ಬೆಂಗಳೂರು : ಒಂಟಿಯಾಗಿ ಅಡ್ಡಾಡುವ ಮಹಿಳೆಯರನ್ನು ಅಪ್ಪಿ ಚುಂಬಿಸುತ್ತಿದ್ದ ಬೀದಿ ಕಾಮುಕ ಬಂಧನ

KannadaprabhaNewsNetwork | Updated : Aug 12 2024, 07:58 AM IST

ಸಾರಾಂಶ

ಒಂಟಿಯಾಗಿ ಅಡ್ಡಾಡುವ ಮಹಿಳೆಯರನ್ನು ಅಪ್ಪಿ ಚುಂಬಿಸುತ್ತಿದ್ದ ಬೀದಿ ಕಾಮುಕನೊಬ್ಬ ಸೋಲದೇವನಹಳ್ಳಿ ಠಾಣೆ ಪೊಲೀಸರು ಬಲೆಗೆ ಬಿದ್ದಿದ್ದಾನೆ.

 ಬೆಂಗಳೂರು :  ಒಂಟಿಯಾಗಿ ಅಡ್ಡಾಡುವ ಮಹಿಳೆಯರನ್ನು ಅಪ್ಪಿ ಚುಂಬಿಸುತ್ತಿದ್ದ ಬೀದಿ ಕಾಮುಕನೊಬ್ಬ ಸೋಲದೇವನಹಳ್ಳಿ ಠಾಣೆ ಪೊಲೀಸರು ಬಲೆಗೆ ಬಿದ್ದಿದ್ದಾನೆ.

ಪೀಣ್ಯ 8ನೇ ಮೈಲಿ ಸಮೀಪದ ನಿವಾಸಿ ಬಸವರಾಜು ಬಂಧಿತನಾಗಿದ್ದು, ಆರೋಪಿಯಿಂದ ಬೈಕ್ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಹೆಸರಘಟ್ಟ ಮುಖ್ಯರಸ್ತೆಯ ಪ್ರತಿಷ್ಠಿತ ಖಾಸಗಿ ಕಾಲೇಜು ಸಮೀಪ ಬಿಎಸ್ಸಿ ವಿದ್ಯಾರ್ಥಿಯನ್ನು ಅಪ್ಪಿ ಮುತ್ತಿಟ್ಟು ಆರೋಪಿ ಪರಾರಿಯಾಗಿದ್ದ. ಈ ಕೃತ್ಯದ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತನಿಖೆಗಿಳಿದ ಪೊಲೀಸರು, ಬೈಕ್‌ನ ನೊಂದಣಿ ಸಂಖ್ಯೆ ಹಾಗೂ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆತನನ್ನು ಬಂಧಿಸಿದ್ದಾರೆ.

ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಬಸವರಾಜು, 8ನೇ ಮೈಲಿ ಬಳಿ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದು, ಕುಟುಂಬದ ಜತೆ ಆತ ನೆಲೆಸಿದ್ದ. ಕೆಲ ದಿನಗಳ ಹಿಂದೆ ಬಾಣಂತನಕ್ಕೆ ಬಸವರಾಜು ಪತ್ನಿ ತವರಿಗೆ ತೆರಳಿದ್ದರು. ಒಂಟಿಯಾಗಿದ್ದ ಆತ, ರಸ್ತೆಯಲ್ಲಿ ಏಕಾಂಗಿಯಾಗಿ ಓಡಾಡುವ ಯುವತಿಯರು ಹಾಗೂ ಮಹಿಳೆಯರ ಗುರಿಯಾಗಿಸಿಕೊಂಡು ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಇತ್ತೀಚಿಗೆ ಕಾಲೇಜು ಮುಗಿಸಿಕೊಂಡು ಹೆಸರಘಟ್ಟ ಮುಖ್ಯರಸ್ತೆಯಲ್ಲಿ ತೆರಳುತ್ತಿದ್ದ ಬಿಎಸ್ಸಿ ವಿದ್ಯಾರ್ಥಿನಿಯನ್ನು ಏಕಾಏಕಿ ಅಪ್ಪಿಕೊಂಡು ಚುಂಬಿಸಿ ಬಸವರಾಜ ಪರಾರಿಯಾಗಿದ್ದ. ಈ ಕೃತ್ಯದ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪೊಲೀಸರು, ಬೀದಿ ಕಾಮುಕನಿಗೆ ಹುಡುಕಾಟ ಶುರು ಮಾಡಿದ್ದರು. ಘಟನಾ ಸ್ಥಳ ವ್ಯಾಪ್ತಿಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪಲ್ಸರ್‌ ಬೈಕ್‌ನಲ್ಲಿ ದುಷ್ಕರ್ಮಿಯ ಚಲನವಲನ ಪತ್ತೆಯಾಗಿದೆ. ಈ ವಿಡಿಯೋ ಮತ್ತಷ್ಟು ಕೂಲಂಕಷವಾಗಿ ತಪಾಸಣೆ ನಡೆಸಿದಾಗ ಬೈಕ್‌ ನೊಂದಣಿ ಸಿಕ್ಕಿದೆ. ಈ ಸುಳಿವು ಆಧರಿಸಿ ಪೊಲೀಸರು ಕಾರ್ಯಾಚರಣೆಗಿಳಿದಾಗ ಆರೋಪಿ ಬಲೆಗೆ ಬಿದ್ದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೂರು ಕೊಡಲು ಹಿಂದೇಟು

ವಿದ್ಯಾರ್ಥಿನಿ ಜತೆ ಅನುಚಿತ ವರ್ತನೆಗೂ ಮುನ್ನ ಪೀಣ್ಯದಲ್ಲಿ ಸಹ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ ಬಸವರಾಜ ಅಸಭ್ಯ ನಡೆದುಕೊಂಡಿದ್ದ ಮಾಹಿತಿ ತನಿಖೆಯಲ್ಲಿ ಗೊತ್ತಾಯಿತು. ಆ ಮಹಿಳೆಯನ್ನು ಕರೆಸಿ ಘಟನೆ ಬಗ್ಗೆ ವಿವರ ಪಡೆಯಲಾಯಿತು. ಆಗ ತನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡ ಆರೋಪಿ ಗುರುತು ಪತ್ತೆ ಹಚ್ಚಿದರು. ಆದರೆ ಕೃತ್ಯದ ಬಗ್ಗೆ ದೂರು ಕೊಡಲು ಆ ಮಹಿಳೆ ನಿರಾಕರಿಸಿದರು. ನಾವು ರಕ್ಷಣೆ ಭರವಸೆ ನೀಡಿದರೂ ಆಕೆ ಸಮ್ಮತಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Share this article