ತ್ರಿಭಾಷಾ ಸೂತ್ರದ ಸಾಧಕ ಬಾಧಕ ಪುನರ್ ಅವಲೋಕನ ಅಗತ್ಯ। ಚಿಕ್ಕಮಗಳೂರು ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನ,
ಪಠ್ಯ ಪುಸ್ತಕ ವಿವಾದ ರಾಜಕೀಯ ಪ್ರೇರಿತ. ಪಠ್ಯ ಪುಸ್ತಕಗಳನ್ನು ತಜ್ಞರು ರಚಿಸಬೇಕೇ ಹೊರತು ರಾಜಕಾರಣಿಗಳ ಪ್ರವೇಶ ಸಲ್ಲದು. ರಾಜಕಾರಣಿಗಳು ತಜ್ಞರಾದರೆ ಪರವಾಗಿಲ್ಲ, ಆದರೆ, ಅದು ಸಾಮರಸ್ಯ ಕದಡುವಂತಾಗಬಾರದು ಎಂದು ಚಿಕ್ಕಮಗಳೂರು ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಾಹಿತಿ ಡಾ. ಬೆಳವಾಡಿ ಮಂಜುನಾಥ್ ಕಿವಿ ಮಾತು ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಆರಂಭಗೊಂಡ 2 ದಿನಗಳ ಕನ್ನಡ ಸಾಹಿತ್ಯ ಸಮ್ಮೆಳನಾಧ್ಯಕ್ಷತಾ ಭಾಷಣದಲ್ಲಿ ಲಕ್ಷಾಂತರ ರು. ವಿನಿಯೋಗಿಸಿ ಪುಸ್ತಕಗಳನ್ನು ಮುದ್ರಿಸಿ ಆಗಾಗ ಬದಲಿಸಿ, ಪಾಠಗಳನ್ನು ತೆಗೆಯುವುದು, ಮಧ್ಯದಲ್ಲಿ ಸೇರಿಸುವುದರಿಂದ ಅಧ್ಯಾಪಕರ ಹಾಗೂ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರು.ನಮ್ಮ ಶಿಕ್ಷಣ ಕೂಡ ಮಾರುಕಟ್ಟೆಗೆ ಅಗತ್ಯವಾದ ಯುವ ಪೀಳಿಗೆಯನ್ನು ಸೃಷ್ಟಿಸುತ್ತಿದೆ. ಶಿಕ್ಷಣ ವೈಯಕ್ತಿಕ ವಿಕಾಸ ಮತ್ತು ಆಸಕ್ತಿಯ ಪ್ರಯೋಗ ವಾಗಿ ಮನುಷ್ಯ ಕೇಂದ್ರಿತವಾಗದೆ ಮಾರುಕಟ್ಟೆಗನುಗುಣವಾಗಿ ಬದಲಾಗುತ್ತಿರುವುದು ದುರಂತ. ಕನ್ನಡ ಅನುಷ್ಠಾನದಲ್ಲಿ ರಾಜಕಾರಣಿಗಳ ಇಚ್ಛಾಸಕ್ತಿ ಕೊರತೆ, ಅಧಿಕಾರಿಗಳ ಉದಾಸೀನತೆ, ವಿದ್ಯಾವಂತರ ಉಪೇಕ್ಷೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡದಿರುವುದು ಕಾರಣ. ಎಲ್ಲರೂ ಸಂಘಟಿತರಾಗಿ ಹೋರಾಡದಿರುವುದರಿಂದ ಕನ್ನಡಕ್ಕೆ ಈ ದುಸ್ಥಿತಿ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಶಿಕ್ಷಣೋದ್ಯಮ:
ಆಧುನಿಕತೆ ಜನರ ಸಹಜ ಸಂಬಂಧಗಳು ಮತ್ತು ಸಂಸ್ಕೃತಿ ಅಂತರವನ್ನು ಹೆಚ್ಚಿಸುತ್ತಲೇ ಇದೆ. ಕನ್ನಡದ ಬಾಗಿಲಿನಿಂದ ವಿಶ್ವ ಪ್ರಜ್ಞೆಯನ್ನು ಖಂಡಿತಾ ಪಡೆಯಬಹುದು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಹಿಂದಿಗಿಂತಲೂ ಹೆಚ್ಚು ಪ್ರಯತ್ನಶೀಲವಾಗಬೇಕು. ಕೇವಲ ಸಾಹಿತ್ಯ ರಚನೆ, ಸಮ್ಮೇಳನ ಮಾಡುವುದರಿಂದ ಕನ್ನಡ ಉಳಿಸಲಾಗುವುದಿಲ್ಲ. ಕನ್ನಡನಾಡಿನಲ್ಲಿರುವ ಎಲ್ಲರೂ ದೈನಂದಿನ ಬದುಕಿನಲ್ಲಿ ಕನ್ನಡ ಭಾಷೆ ಬಳಸುವುದು ಜರೂರಾಗಿ ಆಗಬೇಕಾಗಿದೆ ಎಂದು ಹೇಳಿದರು.
ನಾಡ ಭಾಷೆ ಉಳಿಸುವುದು ಜನರು ಮತ್ತು ಸರ್ಕಾರದ ಹೊಣೆ. ಅದರ ಬೆಳವಣಿಗೆಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು. ಕರ್ನಾಟಕ ಸರ್ಕಾರ ಕನ್ನಡವನ್ನು ಆಡಳಿತ ಭಾಷೆಯೆಂದು ಘೋಷಿಸಿ ದಶಕಗಳೇ ಕಳೆದಿವೆ. ಆದರೆ, ಅನುಷ್ಠಾನದಲ್ಲಿ ಪೂರ್ಣ ಯಶಸ್ವಿಯಾಗಿಲ್ಲ. ಭಾಷೆ ಉಳಿಯುವವರೆಗೆ ಸಂಸ್ಕೃತಿ ಉಳಿಯುತ್ತದೆ ಎಂಬ ಅರಿವು ಇಂದಿನ ಅಗತ್ಯ ಎಂದರು.ಸಮ್ಮೇಳನಕ್ಕೂ ಮುನ್ನ ತಾಲೂಕು ಕಚೇರಿಯಿಂದ ಕುವೆಂಪು ಕಲಾಮಂದಿರದವರೆಗೆ ಪ್ರಮುಖ ರಸ್ತೆಗಳಲ್ಲಿ ಕಲಾ ತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು.
28 ಕೆಸಿಕೆಎಂ 3ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರ ಶನಿವಾರ ಆರಂಭಗೊಂಡ ಚಿಕ್ಕಮಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಾ. ಪಟೇಲ್ ಪಾಂಡು ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಡಾ. ಬೆಳವಾಡಿ ಮಂಜುನಾಥ್, ಶಾಸಕ ಎಚ್.ಡಿ. ತಮ್ಮಯ್ಯ, ಸುಜಾತಾ ಶಿವಕುಮಾರ್, ಸೂರಿ ಶ್ರೀನಿವಾಸ್ ಇದ್ದರು.
----28 ಕೆಸಿಕೆಎಂ 4 ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರ ಶನಿವಾರ ಆರಂಭಗೊಂಡ ಚಿಕ್ಕಮಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಕನ್ನಡ ಅಭಿಮಾನಿಗಳು.