ಕಾಂಗ್ರೆಸ್ ಗೆಲ್ಲಿಸುವ ಮೂಲಕ ಹಾಸನ ಉಳಿಸಲಾಗಿದೆ
ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಭಷ್ಟ ಬಿಜೆಪಿ ಮತ್ತು ಸ್ವಾರ್ಥಿ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಿದ ಹಾಸನ ಲೋಕಸಭಾ ಕ್ಷೇತ್ರದ ಮತದಾರರಿಗೆ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಧನ್ಯವಾದ ಸಲ್ಲಿಸುತ್ತದೆ. ಹಾಸನದ ಸಂಸದರಾಗಿ ಆಯ್ಕೆಯಾಗಿರುವ ಶ್ರೇಯಸ್ ಪಟೇಲ್ ಅವರಿಗೆ ಅಬಿನಂಧನೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ ಮಾ.೩೧ ರಂದು ಹಾಸನದಲ್ಲಿ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದ ನೇತೃತ್ವದಲ್ಲಿ ‘ಸಮಾನ ಮನಸ್ಕರ ಸಮಾಲೋಚನಾ ಸಭೆ’ ನಡೆಸಿ ‘ಭ್ರಷ್ಟ ಬಿಜೆಪಿ - ಸ್ವಾರ್ಥಿ ಜೆಡಿಎಸ್ ಸೋಲಿಸಿ; ಹಾಸನ ಉಳಿಸಿ’ ಎಂಬ ಅಭಿಯಾನವನ್ನು ಆರಂಭಿಸಲಾಗಿತ್ತು. ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ೮ ವಿಧಾನಸಭಾ ಕ್ಷೇತ್ರಗಳ ನಗರ ಗ್ರಾಮಾಂತರ ಮಟ್ಟದಲ್ಲಿ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದ ನೇತೃತ್ವದಲ್ಲಿ ಸ್ವತಂತ್ರವಾಗಿ ಅಭಿಯಾನ ನಡೆಸಲಾಗಿತ್ತು. ಈ ಅಭಿಯಾನದಲ್ಲಿ ಹಲವು ಸಾರ್ವಜನಿಕ ಸಭೆಗಳು, ಸಮಾಲೋಚನಾ ಸಭೆಗಗಳು, ಮಾಧ್ಯಮ ಗೋಷ್ಠಿಗಳು, ಸ್ಥಳೀಯ ಮಟ್ಟದ ಸಭೆಗಳು ಜೊತೆಗೆ ‘ಜನ ಸತ್ತಿಲ್ಲ’ ಎನ್ನುವ ಬೀದಿ ನಾಟಕದ ಮುಖಾಂತರ ಲೋಕಸಭಾ ಕ್ಷೇತ್ರದಾದ್ಯಂತ ನಮ್ಮ ತಂಡ ಸಂಚರಿಸಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದೆ ಎಂದು ಹೇಳಿದರು.‘ಈ ಅಭಿಯಾನದಲ್ಲಿ ನರೇಂದ್ರ ಮೋದಿಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಜನವಿರೋಧಿ ಮತ್ತು ಸಂವಿಧಾನ ವಿರೋಧಿ ದುರಾಡಳಿತ ಹಾಗೂ ಕೇವಲ ಒಂದೇ ಕುಟುಂಬದ ಸ್ವಾರ್ಥಕ್ಕಾಗಿ ಜೆಡಿಎಸ್ ನಡೆಸಿದ ಅವಕಾಶವಾದಿ ರಾಜಕಾರಣ ಮತ್ತು ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಶೂನ್ಯ ಕೆಲಸದ ಕುರಿತು ಹಾಸನ ಲೋಕಸಭಾ ಕ್ಷೇತ್ರದ ಜನರಿಗೆ ಕರಪತ್ರ, ಸಭೆ, ಭಾಷಣ, ಚರ್ಚೆ ಮತ್ತು ಬೀದಿ ನಾಟಕದ ಮುಖಾಂತರ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಲಾಯಿತು. ನಮ್ಮ ಒಕ್ಕೂಟ ಸ್ವತಂತ್ರವಾಗಿ ನಡೆಸಿದ ಈ ಮಹತ್ವದ ಪ್ರಯತ್ನಕ್ಕೆ ಮತದಾರರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮತದಾರರು