ಮಲ್ಪೆ ಬಂದರಿನಲ್ಲಿ ಉಗ್ರರಿಂದ ಬಾಂಬ್ ಸ್ಫೋಟ, ಐವರು ಗಂಭೀರ..!

KannadaprabhaNewsNetwork | Published : May 13, 2025 11:50 PM
Follow Us

ಸಾರಾಂಶ

ಸಂಜೆ ಸುಮಾರು 4.30ಕ್ಕೆ ಬಂದರಿನಲ್ಲಿ ಒಮ್ಮೇಲೆ ದೊಡ್ಡ ಸದ್ದಿನೊಂದಿಗೆ ಬೆಂಕಿ ಕಾಣಿಸಿಕೊಂಡಿತು. ಜನರು ಗಾಬರಿಯಿಂದ ಅಲ್ಲಿಂದ ಓಡಲಾರಂಭಿಸಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ಹತೋಟಿಗೆ ತಂದು ನಂದಿಸಿದ್ದಾರೆ. ಗಾಯಗೊಂಡ ಐವರು ಮೀನುಗಾರರನ್ನು ತಕ್ಷಣ ಆ್ಯಂಬುಲೆನ್ಸ್‌ನಲ್ಲಿ ಸಾಗಿಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಇಷ್ಟು ಅಣಕು ಪ್ರದರ್ಶನವನ್ನು ಅಗ್ನಿಶಾಮಕ -ಪೊಲೀಸ್ ಇಲಾಖೆ ಸಾರ್ವಜನಿಕರ ಮುಂದೆ ಯಶಸ್ವಿಯಾಗಿ ತೋರಿಸಿ, ಅನಿರೀಕ್ಷಿತ ಯುದ್ಧದಂತಹ ಸಂದರ್ಭ ನಿಭಾಯಿಸಲು ಹೇಗೆ ಸನ್ನದ್ಧರಾಗಿದ್ದೇವೆ ಎಂದು ತೋರಿಸಿದರು.

ವಿಕೋಪಗಳನ್ನು ಎದುರಿಸಲು ನಾಗರಿಕರು ಹೇಗೆ ಸನ್ನದ್ಧರಾಗಿರಬೇಕು ಎಂಬುದನ್ನು ತೋರಿಸುವ ಅಣಕು ಕಾರ್ಯಾಚರಣೆ

ಕನ್ನಡಪ್ರಭ ವಾರ್ತೆ ಉಡುಪಿ

ಭಾರತ- ಪಾಕಿಸ್ತಾನ ಯುದ್ಧ ಭೀತಿಯ ನಡುವಲ್ಲೇ ಇಲ್ಲಿನ ಮಲ್ಪೆ ಬಂದರಿನಲ್ಲಿ ಮಂಗಳವಾರ ಸಂಜೆ ಉಗ್ರರು ಬಾಂಬ್ ಸ್ಫೋಟಿಸಿದ್ದು, ಐವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಆದರೆ ಇದು ಯುದ್ಧವಾದರೆ ಆಗಬಹುದಾದ ವಿಕೋಪಗಳನ್ನು ಎದುರಿಸಲು ಪೊಲೀಸ್ ಇಲಾಖೆ ಮತ್ತು ನಾಗರಿಕರು ಹೇಗೆ ಸನ್ನದ್ಧರಾಗಿರಬೇಕು ಎಂಬುದನ್ನು ತೋರಿಸುವ ಜಿಲ್ಲಾಡಳಿತದ ಅಣಕು ಕಾರ್ಯಾಚರಣೆಯಾಗಿತ್ತು.

