- ಬಿಎಸ್‌ಸಿ ಕಾಲೇಜಿನಲ್ಲಿ ಶೈಕ್ಷಣಿಕ ಚಟುವಟಿಕೆಗಳ ಸಮಾರೋಪ । ಬೀಳ್ಕೊಡುಗೆ

- - -

ದಾವಣಗೆರೆ: ಕಾಲೇಜಿನಲ್ಲಿ ಮೂರು ವರ್ಷ ಏನು ಕಲಿತೆ ಎಂಬುದನ್ನು ಪರಾಮರ್ಶಿಸಿಕೊಳ್ಳಿ. ಇದು ಸ್ಪರ್ಧಾತ್ಮಕ ಯುಗ. ಸ್ಪರ್ಧಾತ್ಮಕ ಯುಗಕ್ಕೆ ನಿಮ್ಮನ್ನು ತೆರೆದುಕೊಳ್ಳಿ, ಹೊಸತನ ಕಂಡುಕೊಳ್ಳಿ. ನೀವು ಏನೂ ಪ್ರಯತ್ನ ಮಾಡದೇ ಸಮಾಜದಲ್ಲಿ ಸಾಧನೆ ಮೂಲಕ ಗುರುತಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬಿಎಸ್‌ಸಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಕ್ಷ ಬಿ.ಸಿ.ಶಿವಕುಮಾರ ಹೇಳಿದರು.

ನಗರದ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನ 2025-26ನೇ ಸಾಲಿನ ವಿದ್ಯಾರ್ಥಿ ಸಂಘ ಹಾಗೂ ಸಾಂಸ್ಕೃತಿಕ ಚಟುವಟಿಕೆ, ಕ್ರೀಡಾ ಚಟುವಟಿಕೆ, ಎನ್.ಎಸ್.ಎಸ್., ಯುವ ರೆಡ್ ಕ್ರಾಸ್ ಘಟಕದ ಸಮಾರೋಪ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದು ಪದವಿ ಮುಗಿಸುವವರು ಇಂದಿನ ವಾಸ್ತವವನ್ನು ಅರ್ಥ ಮಾಡಿಕೊಂಡು ನಿಮ್ಮನ್ನು ನೀವು ಪ್ರಪಂಚಕ್ಕೆ ತೆರೆದುಕೊಳ್ಳಿ. ಎಂಟು ಗಂಟೆಗಳು ಒಂದೆಡೆ ಕುಳಿತುಕೊಳ್ಳುವುದೇ ಈಗಿನ ನಿಮ್ಮ ಸವಾಲುಗಳು, ಪ್ರತಿದಿನ ಹೊಸದನ್ನು ಕಲಿಯಬೇಕು. ನಿಮ್ಮ ಸಾಧನೆಗೆ ಮೊದಲು ತಾಳ್ಮೆ, ಸಮಯಪ್ರಜ್ಞೆ ಬೇಕು. ನೀವು ಬುದ್ಧಿವಂತರಿರಬಹುದು. ಆದರೆ ತಾಳ್ಮೆ ಇಲ್ಲದಿದ್ದರೆ ಸಾಧನೆ ಮಾಡಲು ಸಾಧ್ಯವಿಲ್ಲ. ಯಾವ ಪದವಿ ಎಷ್ಟು ಮಹತ್ವದ್ದು ಎಂಬುದರ ಅರಿವು ಇರಲಿ. ಅಂತಿಮ ಪದವಿ ವಿದ್ಯಾರ್ಥಿಗಳ ನಿಮ್ಮ ಮುಂದಿನ ಜೀವನ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.


ಕಾಲೇಜಿನ ಪ್ರಾಚಾರ್ಯ ಡಾ. ಎಂ.ಸಿ. ಗುರು ಮಾತನಾಡಿ, ಮಹಿಳಾ ಸಬಲೀಕರಣ, ಮಹಿಳಾ ಸ್ವಾವಲಂಬಿನೆ ಈ ದಿನದ ಅತಿ ಮುಖ್ಯ ಅವಶ್ಯಕತೆಯಾಗಿದೆ. ಉದ್ಯೋಗ ಹುಡುಕುವುದಕ್ಕಿಂತ ಉದ್ಯೋಗವನ್ನು ಸೃಷ್ಟಿಸುವವರು ನೀವಾಗಬೇಕು. ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವ ಕೌಶಲ್ಯ ನಿಮ್ಮಲ್ಲಿ ಇರಲಿ ಎಂದು ಹೇಳಿದರು.

ಚಲನಚಿತ್ರ ನಟಿ ಕಾರುಣ್ಯ ಗೌಡ ಮಾತನಾಡಿ, ಇದು ಸ್ಪರ್ಧಾತ್ಮಕ ಯುಗ, ಈಗ ನಾವು ಯಾವಾಗಲೂ ಸ್ಪರ್ಧೆ ಮಾಡುತ್ತಲೇ ಇರಬೇಕು. ಕಾಲೇಜು ಜೀವನ ಅತ್ಯಂತ ಸಂತೋಷದಾಯಕವಾಗಿದ್ದು ಅದನ್ನು ಅತಿ ಉಲ್ಲಾಸದಿಂದ ಕಳೆಯಿರಿ, ಹಾಗೆಯೇ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಕಾಲೇಜು ಹಾಗೂ ಉಪನ್ಯಾಸಕರುಗಳ ಮಾರ್ಗದರ್ಶನ ಮತ್ತು ಸಲಹೆಗಳನ್ನು ಪಡೆಯಿರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಲೆಕ್ಕ ಪರಿಶೋಧಕರಾದ ಸಹನಾ, ಎಸ್‌ಬಿಸಿ ಪ್ರದ ಮಹಿಳಾ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಚಾರ್ಯ ಡಾ.ಕೆ.ಷಣ್ಮುಖ, ಅಥಣಿ ಸಂಯುಕ್ತ ಪಪೂ ಕಾಲೇಜಿನ ಪ್ರಾಚಾರ್ಯೆ ಡಯಾನ ದಿವ್ಯ, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.

- - -

-25ಕೆಡಿವಿಜಿ38: ದಾವಣಗೆರೆಯ ಬಿ.ಎಸ್.ಚನ್ನಬಸಪ್ಪ ಪ್ರದ ಕಾಲೇಜಿನ ವಾರ್ಷಿಕ ಸಮಾರಂಭದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.