ಶಿಕ್ಷಕರ ಅರ್ಹತಾ ಪರೀಕ್ಷಾ ಕುರಿತು 2026ರ ಮೇ 29ರಂದು ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದ ದೇಶಾದ್ಯಂತ 17 ಲಕ್ಷ ಶಿಕ್ಷಕರಲ್ಲಿ ಸೇವಾ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಅಭದ್ರತೆ ಭಾವನೆ ನಿರ್ಮಾಣವಾಗಿದೆ.
ಹುಬ್ಬಳ್ಳಿ:
ಶಿಕ್ಷಕರ ಅರ್ಹತಾ ಪರೀಕ್ಷಾ ಕುರಿತು 2026ರ ಮೇ 29ರಂದು ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದ ದೇಶಾದ್ಯಂತ 17 ಲಕ್ಷ ಶಿಕ್ಷಕರಲ್ಲಿ ಸೇವಾ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಅಭದ್ರತೆ ಭಾವನೆ ನಿರ್ಮಾಣವಾಗಿದೆ. ಹೀಗಾಗಿ ಈ ಆದೇಶ ಮರುಪರಿಶೀಲಿಸುವಂತೆ ರಾಷ್ಟ್ರವ್ಯಾಪಿ ಜಾಗೃತಿ ಹಾಗೂ ವಕಾಲತ್ತು ಅಭಿಯಾನ ಆರಂಭಿಸಲಾಗುವುದು ಎಂದು ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಂದೀಪ ಬೂದಿಹಾಳ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಭಿಯಾನದ ಭಾಗವಾಗಿ ಜೂ. 18 ರಂದು ಧಾರವಾಡದಲ್ಲಿ ಸಂಜೆ 4 ಗಂಟೆಗೆ ಪ್ರಧಾನಿ ಮತ್ತು ಕೇಂದ್ರ ಶಿಕ್ಷಣ ಸಚಿವರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಗುವುದು ಎಂದರು.ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ (ಎನ್‌ಸಿಟಿಇ) ಆಗಸ್ಟ್ 23, 2010ರಿಂದ ಶಿಕ್ಷಕರಾಗಿ ನೇಮಕಾತಿ ಹೊಂದುವವರಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಕಡ್ಡಾಯ ಮಾಡಿದೆ. ಶಿಕ್ಷಕರ ನೇಮಕಾತಿ ನಿಯಮಾವಳಿಗಳ ಪ್ರಕಾರ 2010 ಆ. 23ರ ಮುಂಚೆ ನೇಮಕಗೊಂಡ ಶಿಕ್ಷಕರಿಗೆ ಟಿಇಟಿ ಕಡ್ಡಾಯದಿಂದ ವಿನಾಯತಿ ನೀಡುವುದು ನ್ಯಾಯ ಸಮ್ಮತವಾಗಿದೆ ಎಂದು ಆದೇಶವಾಗಿತ್ತು ಎಂದು ಹೇಳಿದರು.ಅದರಂತೆ 2026ರ ಮೇ 29ರಂದು ಸುಪ್ರೀಂಕೋರ್ಟ್ ಶಿಕ್ಷಕರ ಹಿತ ಕಾಯುವ ಶಿಕ್ಷಕ ಸಂಘಟನೆಗಳು ಮತ್ತು ವಿವಿಧ ರಾಜ್ಯಗಳ ಪರಿಶೀಲನಾ ಅರ್ಜಿ ವಿಲೇವಾರಿ ಮಾಡುವಾಗ ಹಿಂದಿನ ಅರ್ಜಿ ಎತ್ತಿ ಹಿಡಿದಿದೆ. ಇದರಿಂದಾಗಿ 2010ಕ್ಕಿಂತ ಮುಂಚೆ ನೇಮಕಗೊಂಡು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ 80 ಸಾವಿರ ಶಿಕ್ಷಕರು ಬೀದಿಗೆ ಬೀಳಲಿದ್ದಾರೆ. ಶಿಕ್ಷಕರ ಸೇವಾ ಹಕ್ಕು, ಹಿರಿತನ, ಬಡ್ತಿ ನಿರೀಕ್ಷೆ ಮತ್ತು ಇತರ ಕಾನೂನು ಬದ್ಧ ಪ್ರಯೋಜನ ರಕ್ಷಿಸಲು ಅಗತ್ಯವಾದ ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಪ್ರಧಾನಿ ಮುತುವರ್ಜಿ ವಹಿಸಿ ಸುಪ್ರೀಂಕೋರ್ಟ್ ತೀರ್ಪನ್ನು ಮರುಪರಿಶೀಲನೆ ಮಾಡುವಲ್ಲಿ ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಡಾ. ಶಿವಪೂಜಿ ಕೋಟಿ, ರಾಜ್ಯ ಕಾರ್ಯದರ್ಶಿ ಶ್ರೀಧರ್ ಪಾಟೀಲ ಕುಲಕರ್ಣಿ ಸೇರಿದಂತೆ ಹಲವರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.