ಕುಂಡ್ಯೋಳಂಡ ಕುಟುಂಬಿಕರ ಸಾಧನೆ ಶ್ಲಾಘನೀಯ: ಲೆ.ಕ.ಬಾಳೆಯಡ ಸುಬ್ರಮಣಿ

KannadaprabhaNewsNetwork | Published : May 16, 2024 12:53 AM

ಸಾರಾಂಶ

ಕೊಳಕೇರಿ ಗ್ರಾಮದ ಕುಂಡ್ಯೋಳಂಡ ಕುಟುಂಬಸ್ಥರ ಐನ್ ಮನೆಯಲ್ಲಿ ಬುಧವಾರ ‘ಕುಂಡ್ಯೋಳಂಡ ಹಾಕಿ ಕಾರ್ನಿವಲ್’ಗೆ ನಮನ ಕಾರ್ಯಕ್ರಮ ನಡೆಯಿತು. ಹಾಕಿ ಉತ್ಸವ ನಡೆಸಿ ಗಿನ್ನಿಸ್ ದಾಖಲೆ ನಿರ್ಮಿಸಿದ ಕುಟುಂಬದ ಪರವಾಗಿ ಪಟ್ಟೆದಾರ ಸುಬ್ಬಯ್ಯ ಅವರಿಗೆ ಹಾಕಿಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳು ವಿಶೇಷ ಶೋ ಹಾಕಿ ಸ್ಟಿಕ್ ನೀಡಿ, ಶಾಲು ಹೊದೆಸಿ, ಫಲ ತಾಂಬೂಲ ನೀಡಿ ಗೌರವ ಸಮರ್ಪಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕೊಡವ ಕೌಟುಂಬಿಕ ಹಾಕಿ 24ನೇ ಉತ್ಸವವನ್ನು ವ್ಯವಸ್ಥಿತವಾಗಿ ಆಯೋಜಿಸುವುದರ ಮೂಲಕ ಕುಂಡ್ಯೋಳಂಡ ಕುಟುಂಬಸ್ಥರು ಗಮನಾರ್ಹ ಸಾಧನೆ ಮಾಡಿದ್ದಾರೆ. ದೇಶದ ಯಾವುದೇ ಮೂಲೆಗೆ ತೆರಳಿದರೂ ಹಾಕಿ ಉತ್ಸವದ ಮಾತು ಕೇಳಿ ಬರುತ್ತಿದೆ. ಹಾಕಿ ಉತ್ಸವದ ಮೂಲಕ ಗಿನ್ನಿಸ್ ದಾಖಲೆಗೆ ಸೇರ್ಪಡೆ ಮಾಡಲು ಕಾರಣಕರ್ತರಾದ ಕುಂಡ್ಯೋಳಂಡ ಕುಟುಂಬಸ್ಥರ ಕಾರ್ಯ ಶ್ಲಾಘನೀಯ ಎಂದು ಒಲಂಪಿಯನ್, ಲೆಫ್ಟಿನಲ್ ಕರ್ನಲ್ ಬಾಳೆಯಡ ಸುಬ್ರಮಣಿ ಹೇಳಿದ್ದಾರೆ.

ಕೊಳಕೇರಿ ಗ್ರಾಮದ ಕುಂಡ್ಯೋಳಂಡ ಕುಟುಂಬಸ್ಥರ ಐನ್ ಮನೆಯಲ್ಲಿ ಬುಧವಾರ ಆಯೋಜಿಸಲಾಗಿದ್ದ ‘ಕುಂಡ್ಯೋಳಂಡ ಹಾಕಿ ಕಾರ್ನಿವಲ್’ಗೆ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕುಂಡ್ಯೋಳಂಡ ಕುಟುಂಬ ಸಣ್ಣ ಕುಟುಂಬವಾದರೂ ಅವರ ಸಾಧನೆ ದೊಡ್ಡದು. ದೇಶ-ವಿದೇಶಗಳಲ್ಲಿ ಕೌಟುಂಬಿಕ ಹಾಕಿಯ ಖ್ಯಾತಿ ಹಬ್ಬಿರುವುದು ಶ್ಲಾಘನೀಯ ಎಂದರು.

ರಾಷ್ಟ್ರೀಯ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ ಮಾತನಾಡಿ, ಪುಟ್ಟ ಜಿಲ್ಲೆ ಕೊಡಗಿನಲ್ಲಿ ಎಲ್ಲಾ ಸಂಘ ಸಂಸ್ಥೆಗಳನ್ನು ಜೊತೆಗೂಡಿಸಿ ಹಾಕಿ ಕೂರ್ಗ್, ಹಾಕಿ ಕರ್ನಾಟಕ, ಹಾಕಿ ಇಂಡಿಯಾ ಸೇರಿದಂತೆ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವಂತಹ ಕಾರ್ಯ ಮಾಡಿದ ಕುಂಡ್ಯೋಳಂಡ ಕುಟುಂಬಸ್ಥರ ಕಾರ್ಯ ಶ್ಲಾಘನೀಯ. ಮುಂದೆ ಹಾಕಿ ಉತ್ಸವ ಆಯೋಜಿಸಲಿರುವ ಕುಟುಂಬಗಳಿಗೂ ಇದು ಮಾರ್ಗದರ್ಶಿ ಎಂದರು.

