ವಿಜೃಂಭಣೆಯ 136ನೇ ಶ್ರೀರಾಮೋತ್ಸವದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನ

KannadaprabhaNewsNetwork |  
Published : Apr 16, 2026, 01:15 AM IST
33 | Kannada Prabha

ಸಾರಾಂಶ

ಮೈಸೂರಿನ ಶ್ರೀರಾಮಪೇಟೆಯಲ್ಲಿ ಇರುವ ಶ್ರೀ ರಾಮಾಭ್ಯುದಯ ಸಭಾ ಚಾರಿಟಬಲ್‌ ಟ್ರಸ್ಟ್‌ನ ವತಿಯಿಂದ 136ನೇ ಶ್ರೀರಾಮೋತ್ಸವದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ಮೊದಲ ದಿನ ಶ್ರೀರಾಮನವಮಿ ಅಂಗವಾಗಿ ರಾಮಮಂದಿರದಲ್ಲಿ ಬೆಳಗ್ಗೆ ಧಾರ್ಮಿಕ ಪೂಜಾ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿತು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನ ಶ್ರೀರಾಮಪೇಟೆಯಲ್ಲಿ ಇರುವ ಶ್ರೀ ರಾಮಾಭ್ಯುದಯ ಸಭಾ ಚಾರಿಟಬಲ್‌ ಟ್ರಸ್ಟ್‌ನ ವತಿಯಿಂದ 136ನೇ ಶ್ರೀರಾಮೋತ್ಸವದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು.

ಮೊದಲ ದಿನ ಶ್ರೀರಾಮನವಮಿ ಅಂಗವಾಗಿ ರಾಮಮಂದಿರದಲ್ಲಿ ಬೆಳಗ್ಗೆ ಧಾರ್ಮಿಕ ಪೂಜಾ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿತು. ನಂತರ ಸಾರ್ವಜನಿಕರಿಗೆ ಪಾನಕ, ಮಜ್ಜಿಗೆ ವಿತರಿಸಲಾಯಿತು. ಅಂದು ಸಂಜೆ ಆಲಮ್ಮನವರ ಛತ್ರದ ಆವರಣದಲ್ಲಿ ಸಂಗೀತೋತ್ಸವ-2026 ಆರಂಭವಾಯಿತು. ವಿದುಷಿ ಸೂರ್ಯಗಾಯತ್ರಿ ಅವರ ಹಾಡುಗಾರಿಕೆ ನೆರೆದಿದ್ದ ಅಪಾರ ವರ್ಗದ ಶ್ರೋತೃಗಳನ್ನು ರಂಜಿಸಿತು.

ಎರಡನೇ ದಿನ ವಿದ್ವಾನ್‌ ರಾಮಕೃಷ್ಣಮೂರ್ತಿ ಅವರ ಹಾಡುಗಾರಿಕೆಗೂ ಕೂಡಾ ಅಧಿಕ ಸಂಖ್ಯೆಯಲ್ಲಿ ಸಂಗೀತಾಸಕ್ತರು ನೆರೆದಿದ್ದರು. ಮೂರನೇ ದಿನ ಸೀತಾಕಲ್ಯಾಣ ರಾಮಮಂದಿರದಲ್ಲಿ ನೆರವೇರಿತು. ಅದೇ ದಿನ ಸಂಜೆ ವಿದ್ವಾನ್‌ ಆನೂರು ಅನಂತಕೃಷ್ಣ ಶರ್ಮ ಹಾಗೂ ವೃಂದದವರಿಂದ ಲಯಲಾವಣ್ಯ, ತಾಳವಾದ್ಯಗಳ ಕಛೇರಿ ವಿಶೇವಾಗಿ ನಡೆಯಿತು.

