ಸರ್ವೇ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೊಳಪಡಿಸಿ

KannadaprabhaNewsNetwork | Published : Feb 1, 2024 2:04 AM

ಸಾರಾಂಶ

ಭೂಮಿಗೆ ಬಂಗಾರದ ಬೆಲೆ ಬಂದಿದ್ದೇ ತಡ, ಸರ್ಕಾರಿ ಆಸ್ತಿಗಳನ್ನು ಉಳಿಸಬೇಕಾದ ಕಂದಾಯ, ಸರ್ವೇ ಅಧಿಕಾರಿಗಳು ರೈತರ ಕೈಗೆ ಸಿಗದೆ ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ಸರ್ಕಾರಿ ಕೆರೆ, ರಾಜಕಾಲುವೆ, ಗೋಮಾಳಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರುವ ದೊಡ್ಡ ದಂಧೆ ಮಾಲೂರು ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿದೆ

ಕನ್ನಡಪ್ರಭ ವಾರ್ತೆ ಮಾಲೂರು

ತಾಲೂಕಿನ ಭೂ ಹಗರಣವನ್ನು ತನಿಖೆ ಮಾಡಲು ವಿಶೇಷ ನ್ಯಾಯಾಲಯ ಸ್ಥಾಪಿಸಿ, ಸರ್ಕಾರಿ ಆಸ್ತಿಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡುವ ಕಂದಾಯ ಸರ್ವೇ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೊಳಪಡಿಸಬೇಕೆಂದು ಅಗ್ರಹಿಸಿ ರೈತಸಂಘದ ಕಾರ‍್ಯಕರ್ತರು ತಾಲೂಕು ಕಚೇರಿ ಮುಂದೆ ಪೊರಕೆ ಚಳುವಳಿ ನಡೆಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಭೂಮಿಗೆ ಬಂಗಾರದ ಬೆಲೆ ಬಂದಿದ್ದೇ ತಡ, ಸರ್ಕಾರಿ ಆಸ್ತಿಗಳನ್ನು ಉಳಿಸಬೇಕಾದ ಕಂದಾಯ, ಸರ್ವೇ ಅಧಿಕಾರಿಗಳು ರೈತರ ಕೈಗೆ ಸಿಗದೆ ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ಸರ್ಕಾರಿ ಕೆರೆ, ರಾಜಕಾಲುವೆ, ಗೋಮಾಳಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರುವ ದೊಡ್ಡ ದಂಧೆ ಮಾಲೂರು ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತೇಲಿಗಿ ಛಾಪಾ ಕಾಗದ ಹಗರಣವನ್ನು ಮೀರಿಸುವ ಭೂ ಹಗರಣ ತಾಲೂಕಿನಲ್ಲಿ ನಡೆಯುತ್ತಿದೆ. ಒಂದು ಕಡೆ ಬಡ, ಕೂಲಿ ಕಾರ್ಮಿಕರು ದರಖಾಸ್ತು ಕಮಿಟಿ ಮೂಲಕ ಭೂ ರಹಿತರಿಗೆ ಅನುಕೂಲವಾಗುವ ಸಾಗುವಳಿ ಚೀಟಿಗಾಗಿ ಸಲ್ಲಿಸಿರುವ ನಮೂನೆ ೫೦, ೫೩, ೫೭ ಅರ್ಜಿಗಳು ತಾಲೂಕು ಕಚೇರಿಯ ಟೇಬಲ್ ಮೇಲೆ ಧೂಳು ಹಿಡಿಯುತ್ತಿವೆ ಎಂದು ಆರೋಪಿಸಿದರು.

ಅಧಿಕಾರಿಗಳು ರೈತರ ಹೆಸರಿನಲ್ಲಿ ಅಕ್ರಮ ಸಾಗುವಳಿಗಳನ್ನು ಸೃಷ್ಟಿಸಿ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮಾರುವ ಮೂಲಕ ತಾಲೂಕು ಕಚೇರಿಯನ್ನು ರಿಯಲ್ ಎಸ್ಟೇಟ್ ಉದ್ಯಮಿಗಳ ಕಚೇರಿಯನ್ನಾಗಿ ಮಾರ್ಪಡಿಸಿದ್ದಾರೆ. ಸಣ್ಣಪುಟ್ಟ ರೈತರು ತಾಲೂಕು ಕಚೇರಿ ಅಧಿಕಾರಿಗಳ ಸಂಪರ್ಕಿಸಬೇಕಾದರೆ ಅಧಿಕಾರಿಗಳ ತಟ್ಟೆಗೆ ದಕ್ಷಣೆ ಹಾಕಬೇಕು. ಆಗ ರೈತರಿಗೆ ದರ್ಶನ ನೀಡುತ್ತಾರೆ ಎಂದು ಕಿಡಿಕಾರಿದರು.

