ಕೂಡ್ಲಿಗಿ: ಮಕ್ಕಳಲ್ಲಿ ಸೃಜನಾತ್ಮಕತೆ ಸೃಷ್ಟಿಸುವುದೇ ಶಿಕ್ಷಣದ ಧ್ಯೇಯವಾಗಿದೆ. ಶಿಕ್ಷಕರು ಮಕ್ಕಳಲ್ಲಿಯ ಪ್ರತಿಭೆ ಗುರುತಿಸಿ ಅವರಿಗೆ ಉತ್ತಮ ವೇದಿಕೆ ಕಲ್ಪಿಸುವ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ಕೂಡ್ಲಿಗಿ ಪಪಂ ಅಧ್ಯಕ್ಷ ಕೆ.ಶಿವಪ್ಪ ನಾಯಕ ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಅವರು ಬುಧವಾರ ಪಟ್ಟಣದ ಜ್ಞಾನಭಾರತಿ ವಿದ್ಯಾಮಂದಿರ ಹಾಗೂ ಜ್ಞಾನದೀಪ ಇಂಟರ್ ನ್ಯಾಷನಲ್ ಸ್ಕೂಲ್ ಆಯೋಜಿಸಿದ್ದ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.ಇಂದಿನ ಮಕ್ಕಳಿಗೆ ಅಂಕ ಗಳಿಸುವ ಶಿಕ್ಷಣ ಮಾತ್ರ ಸಿಗುತ್ತಿರುವುದು ಶಿಕ್ಷಣ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಅಂಕ ಗಳಿಕೆಗಿಂತ ಮುಖ್ಯವಾಗಿ ವಾಸ್ತವ ಸಮಾಜದ ಪರಿಚಯ, ವ್ಯಕ್ತಿತ್ವ ನಿರ್ಮಾಣ, ಸಮಾಜಮುಖಿಯಾಗಿ ಮಕ್ಕಳನ್ನು ನಿರ್ಮಾಣ ಮಾಡುವ ಶಿಕ್ಷಣದ ಅಗತ್ಯತೆ ಇದೆ. ಈಗಾಗಿ ಶಿಕ್ಷಣದ ಪರಿಕಲ್ಪನೆ, ವ್ಯಾಖ್ಯಾನಕ್ಕೆ ತಕ್ಕಂತೆ ಇಂದು ಮಕ್ಕಳಿಗೆ ಶಿಕ್ಷಣ ಸಿಗುತ್ತಿಲ್ಲದಿರುವುದು ಖೇದಕರ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಕೆ.ಎಂ. ರವಿಕುಮಾರ್ ಮಾತನಾಡಿ, ಕೂಡ್ಲಿಗಿಯಂತಹ ಗ್ರಾಮೀಣ ಪ್ರದೇಶದಲ್ಲಿ ಉನ್ನತ ಶಿಕ್ಷಣ ಸಿಗಬೇಕೆಂಬ ಮಹತ್ತರ ಉದ್ದೇಶದಿಂದ ಇಲ್ಲಿ ಜಿಲ್ಲಾ ಮಟ್ಟದಲ್ಲಿ ಇರುವ ಶಿಕ್ಷಣದ ಕೋರ್ಸ್ ಗಳನ್ನು ಪ್ರಾರಂಭ ಮಾಡುವುದರ ಮೂಲಕ ಹಳ್ಳಿಗಾಡಿನ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ಅಲೆದಾಡುವುದನ್ನು ತಪ್ಪಿಸಿದೆ. ಜ್ಞಾನಭಾರತಿ ಶಿಕ್ಷಣ ಸಂಸ್ಥೆ ಇಂದು ಪ್ರಬಲವಾಗಿ ಬೆಳೆಯುತ್ತಿರುವುದಕ್ಕೆ ಪೋಷಕರು ವಿದ್ಯಾರ್ಥಿಗಳ ಸಹಕಾರ ಇದೆ ಎಂದರು. ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ ಪೋಷಕರ, ಮುಖ್ಯ ಅತಿಥಿಗಳ ಗಮನ ಸೆಳೆದವು.ಮಧ್ಯಾಹ್ನ ಉಪಹಾರ ಯೋಜನೆಯ ತಾಲೂಕು ಅಧಿಕಾರಿ ಆಂಜನೇಯ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಚಿತ್ರದುರ್ಗ ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಎಂ. ವೀರೇಶ್, ಲೋಕೋಪಯೋಗಿ ಇಲಾಖೆಯ ಎಇಇ ನಾಗನಗೌಡ, ಪಪಂ ಸದಸ್ಯೆ ರೇಣುಕಾ ಎಸ್.ದುರುಗೇಶ್, ಕಸಾಪ ಅಧ್ಯಕ್ಷ ಅಂಗಡಿ ವೀರೇಶ್, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕೆ.ಎಂ. ವೀರೇಶ್ ಇದ್ದರು.
ಕೂಡ್ಲಿಗಿ ಪಟ್ಟಣದ ಜ್ಞಾನಭಾರತಿ ವಿದ್ಯಾಮಂದಿರ, ಜ್ಞಾನದೀಪ ಇಂಟರ್ ನ್ಯಾಷನಲ್ ಸ್ಕೂಲ್ ಆಯೋಜಿಸಿದ್ದ ವಿಜ್ಞಾನ, ಕಲಾ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಪಪಂ ಅಧ್ಯಕ್ಷ ಕೆ.ಶಿವಪ್ಪ ನಾಯಕ ಉದ್ಘಾಟಿಸಿದರು.