ನಾಲ್ಕನೇ ದಿನ ಸಂಗೀತ ಕಲಾನಿಧಿ ಡಾ. ಜಯಂತಿ ಕುಮರೇಶ್‌ ಅವರ ವೀಣೆ ಹಾಗೂ ವಿದುಷಿ ಅಕ್ಕರೈ ಶುಭುಲಕ್ಷ್ಮಿ ಅವರ ಪಿಟೀಲು ಜುಗಲ್‌ ಬಂಧಿ ಕಾರ್ಯಕ್ರಮ ಹಾಗೂ ಈ ಸಾಲಿನ ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯ ಸಂಗೀತ ಕಲಾನಿಧಿ ಗೌರವಕ್ಕೆ ಪಾತ್ರರಾದ ಡಾ. ಜಯಂತಿ ಕುಮರೇಶ್‌ ಅವರಿಗೆ ಸಭಾದ ವತಿಯಿಂದ ಸನ್ಮಾನ ಏರ್ಪಾಡಾಗಿತ್ತು. ಅಂದಿನ ಈ ಎರಡೂ ಕಾರ್ಯಕ್ರಮಗಳಿಗೂ ಸಂಗೀತ ಪ್ರಿಯರ ಸ್ಪಂದನೆ ಉತ್ತಮವಾಗಿತ್ತು.

ಐದನೇ ದಿನ ಅಕ್ಕರೈ ಸಹೋದರಿಯರಾದ ವಿದುಷಿ ಅಕ್ಕರೈ ಶುಭಲಕ್ಷ್ಮಿ ಅಕ್ಕರೈ ಸ್ವರ್ಣಲತ ಅವರ ದ್ವಂದ್ವ ಹಾಡುಗಾರಿಕೆ. ಆರನೇ ದಿನ ವಿದ್ವಾನ್‌ ಸಿಕ್ಕಲ್‌ ಗುರುಚರಣ್‌ ಅವರ ಗಾಯನ- ಈ ಎರಡೂ ಕಾರ್ಯಕ್ರಮಗಳು ಸಂಗೀತ ರಸಿಕರ ಮನ ತಣಿಸಿದವು.

ಏಳನೇ ದಿನ ಹಿಂದೂಸ್ಥಾನಿ ಸಂಗೀತ ರಸಿಕರಿಗೆ ಪದ್ಮಶ್ರೀ ಪಂಡಿತ್‌, ವೆಂಕಟೇಶ್‌ ಕುಮಾರ್‌ ಅವರ ಪಾಂಡಿತ್ಯ ಪೂರ್ಣ ಗಾಯನವನ್ನು ಸವಿಯುವ ಅವಕಾಶ ಕೂಡಿಬಂದಿತ್ತು. ಅದೇ ದಿನ ಮೈಸೂರಿನ ವಿ.ವಿ. ಮೊಹಲ್ಲದ 8ನೇ ಕ್ರಾಸ್‌ ನ ಎಸ್‌.ಪಿವಿಜಿಎಂಸಿ ಟ್ರಸ್ಟ್‌ ನ ಕಾರ್ಯದರ್ಶಿ ಹಾಗೂ ಶ್ರೀರಾಮಾಭ್ಯುದಯ ಸಭಾದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲು ನೆರವು ನೀಡಿದ ಸಿ.ಆರ್‌. ಹಿಮಾಂಶು ಅವರಿಗೆ ಶ್ರೀರಾಮ ಸಂಗೀತ ಸೇವಾ ರತ್ನ ಬಿರುದನ್ನು ನೀಡಿ ಗೌರವಿಸಲಾಯಿತು. ಅಂದಿನ ಈ ಎರಡೂ ಕಾರ್ಯಕ್ರಮಗಳಿಗೂ ಪ್ರೇಕ್ಷಕರು ಅಭೂತಪೂರ್ವ ಪ್ರೋತ್ಸಾಹ ನೀಡಿದರು.

ಎಂಟನೇ ದಿನ ವಿದ್ವಾನ್‌ ಗಿರಿಜಾ ಶಂಕರ್‌ ಸುಂದರೇಶನ್‌ ಅವರ ಹಾಡುಗಾರಿಕೆ, ಒಂಭತ್ತನೇ ದಿನ ತ್ರಿಚೂರ್‌ ಸಹೋದರರಾದ ವಿದ್ವಾನ್‌ ಕೃಷ್ಣ ಮೋಹನ್‌ ಹಾಗೂ ವಿದ್ವಾನ್‌ ರಾಮ್‌ಕುಮಾರ್‌ ಮೋಹನ ಅವರ ದ್ವಂದ್ವ ಹಾಡುಗಾರಿಕೆ ಕೂಡಾ ಪ್ರೇಕ್ಷಕರು ಅಧಿಕ ಸಂಖ್ಯೆಯಲ್ಲಿ ಹಾಜರಿದ್ದರು. ಈ ಎರಡೂ ದಿನ ವಿದ್ವಾನ್‌ ಕೃ. ರಾಮಚಂದ್ರ ಅವರಿಂದ ರಾಮಾಯಣದ ಪ್ರವಚನ ರಾಮಮಂದಿರದಲ್ಲಿ ಏರ್ಪಾಡಾಗಿತ್ತು.

