವುದರಿಂದ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಇಲಾಖೆಗೆ ಆರ್ಥಿಕ ನಷ್ಟ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಕಳೆದ ಮೇ 23ರಂದು ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು ಈ ಕಾಲೇಜಿನ ಶೈಕ್ಷಣಿಕ ಮಾನ್ಯತೆಯನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಆದೇಶದಂತೆ ಸನ್ 2025-26ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳ ಪ್ರವೇಶಗಳನ್ನು ಪಡೆದುಕೊಳ್ಳಬಾರದು. ಈಗಾಗಲೇ ವ್ಯಾಸಂಗ ಮಾಡುತ್ತಿರುವ ದ್ವಿತೀಯ ವರ್ಷದ ಪದವಿ ಪೂರ್ವ ವಿದ್ಯಾರ್ಥಿಗಳ ಶಿಕ್ಷಣದ ಹಿತದೃಷ್ಟಿಯಿಂದ ಮತ್ತು ಅವರಿಗೆ ಅನಾನುಕೂಲವಾಗದ ನಿಟ್ಟಿನಲ್ಲಿ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದಾಖಲಾತಿ ಮಾಡಿಸುವ ಕ್ರಮ ಜರುಗಿಸುವಂತೆ ಆದೇಶಿಸಿದ್ದಾರೆ.

ಚಿಕ್ಕೋಡಿ ಉಪನಿರ್ದೇಶಕರ ಭೇಟಿ, ಪರಿಶೀಲನೆ

ತೇರದಾಳ ವಿಜ್ಞಾನ ಪದವಿ ಪೂರ್ವ ಕಾಲೇಜಿಗೆ ಶನಿವಾರ ಚಿಕ್ಕೋಡಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಾಂಡುರಂಗ ಭಂಡಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಸಕ್ತ ವರ್ಷದಲ್ಲಿ ಪ್ರಥಮ ಪಿಯುಸಿಗೆ 480 ವಿದ್ಯಾರ್ಥಿಗಳು ದಾಖಲಾಗಿದ್ದು, ದ್ವಿತೀಯ ಪಿಯುಸಿಗೆ 302 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 782 ವಿದ್ಯಾರ್ಥಿಗಳು ದಾಖಲಾಗಿರುತ್ತಾರೆ. ಈ ಎಲ್ಲ ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ದೃಷ್ಟಿಯಿಂದ ಮತ್ತು ಅವರ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ನಿರ್ದೇಶಕರ ಆದೇಶದಂತೆ ಪಿಯುಸಿ ಪ್ರಥಮ ವರ್ಷ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಬಾರದು. ಈಗಾಗಲೇ ವ್ಯಾಸಂಗ ಮಾಡುತ್ತಿರುವ ದ್ವಿತೀಯ ವರ್ಷದ ವಿದ್ಯಾರ್ಥಿಗಳನ್ನು ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ವರ್ಗಾಯಿಸುವಂತೆ ಕಾಲೇಜಿನ ಪ್ರಾಚಾರ್ಯರಿಗೆ ಮತ್ತು ಆಡಳಿತ ಮಂಡಳಿಯವರಿಗೆ ಸೂಚನೆ ನೀಡಲಾಗಿದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