ಮಂಗಳೂರಿನ ಲೇಡಿಗೋಷನ್‌ ಸರ್ಕಾರಿ ಹೆರಿಗೆ ಆಸ್ಪತ್ರೆ ‘ಕಾಯಕಲ್ಪ ಪ್ರಶಸ್ತಿ’ಗೆ ಅರ್ಹತೆ

KannadaprabhaNewsNetwork | Published : Oct 19, 2023 12:46 AM

ಸಾರಾಂಶ

ಕಾಯಕಲ್ಪ ಪ್ರಶಸ್ತಿಗೆ ಅರ್ಹತೆ ಪಡೆದ ಮಂಗಳೂರು ಲೇಡಿಗೋಶನ್ನ್‌ ಆಸ್ಪತ್ರೆ
ಕನ್ನಡಪ್ರಭ ವಾರ್ತೆ ಮಂಗಳೂರು ಮಂಗಳೂರಿನ ಲೇಡಿಗೋಷನ್‌ ಸರ್ಕಾರಿ ಹೆರಿಗೆ ಆಸ್ಪತ್ರೆ 2022-23ನೇ ಸಾಲಿನ ರಾಜ್ಯ ಮಟ್ಟದ ಕಾಯಕಲ್ಪ ಪ್ರಶಸ್ತಿಗೆ ಅರ್ಹತೆ ಪಡೆದಿದೆ. ಆರೋಗ್ಯ ಇಲಾಖೆ ಮಂಗಳವಾರ ಪ್ರಕಟಿಸಿದ ಪಟ್ಟಿಯಲ್ಲಿ ಲೇಡಿಗೋಷನ್‌ ಆಸ್ಪತ್ರೆ ಎರಡನೇ ಸ್ಥಾನ ಪಡೆದಿದ್ದು, ಪ್ರಥಮ ರನ್ನರ್‌ ಅಪ್‌ ಗೆದ್ದುಕೊಂಡಿದೆ. ಈ ಆಸ್ಪತ್ರೆಯಲ್ಲಿರುವ ಮೂಲಸೌಕರ್ಯ, ಸ್ವಚ್ಛತೆ, ರೋಗಿಗಳ ಜತೆಗಿನ ಒಡನಾಟ ಸೇರಿದಂತೆ ಜನಸ್ನೇಹಿ ಆಡಳಿತ ಹಾಗೂ ಅಭಿವೃದ್ಧಿಯ ಮಾನದಂಡದಲ್ಲಿ ಈ ಆಯ್ಕೆ ನಡೆಸಲಾಗಿದೆ. ಆಸ್ಪತ್ರೆಯ ಆಂತರಿಕ ಮೌಲ್ಯಮಾಪನ ಜತೆಗೆ ಹೊರಗಿನ ಮೌಲ್ಯಮಾಪನವೂ ಅತ್ಯುತ್ತಮ ಆಸ್ಪತ್ರೆ ಪ್ರಶಸ್ತಿಗೆ ಕಾರಣವಾಗಿದೆ. ಆಸ್ಪತ್ರೆಗೆ ಹೊಸ ರೂಪ ಕೊಡುವ ಯೋಜನೆಯ ಅನುಷ್ಠಾನ ಹಾಗೂ ಕಾರ್ಯದಕ್ಷತೆ ರಾಜ್ಯ ಮಟ್ಟದ ಪ್ರಶಸ್ತಿಗೆ ಕೊಂಡೊಯ್ದಿದೆ. ಬೆಂಗಳೂರು ನಗರದ ಟ್ರೂಮಾ ಅಂಡ್‌ ಎಮರ್ಜೆನ್ಸಿ ಕೇರ್ ಸೆಂಟರ್‌ 93.80 ಸ್ಕೋರ್‌ನಲ್ಲಿ ಪ್ರಥಮ ಪ್ರಶಸ್ತಿ ಲಭಿಸಿದೆ. ಲೇಡಿಗೋಷನ್‌ ಆಸ್ಪತ್ರೆ 91.15 ಸ್ಕೋರ್‌ ಪಡೆದು ದ್ವಿತೀಯ ಪ್ರಶಸ್ತಿ ಗಳಿಸಿದೆ. ಮೊದಲ ರನ್ನರ್ ಅಪ್‌ ಪಡೆದ ಏಕೈಕ ಆಸ್ಪತ್ರೆ ಇದಾಗಿದೆ. ಕಳೆದ ವರ್ಷ ಈ ಆಸ್ಪತ್ರೆ 8ನೇ ಸ್ಥಾನ ಪಡೆದಿತ್ತು. ಈ ಬಾರಿ ಏಕಾಏಕಿ ದ್ವಿತೀಯ ಸ್ಥಾನಕ್ಕೆ ಏರಿದೆ. ಎಂಆರ್‌ಪಿಎಲ್‌ ಕಂಪನಿಯ ಸಿಎಸ್‌ಆರ್‌ ನಿಧಿಯಡಿ 300 ಬೆಡ್‌ಗಳ ಸುಸಜ್ಜಿತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇನ್ನೆರೆಡು ಕಟ್ಟಡಗಳೂ ತಲೆ ಎತ್ತಿವೆ. ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಸೇವೆಯೂ ಇಲ್ಲಿ ಲಭಿಸುತ್ತಿದೆ. ದ.ಕ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಎದೆಹಾಲು ಕೇಂದ್ರ, ದಾಖಲೆಯ ಹೆರಿಗೆ ಸೇರಿದಂತೆ ವಿವಿಧ ಚಿಕಿತ್ಸೆಗಳಲ್ಲಿ ಇಲ್ಲಿನ ವೈದ್ಯಕೀಯ ತಂಡ ಮುಂಚೂಣಿಯಲ್ಲಿದೆ.

Share this article