ಕನ್ನಡಪ್ರಭ ವಾರ್ತೆ ಜಮಖಂಡಿ
ಮಂಗಳವಾರ ಬೆಳಗ್ಗೆ ೧೧.೩೦ರ ಸುಮಾರಿಗೆ ೨೨ನೇ ಗೇಟ್‌ನ ಕೆಳಭಾಗ ಮುರಿದ ಪರಿಣಾಮ ನೀರು ಪೋಲಿಸ್ ಒತ್ತಡದಿಂದ ಇಡೀ ಗೇಟ್ ಮುರಿದಿದೆ. ತಕ್ಷಣ ಎಚ್ಚೆತ್ತ ನೀರಾವರಿ ಇಲಾಖೆ ಅಧಿಕಾರಿಗಳ ತಂಡವು ಮುಂಜಾಗ್ರತಾ ಕ್ರಮವಾಗಿ ಗೇಟ್ ಅಳವಡಿಕೆಯ ವಿಶೇಷ ತಜ್ಞರು, ಸಿಬ್ಬಂದಿಗಳೊಂದಿಗೆ ಗೇಟ್ ಅಳವಡಿಕೆ ಕಾರ್ಯದಲ್ಲಿ ತೊಡಗಿದ್ದಾರೆ.
ವಿಷಯ ತಿಳಿದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಜಿಲ್ಲಾ ಅಧಿಕಾರಿಗಳೊಂದಿಗೆ ಸ್ಥಳಕ್ಕಾಗಮಿಸಿ ಪರಿಸ್ಥಿತಿ ಅವಲೋಕಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೂಡಲೇ ಗೇಟ್ ಅಳವಡಿಸಲು ಕ್ರಮ ಜರುಗಿಸಲಾಗುತ್ತದೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದರು.ಗೇಟ್ ಅಳವಡಿಕೆಗೆ ಆಂಧ್ರಪ್ರದೇಶದ ತಜ್ಞರ ತಂಡ ಸ್ಥಳಕ್ಕೆ ಆಗಮಿಸಿದ್ದು, 3-4 ಗಂಟೆಗಳಲ್ಲಿ ಹೊಸ ಗೇಟ್ ಅಳವಡಿಸುತ್ತೇವೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ 0.65 ಅಥವಾ0.75 ಟಿಎಂಸಿ ಅಷ್ಟು ನೀರು ನದಿಪಾತ್ರಕ್ಕೆ ಹರಿದು ಹೋಗಲಿದೆ. ಸುಮಾರು 5 ಸಾವಿರ ಕ್ಯುಸೆಕ್ ನೀರು ಹರಿಯುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮುಖ್ಯ ಇಂಜಿನಿಯರ್‌ಗಳು, ಕಾರ್ಯದರ್ಶಿಗಳು ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದರು.ಗೇಟ್ ಕಳಚಿದೆ ಎಂಬ ಸುದ್ದಿ ಕೇಳಿ ಆತಂಕ ಉಂಟಾಗಿತ್ತು. ಬಹಳಷ್ಟು ಪ್ರಮಾಣದಲ್ಲಿ ನೀರು ಹರಿದು ಹೋದರೆ ಜಲಾಶಯದ ಹಿಂಭಾಗದ ಗ್ರಾಮಗಳ ರೈತರಿಗೆ ತೊಂದರೆ ಆಗಬಹುದು ಎಂಬ ಆತಂಕವಿತ್ತು. ಆದರೆ ಅಷ್ಟೊಂದು ನೀರು ಹೋಗಲ್ಲ. 5 ಸಾವಿರ ಕ್ಯುಸೆಕ್ ನೀರು ಹರಿದು ಹೋಗಲಿದೆ ಎಂದು ತಜ್ಞರು ಹೇಳಿದ್ದು, ರೈತರು ಆತಂಕ ಪಡಬೇಕಿಲ್ಲ ಎಂದು ತಿಳಿಸಿದರು. ಅಧಿಕಾರಿಗಳಿಗೆ ಶೀಘ್ರ ಗೇಟ್ ಅಳವಡಿಸುವಂತೆ ಆದೇಶ ನೀಡಿದ್ದೇನೆ ಎಂದು ತಿಳಿಸಿದರು. ರಬಕವಿ-ಬನಹಟ್ಟಿ ತಹಸೀಲ್ದಾರ ಗಿರೀಶ ಸ್ವಾದಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.ಸ್ಥಳಿಯ ಅಧಿಕಾರಿಗಳ ಸಹಕಾರ ದೊಂದಿಗೆ ಆಂಧ್ರಪ್ರದೇಶದಿಂದ ಆಗಮಿಸಿರುವ ತಜ್ಞರ ತಂಡ ಗೇಟ್ ಅಳವಡಿಕೆ ಕಾರ್ಯ ನಡೆಸಿದೆ. ಸ್ಥಳದಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗಿದ್ದು, ರಾತ್ರಿವರೆಗೆ ಗೇಟ್ ಅಳವಡಿಕೆ ನಡೆಯಲಿದೆ. ಇದುವರೆಗೆ ಸುಮಾರು 0.3 ಟಿಎಂಸಿ ಅಷ್ಟು ನೀರು ನದಿಯ ಪಾತ್ರಕ್ಕೆ ಹರಿದು ಹೋಗಿದ್ದು, ರಾತ್ರಿಯ ಹೊತ್ತಿಗೆ ಗೇಟ್‌ಅಳವಡಿಕೆ ಕಾರ್ಯ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸವಿದೆ.
- ಬಸು ಮಾಳಿ ಸಹಾಯಕ ಇಂಜಿನಿಯರ್ ಹಿಪ್ಪರಗಿ ಬ್ಯಾರೇಜ್