ಸಂಜೆ ಸುಮಾರು 4.30ಕ್ಕೆ ಬಂದರಿನಲ್ಲಿ ಒಮ್ಮೇಲೆ ದೊಡ್ಡ ಸದ್ದಿನೊಂದಿಗೆ ಬೆಂಕಿ ಕಾಣಿಸಿಕೊಂಡಿತು. ಜನರು ಗಾಬರಿಯಿಂದ ಅಲ್ಲಿಂದ ಓಡಲಾರಂಭಿಸಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ಹತೋಟಿಗೆ ತಂದು ನಂದಿಸಿದ್ದಾರೆ. ಗಾಯಗೊಂಡ ಐವರು ಮೀನುಗಾರರನ್ನು ತಕ್ಷಣ ಆ್ಯಂಬುಲೆನ್ಸ್‌ನಲ್ಲಿ ಸಾಗಿಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಇಷ್ಟು ಅಣಕು ಪ್ರದರ್ಶನವನ್ನು ಅಗ್ನಿಶಾಮಕ -ಪೊಲೀಸ್ ಇಲಾಖೆ ಸಾರ್ವಜನಿಕರ ಮುಂದೆ ಯಶಸ್ವಿಯಾಗಿ ತೋರಿಸಿ, ಅನಿರೀಕ್ಷಿತ ಯುದ್ಧದಂತಹ ಸಂದರ್ಭ ನಿಭಾಯಿಸಲು ಹೇಗೆ ಸನ್ನದ್ಧರಾಗಿದ್ದೇವೆ ಎಂದು ತೋರಿಸಿದರು.ಈ ಕಾರ್ಯಾಚರಣೆಯಲ್ಲಿ ಮಲ್ಪೆ ಮೀನುಗಾರರ ಸಂಘ, ಕರಾವಳಿ ಕಾವಲು ಪಡೆ, ಆರೋಗ್ಯ ಇಲಾಖೆ, ಮೀನುಗಾರಿಕಾ ಇಲಾಖೆ, ಅಗ್ನಿಶಾಮಕ ದಳ, ಸುಂಕ ಇಲಾಖೆಗಳು ಜಂಟಿಯಾಗಿ ಭಾಗವಹಿಸಿದ್ದವು.

ಈ ಸಂದರ್ಭ ಕರಾವಳಿ ಕಾವಲು ಪಡೆಯ ಎಸ್ಪಿ ಮಿಥುನ್, ಅಧಿಕಾರಿಗಳು ಹಾಗೂ ಬಂದರಿನಲ್ಲಿ ನೂರಾರು ಮೀನುಗಾರರಿಗೆ ಕಾರ್ಯಾಚರಣೆಯ ಮಹತ್ವವನ್ನು ವಿವರಿಸಿದರು.

ಜೊತೆಗೆ

ಕರಾವಳಿ ಕಾವಲು ಪಡೆಯ ಶಸ್ತ್ರಸಜ್ಜಿತ ಸಿಬ್ಬಂದಿಗಳು ಬೋಟ್‌ನಲ್ಲಿ ಬಂದರಿನ ಸುತ್ತಲೂ ಗಸ್ತು ತಿರುಗುವ ಮೂಲಕ ವಿಶೇಷ ಸನ್ನಿವೇಶದಲ್ಲಿ ಇಲಾಖೆಯ ಕಾರ್ಯದ ಬಗ್ಗೆ ಅರಿವು ಮೂಡಿಸಿದರು. ಕರಾವಳಿ ಕಾವಲು ಪಡೆಯ ಪೋಲಿಸ್ ನಿರೀಕ್ಷಕರಾದ ಪ್ರಮೋದ್, ಸೀತರಾಮ್, ಪಿಎಸ್ಐ ಫೆಮಿನಾ ಸೇರಿದಂತೆ ಮೊದಲಾದ ಅಧಿಕಾರಿಗಳು ಹಾಜರಿದ್ದರು.

--------------ಕರ್ನಾಟಕದ 12 ಪ್ರಮುಖ ಬಂದರಿನಲ್ಲಿ ಮಲ್ಪೆ ಬಂದರು ಒಂದಾಗಿದೆ. ಅತೀ ಹೆಚ್ಚು ಮೀನುಗಾರಿಕಾ ಚಟುವಟಿಕೆ ನಡೆಯುವ ಬಂದರು ಇದಾಗಿದ್ದು, ಇಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದರೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಅಣಕು ಕಾರ್ಯಾಚರಣೆಯನ್ನು ನೀಡಲಾಗಿದೆ. ಮೀನುಗಾರರು 3 ಬೋಟ್‌ಗಳು ಒಟ್ಟಿಗೆ ಮೀನುಗಾರಿಕೆ ತೆರಳಬೇಕು. ಸೂಕ್ಷ್ಮ ಪ್ರದೇಶಗಳಿಗೆ ಮೀನುಗಾರಿಕೆಗೆ ತೆರಳುವಾಗ ಮುಂಜಾಗ್ರತೆ ವಹಿಸಲು ಸೂಚಿಸಲಾಗಿದೆ.

। ಮಿಥುನ್, ಎಸ್ಪಿ