ಅಂಧರ ಕ್ರಿಕೆಟ್‌ನ ಬೆಳಕು ಗಂಗಮ್ಮ!

KannadaprabhaNewsNetwork | Updated : Oct 19 2023, 12:47 AM IST

ಸಾರಾಂಶ

ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮ್ ನಲ್ಲಿ ಈಚೆಗೆ ನಡೆದ ಅಂತಾರಾಷ್ಟ್ರೀಯ ಅಂಧರ ಮಹಿಳಾ ಕ್ರಿಕೆಟ್‌ನ ಭಾರತ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ತ್ರಿಕೋನ ಪಂದ್ಯದಲ್ಲಿ ಪ್ರಮುಖ ಪಾತ್ರವಹಿಸಿ ದೇಶಕ್ಕೆ, ರಾಜ್ಯಕ್ಕೆ, ಹಾವೇರಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಗಂಗಾಧರ ಡಾಂಗೆ ಕನ್ನಡಪ್ರಭ ವಾರ್ತೆ ಕುಂದಗೋಳ ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮ್‌ನಲ್ಲಿ ಈಚೆಗೆ ನಡೆದ ಅಂತಾರಾಷ್ಟ್ರೀಯ ಅಂಧರ ಮಹಿಳಾ ಕ್ರಿಕೆಟ್‌ನಲ್ಲಿ ಭಾರತ ತಂಡದ ಉಪನಾಯಕಿಯಾಗಿ ಪ್ರತಿನಿಧಿಸಿ ಚಿನ್ನದ ಪದಕ ಪಡೆದ ಕೀರ್ತಿ ಶಿಶುನಾಳ ಗ್ರಾಮದ ಗಂಗವ್ವ ಹರಿಜನ ಅವರಿಗೆ ಸಲ್ಲುತ್ತದೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುನಾಳ ಗ್ರಾಮವೆಂದರೆ ಯಾರಿಗೆ ಗೊತ್ತಿಲ್ಲ. ಇದು ಸಂತ ಕವಿ ಶಿಶುನಾಳ ಶರೀಫರು ನೆಲೆಸಿದ ಗ್ರಾಮ. ಗ್ರಾಮದ ಕುವರಿ ಗಂಗವ್ವ ಅಂತಾರಾಷ್ಟ್ರೀಯ ಅಂಧರ ಮಹಿಳಾ ಕ್ರಿಕೆಟ್‌ನಲ್ಲಿ ಸಾಧನೆ ತೋರಿದ್ದಾಳೆ. ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮ್ ನಲ್ಲಿ ಈಚೆಗೆ ನಡೆದ ಅಂತಾರಾಷ್ಟ್ರೀಯ ಅಂಧರ ಮಹಿಳಾ ಕ್ರಿಕೆಟ್‌ನ ಭಾರತ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ತ್ರಿಕೋನ ಪಂದ್ಯದಲ್ಲಿ ಪ್ರಮುಖ ಪಾತ್ರವಹಿಸಿ ದೇಶಕ್ಕೆ, ರಾಜ್ಯಕ್ಕೆ, ಹಾವೇರಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕಷ್ಟದಲ್ಲಿ ನಡೆದ ದಾರಿ: ಗಂಗವ್ವ ಚಿಕ್ಕವಳಿದ್ದಾಗ ಪೌಚ್‌ನಲ್ಲಿದ್ದ ಸುಣ್ಣ ಆಕಸ್ಮಿಕವಾಗಿ ಬಲಭಾಗದ ಕಣ್ಣಿನಲ್ಲಿ ಬಿದ್ದು ಸಂಪೂರ್ಣವಾಗಿ ಬಲಗಣ್ಣಿನ ದೃಷ್ಟಿಯನ್ನೇ ಕಳೆದುಕೊಳ್ಳುವುದರ ಜೊತೆಗೆ ಎಡಗಣ್ಣಿನ ದೃಷ್ಟಿಯೂ ಕಡಿಮೆಯಾಯಿತು. ಗಂಗವ್ವ ಶಿಶುನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದಾಗ ಶಿಕ್ಷಕಿ ವಿಜಯಲಕ್ಷ್ಮೀ ಹಿರೇಮಠ ಮಾರ್ಗದರ್ಶನದಲ್ಲಿ ಹಾವೇರಿ ಜ್ಞಾನಜ್ಯೋತಿ ಅಂಧ ಮಕ್ಕಳ ಶಾಲೆಗೆ ಸೇರಿಸಿ ಅಲ್ಲಿ 10ನೇ ತರಗತಿ ವರೆಗೆ ವ್ಯಾಸಂಗ ಮಾಡಿದರು. ನಂತರ ರಾಣಿಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿದ್ದಾಗ ಕ್ರಿಕೆಟ್ ಆಡುತ್ತಿದ್ದ ಅಂಧ ವಿದ್ಯಾರ್ಥಿಗಳನ್ನು ನೋಡಿ ತಾನು ಇವರೊಂದಿಗೆ ಆಟವಾಡಬೇಕೆಂಬ ಛಲ ಹೊಂದಿ ಕ್ರಿಕೆಟ್‌ ಮೈದಾನಕ್ಕೆ ಕಾಲಿಟ್ಟರು. ಮೊದಲಿಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಗಂಗವ್ವಳನ್ನು ಪಂದ್ಯದಿಂದ ದೂರಸರಿಸಲು ಯತ್ನಿಸುತ್ತಾರೆ. ಆದರೆ, ಛಲಬಿಡದೇ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುತ್ತಾಳೆ. ಇವಳ ಉತ್ಸಾಹ ಕಂಡ ಶಿಕ್ಷಕರು ಕ್ರಿಕೆಟ್ ಪಂದ್ಯದಲ್ಲಿ ನಿರ್ಣಾಯಕಳನ್ನಾಗಿ ನಿಲ್ಲಿಸುತ್ತಾರೆ. ದಿನ ಕಳೆದಂತೆ ಕ್ರಿಕೆಟ್‌ನಲ್ಲಿ ತರಬೇತಿ ಪಡೆದು ಅತ್ತುತ್ತಮ ಕ್ರೀಡಾಪಟುವಾಗಿ ಶಿಕ್ಷಕರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಇವಳ ಪ್ರತಿಭೆ ಗುರುತಿಸಿ ಬೆಂಗಳೂರಿಗೆ ರಾಜ್ಯಮಟ್ಟದ ಆಯ್ಕೆಗೆ ಕಳಿಸಲಾಗುತ್ತದೆ. ಅಲ್ಲಿ ಆಯ್ಕೆಯಲ್ಲಿ 7 ಬಾರಿ ವಿಫಲರಾಗಿ ಎಂಟನೇ ಬಾರಿಗೆ ರಾಜ್ಯ ಅಂಧರ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆಯುತ್ತಾರೆ. 2 ವರ್ಷ ರಾಜ್ಯದ ಪರ ಕ್ರಿಕೆಟ್‌ನಲ್ಲಿ ಆಡುತ್ತಾಳೆ. ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್‌ ಪಂದ್ಯಾವಳಿಗೆ ನೇಮಕ ಮಾಡಲಾಗುತ್ತದೆ. ಅಲ್ಲಿಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಉಪನಾಯಕಿಯಾಗಿ ನೇಮಕ ಮಾಡಲಾಗುತ್ತದೆ. ಮೊದಲಿಗೆ 2022ರ ಏಪ್ರಿಲ್ ತಿಂಗಳಲ್ಲಿ ನೇಪಾಳದಲ್ಲಿ ನಡೆದ ಪಂದ್ಯದಲ್ಲಿ ಆಡುತ್ತಾರೆ. 5 ಪಂದ್ಯಗಳಲ್ಲಿ 4 ಪಂದ್ಯಗಳಲ್ಲಿ ಸೋಲುತ್ತಾರೆ. ನಂತರ ಐಬಿಎಸ್ಎ (IBSA) ವಿಶ್ವ ಕಪ್ ನಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿ ಆಸ್ಟ್ರೇಲಿಯಾ, ಭಾರತ ಹಾಗೂ ಇಂಗ್ಲೆಂಡ್ 3 ತಂಡಗಳ ಮಧ್ಯೆ ನಡೆದ ಐದೂ ಪಂದ್ಯಗಳನ್ನು ಗೆದ್ದು ಭಾರತಕ್ಕೆ ಪ್ರಥಮ ಬಾರಿಗೆ ನಡೆದ 2023ರ ಮಹಿಳಾ ಅಂಧರ ವಿಶ್ವಕಪ್‌ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ವಿಶ್ವಕಪ್ ನಲ್ಲಿ ಗಂಗವ್ವಳ ಸಾಧನೆ: - ಭಾರತ-ಇಂಗ್ಲೆಂಡ್ ತಂಡಗಳ ಸೆಮಿ ಫೈನಲ್ ನಲ್ಲಿ 60 ಬಾಲ್‌ಗಳಲ್ಲಿ 117 ರನ್‌ - ಆಡಿದ 5 ಪಂದ್ಯಗಳಲ್ಲಿ 4 ಪಂದ್ಯಗಳಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಗರಿ. - ಮಹಿಳಾ ಅಂಧರ ಕ್ರಿಕೆಟ್ ಇತಿಹಾಸದಲ್ಲಿ ಪ್ರಥಮ ಶತಕದ ಕೀರ್ತಿ. - ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಚಿನ್ನದ ಪದಕದ ಜೊತೆಗೆ ಮ್ಯಾನ್ ಆಫ್ ದಿ ಸಿರಿಜ್.

Share this article