ತಾಲೂಕು ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ ಮಾತನಾಡಿ, ೨೦೧೦ ರಿಂದ ಇದುವರೆಗೂ ತಾಲೂಕಿನಾದ್ಯಂತ ವಿತರಣೆಯಾಗಿರುವ ಸಾಗುವಳಿ ಚೀಟಿ ತನಿಖೆ ನಡೆಸಿದರೆ ಎಲ್ಲಾ ಅಧಿಕಾರಿಗಳೂ ೧೪ ವರ್ಷ ಜೈಲು ಶಿಕ್ಷೆ ಅನುಭವಿಸುವುದು ಸತ್ಯ. ಹಿರಿಯ ಜಿಲ್ಲಾಧಿಕಾರಿ ಹೇಳಿದಂತೆ ಮಾಲೂರಿನ ಭೂ ಹಗರಣ ಸಂಪೂರ್ಣ ತನಿಖೆಯಾಗಬೇಕಾದರೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಪ ವಿಭಾಗಾಧಿಕಾರಿ ಸೇರಿ ಪ್ರತ್ಯೇಕವಾಗಿ ಒಂದು ನ್ಯಾಯಾಲಯವನ್ನೇ ಸ್ಥಾಪಿಸಬೇಕಾಗುವ ಮಟ್ಟಕ್ಕೆ ಭೂ ಹಗರಣ ನಡೆದಿದೆ ಎಂದರು.

ತಾಲೂಕಿನ ಕೆರೆಗಳು ಒಂದು ಕಡೆ ಮಣ್ಣು ಮಾಫಿಯಾ, ಮತ್ತೊಂದು ಕಡೆ ಭೂಗಳ್ಳರ ಕಣ್ಣು ಬಿದ್ದು ಮೂಲ ಸ್ವರೂಪವನ್ನು ಕಳೆದುಕೊಂಡು ದೊಡ್ಡ ದೊಡ್ಡ ಲೇಔಟ್‌ಗಳಾಗಿ ಮಾರ್ಪಟ್ಟಿವೆ.

ಹಾಗಾಗಿ ತಾಲೂಕಿನ ಭೂ ಹಗರಣವನ್ನು ತನಿಖೆ ನಡೆಸಲು ವಿಶೇಷ ನ್ಯಾಯಾಲಯ ಸ್ಥಾಪಿಸಿ, ಸರ್ಕಾರಿ ಆಸ್ತಿಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸುವ ಕಂದಾಯ ಸರ್ವೇ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೊಳಪಡಿಸಬೇಕೆಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ರಮೇಶ್, ಕಂದಾಯ, ಸರ್ವೇ ಇಲಾಖೆಯ ಕೆಲವು ಅಧಿಕಾರಿಗಳು ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿ ತೊಡಗಿರುವ ದೂರುಗಳಿವೆ. ಎಲ್ಲಾ ದಾಖಲೆಗಳೊಂದಿಗೆ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಕಂದಾಯ ಸಚಿವರಿಗೆ ವರದಿ ನೀಡಿ, ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.

ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಹರೀಶ್, ನಾರಾಯಣಪ್ಪ, ಮುನಿರಾಜು, ವೆಂಕಟರಾಜು, ಶ್ರೀನಿವಾಸ್, ಗಿರೀಶ್, ರೂಪೇಶ್, ಸುಪ್ರೀಂಚಲ, ರಾಜೇಶ್, ಆಂಜಿನಪ್ಪ, ಮಂಗಸಂದ್ರ ತಿಮ್ಮಣ್ಣ ಇನ್ನಿತರರು ಇದ್ದರು.

Share this article