ಕನ್ನಡಪ್ರಭ ವಾರ್ತೆ ಬೈಲಹೊಂಗಲ
ನೇಗಿನಹಾಳ ಗ್ರಾಮದ ಶಾಸಕರ ಕಚೇರಿಯಲ್ಲಿ ಚ.ಕಿತ್ತೂರು ಮತ್ತು ಬೈಲಹೊಂಗಲ ಕ್ಷೇತ್ರದ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಸಮನ್ವಯಾಧಿಕಾರಿಗಳ ಕಚೇರಿಯಿಂದ ಆಯೋಜಿಸಿದ್ದ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಮ್ಮ ಕ್ಷೇತ್ರ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಹೆಮ್ಮೆಯ ವಿಷಯ. ಈ ಫಲಿತಾಂಶಕ್ಕೆ ಕಳೆದ ಎರಡು ವರ್ಷಗಳಿಂದ ಹಂತಹಂತವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ತುಬಾಕಿ, ಎಲ್ಲ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ಪರಿಶ್ರಮ ಪಟ್ಟು ಕಲಿತ ವಿದ್ಯಾರ್ಥಿಗಳು ತೋರಿದ ಪರಿಶ್ರಮ ಇಂದು ಯಶಸ್ವಿಯಾಗಿದೆ. ಬೈಲಹೊಂಗಲ ಮತ್ತು ಕಿತ್ತೂರು ತಾಲೂಕುಗಳಿಂದ ಸುಮಾರು 350 ವಿದ್ಯಾರ್ಥಿಗಳು ಸುಮಾರು ಲಕ್ಷ ರೂಪಾಯಿ ನೀಡಿ ಉಡುಪಿ ಮತ್ತು ಮಂಗಳೂರಿನಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ಶಿಕ್ಷಣ ಪಡೆಯುತ್ತಿದ್ದಾರೆ. ಅದೇ, ನಮ್ಮ ಶಾಲೆಗಳಲ್ಲಿ ಕಲಿತರೆ ನಮ್ಮ ತಾಲೂಕಿಗೆ ಕೀರ್ತಿ ಬರುತ್ತದೆ ಮತ್ತು ಉಳಿತಾಯ ಆಗುತ್ತದೆ. ಮುಂದಿನ ನಮ್ಮ ಕ್ಷೇತ್ರದ ಗುರಿ ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆಯಲು ಈಗಿನಿಂದಲೇ ಅಭಿಯಾನ ಪ್ರಾರಂಭಿಸಿದ್ದೇವೆ. ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕಲಾ, ವಿಜ್ಞಾನ, ವಾಣಿಜ್ಯ ಕಲಿಯುವ ಪುಸ್ತಕಗಳನ್ನು ನೀಡಲಾಗುವದು ಎಂದು ಬಾಬಾಸಾಹೇಬ ಪಾಟೀಲ ಹೇಳಿದರು.
ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ, ಶಾಸಕರು ಶಿಕ್ಷಣ ಪ್ರೇಮಿಯಾಗಿದ್ದು, ಅವರ ಶಿಕ್ಷಣ ಕ್ಷೇತ್ರಕ್ಕೆ ಮಾಡಿದ ಪರಿಶ್ರಮ ಸಾರ್ಥಕವಾಗಿದೆ ಎಂದರು.ಹಿರಿಯ ಪತ್ರಕರ್ತ ಈಶ್ವರ ಹೂಟಿ ಮಾತನಾಡಿ, ರಾಜ್ಯದಲ್ಲಿ ಅನೇಕ ಬಿಒಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯಲು ಪ್ರಯತ್ನ ಮಾಡುತ್ತಾರೆ. ಚನ್ನಮ್ಮನ ನಾಡಿನಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಬರಲು ಶಿಕ್ಷಕರ ಶ್ರಮ ಸಾರ್ಥಕವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ಪಾಟೀಲ, ತಹಸೀಲ್ದಾರ್‌ಗಳಾದ ಕೆ.ಆರ್.ಪಾಟೀಲ, ಹಣಮಂತ ಶಿರಹಟ್ಟಿ, ಡಯಟ್ ಪ್ರಾಚಾರ್ಯ ಅಶೋಕಕುಮಾರ ಶಿಂದಗಿ, ಕಿತ್ತೂರು ತಾಪಂ ಇಒ ನಿಂಗಪ್ಪ ಮಸಳಿ, ಬೈಲಹೊಂಗಲ ತಾಪಂ ಇಒ ಸಂಜಯ ಚುನ್ನುರ, ಸಿಪಿಐ ಶಿವಾನಂದ ಗುಡಗನಟ್ಟಿ, ಪ್ರಾಚಾರ್ಯ ಎಂ.ಐ.ಪೂಜಾರ, ಶಂಕರ ಹೊಳಿ, ಸುನೀಲ ಘೇವಾರಿ, ಸಿ.ಬಿ.ಪಾಟೀಲ, ಜೈಸಿದ್ದರಾಮ ಮಾರಿಹಾಳ, ಎಂ.ಎಫ್.ಜಕಾತಿ, ಸಂಗನಗೌಡ ಪಾಟೀಲ ಉಪಸ್ಥಿತರಿದ್ದರು. ಶಿಕ್ಷಕ ಎಂ.ಪಿ.ಕದಂ, ಶಿಕ್ಷಕಿ ಸ್ನೇಹಲ ಪೂಜಾರ ನಿರೂಪಿಸಿದರು.