ಕುಡಿಯಲು ಯೋಗ್ಯವಲ್ಲವೆಂದು ವರದಿಯಲ್ಲಿ ಮಾಹಿತಿ । ಪಟ್ಟಣಿಗರ ನಿದ್ದೆಗೆಡಿಸಿದ ಜಿಲ್ಲಾ ಆರೋಗ್ಯ ಪ್ರಯೋಗಾಲಯದ ಭಯಾನಕ ವರದಿ
ಹಮೀದ್ ಎಚ್.ಎಂ. ಕೊಪ್ಪಕನ್ನಡಪ್ರಭ ವಾರ್ತೆ ಕೊಪ್ಪಪಟ್ಟಣದಲ್ಲಿ ಸರಬರಾಜಾಗುತ್ತಿರುವ ಎಲ್ಲಾ ಕುಡಿಯುವ ನೀರು ಆರೋಗ್ಯಕ್ಕೆ ಅಪಾಯಕಾರಿ ಎಂದು ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದ ಭಯಾನಕ ವರದಿ ಬಹಿರಂಗ ಪಡಿಸಿರುವುದು ನಾಗರಿಕರಲ್ಲಿ ಆತಂಕವುಂಟು ಮಾಡಿದೆ.
ಕುಡಿಯಲು ಯೋಗ್ಯವಲ್ಲದ ನೀರನ್ನು ಅಂದರೆ ಮಾರಕ ಬ್ಯಾಕ್ಟೀರಿಯಾ ಒಳಗೊಂಡ ನೀರು ಕೊಪ್ಪ ಪಟ್ಟಣದಲ್ಲಿ ಸರಬ ರಾಜಾಗುತ್ತಿರುವುದರಿಂದ ಸಾರ್ವಜನಿಕರು ನಲ್ಲಿಯಲ್ಲಿ ಬರುವ ನೀರನ್ನು ಕುಡಿಯುವ ಮುನ್ನ ಹತ್ತಾರು ಭಾರಿ ಯೋಚಿಸ ಬೇಕಾದ ಪ್ರಮೇಯ ಎದುರಾಗಿದೆ.ಇತ್ತೀಚೆಗೆ ನಲ್ಲಿಯಲ್ಲಿ ಬಂದ ನೀರು ಕಲುಷಿತವಾಗಿದ್ದ ಬಗ್ಗೆ ಪಟ್ಟಣದ ನಾಗರಿಕರ ವಾಟ್ಸ್ ಅಪ್ ಗ್ರೂಪ್‌ನಲ್ಲಿ ಹಂಚಿ ಕೊಂಡಿದ್ದು ವೈರಲ್ ಆಗಿ ಇದು ಪಟ್ಟಣಪಂಚಾಯ್ತಿ ವರೆಗೂ ತಲುಪಿದ್ದಲ್ಲದೆ ಜನರಿಂದ ನೀರನ ಗುಣಮಟ್ಟ ತಪಾಸಣೆಗೆ ಒತ್ತಾಯ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಪಟ್ಟಣ ಪಂಚಾಯ್ತಿಯವರು ಮೇ 6ರಂದು ಚಿಕ್ಕಮಗಳೂರಿನ ಜಿಲ್ಲಾ ಆರೋಗ್ಯ ಪ್ರಯೋಗಾಲಯಕ್ಕೆ ಪಟ್ಟಣದ ನಾಲ್ಕು ಕಡೆಗಳ ನೀರನ್ನು ಪರೀಕ್ಷೆಗೆ ಒಳಪಡಿಸಲು ಕೋರಿದ್ದರು.ಅದರಂತೆ ಪ್ರಯೊಗ ನಡೆಸಿದ ಜಿಲ್ಲಾ ಆರೋಗ್ಯ ಪ್ರಯೋಗಾಲಯದ ವರದಿ ಮೇ 9 ರಂದು ಹೊರಬಿದ್ದಿದ್ದು ಇದರಲ್ಲಿ ಕೊಪ್ಪದಲ್ಲಿ ಸರಬರಾಜಾಗುತ್ತಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ.ವರದಿಯ ಪ್ರಕಾರ ಹಿರಿಕೆರೆ ಬಳಿಯಿರುವ ಪಟ್ಟಣ ಪಂಚಾಯ್ತಿಯ ನೀರು ಶುದ್ಧೀಕರಣ ಘಟಕದ ನೀರು, ಮುಖ್ಯರಸ್ತೆಯ ವಾಟರ್ ಟ್ಯಾಂಕ್ ನೀರು, ಸರ್ಕಾರಿ ಆಸ್ಪತ್ರೆ ಬಳಿ ಟ್ಯಾಂಕ್ ನೀರು, ಪಟ್ಟಣದ ಮುಖ್ಯ ಬಸ್‌ನಿಲ್ದಣದ ಬಳಿ ಇರುವ ವಾಟರ್ ಟ್ಯಾಂಕ್ ನಿಂದ ಸಾರ್ವಜನಿಕರಿಗೆ ಕುಡಿಯಲು ಸರಬರಾಜಾಗುತ್ತಿರುವ ನೀರು ಕುಡಿಯಲು ಯೋಗ್ಯವಲ್ಲ ಎಂಬುದು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.