ಕನ್ನಡಪ್ರಭ ವಾರ್ತೆ ಮೇಲುಕೋಟೆಮೇಲುಕೋಟೆ ಬೆಟ್ಟದ ಶ್ರೀಯೋಗಾನರಸಿಂಹ ಸ್ವಾಮಿ ದೇವಾಲಯದ ಚಿಕ್ಕಗೋಪುರಕ್ಕೆ ತೆಂಗಲೆನಾಮ ಹಾಕುವ ಮೂಲಕ 52 ವರ್ಷಗಳ ವಿವಾದ ತಾರ್ಕಿಕ ಅಂತ್ಯ ಕಂಡಂತಾಗಿದೆ.
ಚಿಕ್ಕಗೋಪುರಕ್ಕೆ ವಡಗಲೆನಾಮ ಹಾಕಿದ್ದರಿಂದ ವಿವಾದವಾಗಿ ಪ್ರಕರಣ 1973ರಲ್ಲಿ ಹೈಕೋರ್ಟ್ ಗೆ ತಲುಪಿತ್ತು. ಹೈಕೋರ್ಟ್ ಪ್ರಕರಣವನ್ನು ಪಾಂಡವಪುರ ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವಂತೆ ಆದೇಶಿಸಿತ್ತು.
ಮತ್ತೆ ಪಾಂಡವಪುರ ಹಿರಿಯ ಶ್ರೇಣಿ ಸಿವಿಲ್ ಮತ್ತು ಜೆಎಂಎಪ್‌ಸಿ ನ್ಯಾಯಾಲಯದಲ್ಲಿ ಮೇಲ್ಮನವಿ ದಾಖಲಾಗಿ 22 ವರ್ಷಗಳ ಸುದೀರ್ಘ ವಿಚಾರಣೆ ನಂತರ ನ್ಯಾಯಾಲಯ 29 ಪುಟಗಳ ತೀರ್ಪು ನೀಡಿ ವಡಗಲೆನಾಮ ತೆಗೆದು ಚಿಕ್ಕಗೋಪುರಕ್ಕೆ ತೆಂಗಲೆ ನಾಮ ಅಳವಡಿಸುವಂತೆ ಆದೇಶ ಮಾಡಿದೆ.ಜೆಎಂಎಸ್ಸಿ ನ್ಯಾಯಾಲಯದ ಆದೇಶದಂತೆ ಧಾರ್ಮಿಕ ದತ್ತಿ ಆಯುಕ್ತರು ನೀಡಿದ ನಿರ್ದೇಶನದಂತೆ ಗುರುವಾರ ಸಂಜೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್, ಪಾರುಪತ್ತೇಗಾರ ಶ್ರೀಧರ್, ಅರ್ಚಕ ನಾರಾಯಣಭಟ್, ಅಡಿಗೆಮನೆ ಕೈಂಕರ್ಯ ಪರರಾದ ಎಂ.ಕೆ ರಾಮಸ್ವಾಮಿ ಅಯ್ಯಂಗಾರ್, ಅಧ್ಯಾಪಕರಾದ ಶ್ರೀರಂಗಂಶಲ್ವ ನಾರಾಯಣನ್, ವಿದ್ವಾನ್ ಬಿ.ವಿಆನಂದಾಳ್ವಾರ್ ಸಮಕ್ಷಮದಲ್ಲಿ ಯೋಗಾನರಸಿಂಹಸ್ವಾಮಿ ದೇವಾಲಯದ ಒಳಭಾಗದ ಚಿಕ್ಕಗೋಪುರದ ಮೇಲಿದ್ದ ವಡಗಲೆ ನಾಮವನ್ನು ತೆಗೆದು ತೆಂಗಲೆ ನಾಮವನ್ನು ಹಾಕಿಸಿದರು.
ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಾಲಯ ನಾಮದ ವಿವಾದಕ್ಕೆ ತೆರೆ ಎಳೆದಿದ್ದ ಮೈಸೂರಿನ ಮಹಾರಾಜ ಶ್ರೀಕೃಷ್ಣರಾಜ ಒಡೆಯರ್ ಅವರು ದೇವಾಲಯ ತೆಂಗಲೆ ಸಂಪ್ರದಾಯವಾಗಿದ್ದು ದೇವರಿಗೆ ಮತ್ತು ಗೋಪುರಕ್ಕೆ ತೆಂಗಲೆನಾಮ ಹಾಕಬೇಕು ಎಂದು 1814ರ ಸೆಪ್ಟೆಂಬರ್ 5 ಹುಕುಂ ಹೊರಡಿಸಿದ್ದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ತೆಂಗಲೆ ಸಂಪ್ರದಾಯದ ಆರ್.ಕೃಷ್ಣಯ್ಯಂಗಾರ್, ಅಳಹಿಯಮನವಾಳನ್ ಹಾಗೂ ಅಧ್ಯಾಪಕರು ನಿಯಮಬಾಹಿರವಾದ ತಹಸೀಲ್ದಾರ್ ಆದೇಶ ರದ್ದು ಮಾಡಿ ತೆಂಗಲೆ ನಾಮ ಅಳವಡಿಸಬೇಕು ಎಂದು 1973ರಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು.
ಈ ಬಗ್ಗೆ ಪಾಂಡವಪುರ ಹಿರಿಯ ಶ್ರೇಣಿಯ ಸಿವಿಲ್ ಮತ್ತು ಜೆಎಂಎಪ್‌ಸಿ ನ್ಯಾಯಾಲಯದಲ್ಲಿ ಅರ್ಜಿದಾರರು 2002ರಲ್ಲಿ ಮೇಲ್ಮನವಿ ದಾಖಲಿಸಿದ್ದರು. ಹಿರಿಯ ಶ್ರೇಣಿಯ ನ್ಯಾಯಾಲಯ 22 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿ ಚಿಕ್ಕಗೋಪುರದ ಮೇಲೆ ಅಳವಡಿಸಿದ್ದ ವಡಗಲೆನಾಮ ತೆಗೆದು ಹಳೆಯ ಸಂಪ್ರದಾಯದ ತೆಂಗಲೆ ನಾಮ ಹಾಕಬೇಕು ಎಂದು ಆದೇಶ ನೀಡಿದೆ.