ಕೊಡಗಿನ ಹಾಕಿಗೆ ಕುಟುಂಬದ ಕೊಡುಗೆ ಬಹಳಷ್ಟು ಸಂತಸ ತಂದಿದೆ. ಹಲವು ರಾತ್ರಿಗಳು ನಿದ್ರೆಗೆಟ್ಟು ಶ್ರಮಿಸಿದ ಈ ಕುಟುಂಬಕ್ಕೆ ಹಾಕಿ ಪಟುಗಳು ಐನ್ ಮನೆಗೆ ಬಂದು ಗೌರವ ಸಲ್ಲಿಸಿದ್ದಾರೆ. ಕುಂಡ್ಯೋಳಂಡ ಕುಟುಂಬವು ಕೊಡಗಿನ ಹಾಕಿಗೆ ದಾರಿದೀಪವಾಗಿದ್ದು, ಇತರ ಕುಟುಂಬಗಳು ಇದೇ ರೀತಿ ಕೈಹಿಡಿದು ಕೊಡಗಿನ ಹಾಕಿಯನ್ನು ಮುನ್ನಡೆಸಲಿ ಎಂದರು.

ಹಾಕಿ ಉತ್ಸವ ಸಮಿತಿ ಅಧ್ಯಕ್ಷ ರಮೇಶ್ ಮುದ್ದಯ ಮಾತನಾಡಿ, ಹಾಕಿ ಉತ್ಸವ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾದದ್ದು ಇಡೀ ಕೊಡವ ಜನಾಂಗಕ್ಕೆ ಸಿಕ್ಕ ಗೌರವ. ಇದು ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ ಎಂದರು.

ಹಾಕಿ ಉತ್ಸವದ ಸಂಚಾಲಕ ದಿನೇಶ್ ಮಾತನಾಡಿ, ಉತ್ಸವದ ಯಶಸ್ವಿಗೆ ಸಹಕರಿಸಿದ ಎಲ್ಲರನ್ನೂ ಅಭಿನಂದಿಸಿದರು.

ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ಆಯೋಜಿಸಿ ಇತ್ತೀಚೆಗೆ ಗಿನ್ನಿಸ್ ದಾಖಲೆ ನಿರ್ಮಿಸಿದ ಕುಂಡ್ಯೋಳಂಡ ಕುಟುಂಬದವರಿಗೆ, ಉತ್ಸವದಲ್ಲಿ ಸನ್ಮಾನ ಸ್ವೀಕರಿಸಿದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಹಾಕಿ ಆಟಗಾರರು ಶುಭ ಹಾರೈಸಿ ಕುಂಡ್ಯೋಳಂಡ ಕುಟುಂಬದ ಐನ್ ಮನೆಯಲ್ಲಿ ಕುಟುಂಬದವರಿಗೆ ಗೌರವವನ್ನು ಸಲ್ಲಿಸಿದರು. ಕುಟುಂಬದ ಪಟ್ಟೇದಾರ ಸುಬ್ಬಯ್ಯ ಅಧ್ಯಕ್ಷತೆ ವಹಿಸಿದ್ದರು.

ವಿಶ್ವಕಪ್ ಆಟಗಾರ ಕೂತಂಡ ಪೂಣಚ್ಚ, ಅಂತಾರಾಷ್ಟ್ರೀಯ ಹಾಕಿ ಆಟಗಾರ ಚಂದಪಂಡ ಪ್ರಿನ್ಸ್ ಕರುಂಬಯ್ಯ, ಅಂತಾರಾಷ್ಟ್ರೀಯ ಹಾಕಿ ಆಟಗಾರರಾದ ಕರಿನೆರವಂಡ ಸೋಮಣ್ಣ, ಕುಲ್ಲೆಟೀರ ಉತ್ತಯ್ಯ, ರಾಷ್ಟ್ರೀಯ ಹಾಕಿ ಆಟಗಾರರಾದ ಅರೆಯಡ ರವಿ ಅಯ್ಯಪ್ಪ, ಕರ್ತಮಾಡ ರಿಕ್ಕಿ ಗಣಪತಿ, ಕನ್ನಂಬೀರ ಪ್ರವೀಣ್, ಅಂಜಪರವಂಡ ಕಾರ್ಯಪ್ಪ, ಅಂತಾರಾಷ್ಟ್ರೀಯ ತರಬೇತಿದಾರ ಬೊಳ್ಳೇಪಂಡ ಜೆ ಕಾರ್ಯಪ್ಪ ಅನಿಸಿಕೆ ವ್ಯಕ್ತಪಡಿಸಿದರು.

ಹಾಕಿ ಉತ್ಸವ ನಡೆಸಿ ಗಿನ್ನಿಸ್ ದಾಖಲೆ ನಿರ್ಮಿಸಿದ ಕುಟುಂಬದ ಪರವಾಗಿ ಪಟ್ಟೆದಾರ ಸುಬ್ಬಯ್ಯ ಅವರಿಗೆ ಹಾಕಿಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳು ವಿಶೇಷ ಶೋ ಹಾಕಿ ಸ್ಟಿಕ್ ನೀಡಿ, ಶಾಲು ಹೊದೆಸಿ, ಫಲ ತಾಂಬೂಲ ನೀಡಿ ಗೌರವ ಸಮರ್ಪಿಸಿದರು.

ಹೇಮಾ ಪೂವಣ್ಣ ಪ್ರಾರ್ಥಿಸಿದರು. ರಮೇಶ್ ಮುದ್ದಯ್ಯ ಸ್ವಾಗತಿಸಿದರು. ವಿಶು ಪೂವಯ್ಯ ಅತಿಥಿಗಳನ್ನು ಪರಿಚಯಿಸಿದರು. ದಿನೇಶ್ ನಿರೂಪಿಸಿದರು. ಗಣೇಶ್ ಮುತ್ತಪ್ಪ ವಂದಿಸಿದರು.

Share this article