ನಂತರ ಮೇ ೧೪ ರ ಬುಧವಾರ ಕೊಪ್ಪದ ನಾಗರಿಕರೊಬ್ಬರು ನೀರು ಸರಬರಾಜಿನ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಪಟ್ಟಣ ಪಂಚಾಯ್ತಿಗೆ ಕೇಳಿದ ಪ್ರಶ್ನೆಗೆ ಮುಖ್ಯಾಧಿಕಾರಿ ಚಂದ್ರಕಾಂತ್ ಲಿಖಿತ ರೂಪದಲ್ಲಿ ಉತ್ತರಿಸಿದ್ದು ಅದರಂತೆ ಜನವರಿಯಿಂದ ಮೇ ತಿಂಗಳವರೆಗೆ ತುಂಗಾ ನದಿಯಿಂದಲೂ ಜೂನ್‌ನಿಂದ ಡಿಸೆಂಬರ್‌ವರೆಗೆ ಹಿರಿಕೆರೆಯಿಂದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತೇವೆ ಎಂದಿದ್ದಾರೆ. ಹಾಗಾದರೆ ಈಗ ಪರೀಕ್ಷೆಗೆ ಒಳಪಡಿಸಿದ ನೀರು ಹಿರಿಕೆರೆ ಯಾದ್ದಾಗಿರದೆ ತುಂಗಾನದಿ ನೀರಾಗಿರುವುದರಿಂದ ಬ್ಯಾಕ್ಟೀರಿಯಗಳ ಉತ್ಪತ್ತಿ ಸ್ಥಾನ ತುಂಗಾನದಿಯೆ ಅಥಾವ ಪ.ಪಂ.ಯ ನೀರು ಶೇಖರಣ ಘಟಕವೆ ಎನ್ನುವುದನ್ನು ತನಿಖೆಗೊಳಪಡಿಸಬೇಕಾದ ಅನಿವಾರ್ಯತೆ ಪಟ್ಟಣ ಪಂಚಾಯ್ತಿ ಮುಂದಿದೆ. ಮಾತ್ರವಲ್ಲ ಈ ಕೆಲಸವನ್ನು ತುರ್ತಾಗಿ ಮಾಡಿ ನಾಗರಿಕರ ಆರೋಗ್ಯ ಕಾಪಾಡುವ ಜವಾಬ್ದಾರಿ ಪಪಂ ಮೇಲಿದೆ.ಮತ್ತೊಮ್ಮೆ ಪಟ್ಟಣ ಪಂಚಾಯತಿ ಕೊಳಕು ನೀರನ್ನು ವಿತರಿಸುವಲ್ಲಿನ ಬೇಜವಾಬ್ದಾರಿ, ನಿರ್ಲಕ್ಷ್ಯ, ನಿಷ್ಕ್ರಿಯತೆ, ಇರ ಬಹು ದಾದ ಭ್ರಷ್ಟತೆಗೆ ಹಿಡಿದ ಕನ್ನಡಿ ಎಂಬಂತೆ ನೀರಿನಲ್ಲಿ ಅಪಾಯಕಾರಿ ಮಟ್ಟದ ಬ್ಯಾಕ್ಟೀರಿಯಗಳ ಕರ್ಮಕಾಂಡ ಬಯಲಿಗೆ ಬಂದಿದೆ.
-- ಬಾಕ್ಸ್-- ರಾಜಕರಣದಿಂದ ನಾಗರಿಕರ ಪ್ರಾಣಹರಣ ಆಗದಿರಲಿರಾಜಕಾರಣದಿಂದಾಗಿ ಕೊಪ್ಪದ ಜನರು ಕಲುಷಿತ ನೀರಿನಿಂದ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಬಾರದು ಯಾರೊಬ್ಬರ ಪ್ರಾಣಹರಣವಾಗಬಾರದು ಎನ್ನುವ ಇಚ್ಛಾಶಕ್ತಿ ಬೆಳೆಸಿಕೊಂಡು ಕೊಪ್ಪದ ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಕ್ಷೇತ್ರದ ಶಾಸಕರು, ಪಂಚಾಯತಿ ಸದಸ್ಯರು ಮತ್ತು ಅಧಿಕಾರಿಗಳು ಒಮ್ಮತದ ತಿರ್ಮಾನಕ್ಕೆ ಬಂದು ಅವಘಡಗಳು ಸಂಭವಿಸುವ ಮುನ್ನ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.