ಹತ್ತನೇ ದಿನ ರಘುಲೀಲ ಸ್ಕೂಲ್‌ ಆಫ್‌ ಮ್ಯೂಸಿಕ್‌ ಅವರಿಂದ ವಿಶೇಷ ಕಾರ್ಯಕ್ರಮ ನಗರ ಸಂಕೀರ್ತನೆಗೆ ಸಾರ್ವಜನಿಕರಿಗೆ ಭಕ್ತಾದಿಗಳಿಂದ ಉತ್ತಮ ಸ್ಪಂದನೆ ದೊರಕಿತು. ಅದೇ ದಿನ ನಡೆದ ವಿದ್ವಾನ್‌ ಸಂದೀಪ್‌ ನಾರಾಯಣ್‌ ಅವರ ವಿದ್ವತ್‌ ಪೂರ್ಣ ಹಾಡುಗಾರಿಕೆ ನೆರೆದಿದ್ದ ಸಹಸ್ರ ಸಂಖ್ಯೆಯ ಪ್ರೇಕ್ಷಕರನ್ನು ಗಂಧರ್ವ ಲೋಕಕ್ಕೆ ಕರೆದೊಯಿತು.

ಹನ್ನೊಂದನೇ ದಿನ ಶ್ರೀ ರಾಮಪಟ್ಟಾಭಿಷೇಕದ ಅಂಗವಾಗಿ ರಾಮಮಂದಿರದಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯಿತು. ಶ ಆಲಮ್ಮನವರ ಛತ್ರದಲ್ಲಿ ಹಾಗೂ ಉಡುಪಿ ಶ್ರೀ ಕೃಷ್ಣಮಂದಿರದಲ್ಲಿ ಪ್ರಸಾದ ಸಂತರ್ಪಣೆ ಕಾರ್ಯಕ್ರಮ ನಡೆಯಿತು.ರಾಮಮಂದಿರದ ಆವರಣದಲ್ಲಿ ಶ್ರೀಪ್ರದ ಅವರ ವೀಣಾವಾದನ, ಹನುಮಂತೋತ್ಸವ- ರಾಜಬೀದಿಗಳಲ್ಲಿ ಮೆರವಣಿಗೆ ಹಾಗೂ ವಿದ್ವಾನ್‌ ಪುರುಷೋತ್ತಮ ಅವರ ನಾದಸ್ವರ ಶಯನೋತ್ಸವದ ಅಂಗವಾಗಿ ವಿದುಷಿ ಅರ್ಚನಾ ಶಿರಿಸಿ ಅವರ ಗಾಯನ, ಒಳಗುಡಿ ಉತ್ಸವದ ಪ್ರಯುಕ್ತವಾಗಿ ಕುಮಾರಿ ಮಾಲಿನಿ ಅವರಿಎದ ಹನುಮದ್ವಿಲಾಸ ಹರಿಕಥೆಯೊಂದಿಗೆ ಈ ಬಾರಿಯ ಶ್ರೀರಾಮೋತ್ಸವದ ಕಾರ್ಯಕ್ರಮಗಳು ಮಂಗಳವಾಯಿತು.

ಏ.21ರಂದು ಶ್ರೀ ಶಂಕರ ಜಯಂತಿಯಂದು ರಾಜಬೀದಿಗಳಲ್ಲಿ ಉತ್ಸವ ನಡೆಯಲಿದೆ ಎಂದು ಸಭಾದ ಅಧ್ಯಕ್ಷ ಡಾ.ಎನ್‌. ಶ್ರೀರಾಮ್‌ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರುದ್ಯೋಗಿಗಳಿಗೆ ಉದ್ಯೋಗ ಮೇಳ ವರದಾನ
ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕೆರೆಗಳ ಪಾತ್ರ ಅತಿಮುಖ್ಯ