ಜಿಲ್ಲೆಯಲ್ಲಿನ ಒಂದೇ ಕುಟುಂಬದ ದುರಾಡಳಿತದ ವಿರುದ್ಧ ಮತಚಲಾಯಿಸಿ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಒಬ್ಬ ವಿಕೃತ ಮತ್ತು ದುಷ್ಟ ವ್ಯಕ್ತಿಯನ್ನು ಸೋಲಿಸಿ ಮಹಿಳೆಯರ ಘನತೆಯನ್ನು ಉಳಿಸಿ ಹಾಸನದ ಗೌರವವನ್ನು ಎತ್ತಿಹಿಡಿದ ಕಾರಣಕ್ಕೆ ನಮ್ಮ ಒಕ್ಕೂಟದ ಪರವಾಗಿ ಜನರಿಗೆ ಧನ್ಯವಾದ ಸಲ್ಲಿಸುತ್ತಿದ್ದೇವೆ’ ಎಂದು ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಸೋಮಶೇಖರ್, ರಾಜಶೇಖರ್, ಅಜಾದ್ ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಾಶೀರ್ ಅಹಮದ್, ಎಚ್.ಕೆ.ಸಂದೇಶ್, ಅಬ್ದುಲ್ ಸಮಾದ್, ಟಿ.ಆರ್.ವಿಜಯಕುಮಾರ್, ರಾಜು ಗೊರೂರು, ಇರ್ಷಾದ್ ಇತರರು ಇದ್ದರು. ಪಟಾಕಿ ಹೊಡೆದು ಸಿಹಿ ಹಂಚಿ ಕಾಂಗ್ರೆಸ್ ಸಂಭ್ರಮಚನ್ನರಾಯಪಟ್ಟಣ: ಲೋಕಸಭಾ ಚುನಾವಣೆಯಲ್ಲಿ ಹಾಸನದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ಗೆಲುವಿನ ಹಿನ್ನೆಲೆ ಪಟ್ಟಣದ ಕೆ. ಆರ್.ಸರ್ಕಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಹೊಡೆದು, ಸಿಹಿ ಹಂಚಿ ಗೆಲುವಿನ ಸಂಭ್ರಮವನ್ನು ಆಚರಿಸಿದರು.ಇದೇ ಸಂದರ್ಭದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಸಿ.ಜಿ.ರವಿ ಮಾತನಾಡಿ, ಜನಪರ ಒಕ್ಕೂಟದ ವೇದಿಕೆ ಬೆಂಬಲ ಸೂಚಿಸಿದ ಪರಿಣಾಮ ಶ್ರೇಯಸ್ ಪಟೇಲ್‌ಗೆ ತಾಲೂಕಿನಲ್ಲಿ ಅನುಕೂಲವಾಗಿದ್ದು, ಜಿಲ್ಲೆಯ ಜನತೆ ದೇವೇಗೌಡರ ಕುಟುಂಬಕ್ಕೆ ತಕ್ಕ ಪಾಠವನ್ನು ಕಲಿಸಿದ್ದಾರೆ. ಏಕೆಂದರೆ ರಾಜಕೀಯದಲ್ಲಿ ೩೦ ವರ್ಷಗಳಿಂದ ಕಾಂಗ್ರೆಸ್ ಪಕ್ಷವು ಜಿಲ್ಲೆಯಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿರಲಿಲ್ಲ. ಆದರೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮಾಡಿದಂತಹ ಲೈಂಗಿಕ ದೌರ್ಜನ್ಯ ಕಾಮ ಪುರಾಣ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆ ಇವರಿಗೆ ತಕ್ಕ ಪಾಠವನ್ನು ಕಲಿಸಿದ್ದಾರೆ ಎಂದು ಹೇಳಿದರು. ಶ್ರೇಯಸ್ ಪಟೇಲ್ ಒಬ್ಬ ಅನಾಥ ಹುಡುಗ. ಹಾಸನ ಜನತೆ ಒಬ್ಬ ಒಳ್ಳೆ ಯುವಕನನ್ನು ಆಯ್ಕೆ ಮಾಡಿದ್ದು ಇಡೀ ದೇಶಕ್ಕೆ ಗೊತ್ತಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸದೃಡವಾಗಿದೆ ಎಂದು ಮತ್ತೊಮ್ಮೆ ಸಾಬೀತಾಗಿದೆ ಎಂದರು.ರೈತ ಸಂಘದ ಮಹಿಳಾ ರಾಜ್ಯ ಉಪಾಧ್ಯಕ್ಷೆ ಪ್ರೇಮಮ್ಮ, ಮಂಜೇಗೌಡ ಜೋಗಿಪುರ, ಪ್ರಸನ್ನ, ರವಿ ಇದ್ದರು.